ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಶಿಥಿಲಗೊಂಡ ಶಾಲೆ, ಮರುಜೀವಕ್ಕೆ ಮೊರೆ

ಅರ್ಧ ಶತಮಾನ ಪೂರೈಸಿರುವ ಬ್ಯಾಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Published 19 ಮೇ 2024, 6:25 IST
Last Updated 19 ಮೇ 2024, 6:25 IST
ಅಕ್ಷರ ಗಾತ್ರ

ಹಿರಿಯೂರು: ಗಾಳಿ–ಮಳೆಗೆ ಚೆಲ್ಲಾಪಿಲ್ಲಿ ಆಗಿರುವ ಹೆಂಚುಗಳು, ಗೆದ್ದಲು ಹಿಡಿದಿರುವ ಮರದ ತೀರುಗಳು, ಮುಟ್ಟಿದರೆ ಬೀಳುವ ಬಾಗಿಲುಗಳು, ಮುರಿದು ಬಿದ್ದಿರುವ ಕಿಟಕಿ ಬಾಗಿಲುಗಳು....

ಅರ್ಧ ಶತಮಾನ ಪೂರೈಸಿರುವ ತಾಲ್ಲೂಕಿನ ಬ್ಯಾಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 125 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೂರು ಕೊಠಡಿಗಳು ಬಳಕೆಗೆ ಯೋಗ್ಯವಾಗಿದ್ದರೆ, ಇನ್ನುಳಿದ 5 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಯಾವಾಗ ಬೇಕಾದರೂ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ.

15 ವರ್ಷಗಳ ಹಿಂದೆ ಗ್ರಾಮಸ್ಥರ ಮನವಿ ಮೇರೆಗೆ ಆಗಿನ ಸಂಸದ ಎನ್.ವೈ.ಹನುಮಂತಪ್ಪನವರು ನೀಡಿದ್ದ ಅನುದಾನದಲ್ಲಿ 2 ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಒಂದು ಕೊಠಡಿ ಕಚೇರಿಗೆ, ಮತ್ತೊಂದು ಕೊಠಡಿ ಬಿಸಿಯೂಟ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಗ್ರಾಮದ ಲಕ್ಷ್ಮಣಪ್ಪ ಅವರು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾಗ ನಿರ್ಮಿಸಿಕೊಟ್ಟಿದ್ದ ಕೊಠಡಿಯನ್ನು ಗುಂಪು ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಮೂರು ಕೊಠಡಿಗಳಿಂದಲೇ ಸರ್ಕಾರಿ ಶಾಲೆ ಉಸಿರಾಡುತ್ತಿದೆ.

‘ಶಾಲೆಯ ಹಳೆಯ ಕಟ್ಟಡದ ಐದೂ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಗಾಳಿ–ಮಳೆ ಬಂದರೆ ಪಾಠ ಕೇಳುವುದಿರಲಿ, ಸುಮ್ಮನೆ ನೋಡೋಣ ಎಂದು ಒಳ ಹೋದರೂ ಅದೇ ಕ್ಷಣದಲ್ಲಿ ಬೀಳುವ ಸಂಭವವಿದೆ. ಮಳೆ ಬಂದರಂತೂ ಏಳೂ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಮ್ಮ ಓಬಳೇಶ್ ತಿಳಿಸಿದರು.

‘ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಕರೆ ಕೊಡುವವರಿಗೇನೂ ಕಡಿಮೆ ಇಲ್ಲ. ಶಾಲೆಗಳ ಸ್ಥಿತಿ ಹೀಗಿದ್ದರೆ ಯಾವ ಧೈರ್ಯದ ಮೇಲೆ ಪೋಷಕರು ಮಕ್ಕಳನ್ನು ಸೇರಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. ಆದರೆ, ಕೂತು ಪಾಠ ಕೇಳಲು  ಸುಸ್ಥಿತಿಯಲ್ಲಿರುವ ಕೊಠಡಿಗಳಿಲ್ಲ. ಅಪಾಯಕಾರಿಯಾಗಿರುವ ಶಾಲೆ ಕೊಠಡಿಗಳ ಕಡೆ ಮಕ್ಕಳು ಹೋಗದಂತೆ ತಡೆಯುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಏಳು ತರಗತಿಗಳ ವಿದ್ಯಾರ್ಥಿಗಳನ್ನೂ ಒಂದೇ ಕಡೆ ಕೂರಿಸಿ ಎಷ್ಟರಮಟ್ಟಿಗೆ ಗುಣಮಟ್ಟದ ಶಿಕ್ಷಣ ನೀಡಬಹುದು ಎಂಬುದನ್ನು ಶಿಕ್ಷಣ ಸಚಿವರು ಯೋಚಿಸಬೇಕು. ಸರ್ಕಾರಿ ಶಾಲೆಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಶಾಲೆಯ ಹೆಂಚು ತೀರುಗಳು ಮುರಿದು ಬಿದ್ದಿರುವುದು
ಶಾಲೆಯ ಹೆಂಚು ತೀರುಗಳು ಮುರಿದು ಬಿದ್ದಿರುವುದು
ಕುಸಿಯುವ ಸ್ಥಿತಿಯಲ್ಲಿರುವ ಚಾವಣಿ
ಕುಸಿಯುವ ಸ್ಥಿತಿಯಲ್ಲಿರುವ ಚಾವಣಿ
ಶಾಲೆಗೆ ಅಗತ್ಯ ಇರುವಷ್ಟು ಕೊಠಡಿಗಳನ್ನು ಕಟ್ಟಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
-ಉಷಾ, ಮುಖ್ಯ ಶಿಕ್ಷಕಿ
ಹಳೆಯ ಎರಡು ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮೂರು ಕೊಠಡಿಗಳ ದುರಸ್ಥಿಗೆ ಡಿಡಿಪಿಐಗೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
-ಸಿ.ಎಂ. ತಿಪ್ಪೇಸ್ವಾಮಿ, ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT