ಶುಕ್ರವಾರ, ಮೇ 20, 2022
20 °C
ದ್ವಿತೀಯ ಪಿಯು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ

ಪಿಯು ವಿದ್ಯಾರ್ಥಿ ಆತ್ಮಹತ್ಯೆ: ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಮನೋಜ್‌ (18) ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಯ ಹಾಲ್‌ ಟಿಕೆಟ್‌ ನಿರಾಕರಣೆ ಹಾಗೂ ಉಪನ್ಯಾಸಕರ ಥಳಿತವೇ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿದರು.

ವಿದ್ಯಾರ್ಥಿಯನ್ನು ಅವಮಾನಿಸಿದ ಉಪನ್ಯಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಹಪಾಠಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಮನೋಜ್‌ ಶವವನ್ನು ಕಾಲೇಜು ಆವರಣಕ್ಕೆ ತಂದು ಆಕ್ರೋಶ ಹೊರಹಾಕಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ದಂಡಿನಕುರುಬರಹಟ್ಟಿ ಗ್ರಾಮದ ಮನೋಜ್‌ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯು ವಿದ್ಯಾರ್ಥಿ. ಏ.22ರಿಂದ ಆರಂಭವಾಗಲಿರುವ ಅಂತಿಮ ಪರೀಕ್ಷೆಗಗೆ ಸಿದ್ಧತೆ ನಡೆಸಿದ್ದನು. ತರಗತಿಗೆ ನಿಯಮಿತವಾಗಿ ಹಾಜರಾಗದ ಸಬೂಬು ನೀಡಿ ವಿದ್ಯಾರ್ಥಿಗೆ ಹಾಲ್‌ ಟಿಕೆಟ್‌ ವಿತರಣೆ ಮಾಡಿರಲಿಲ್ಲ. ಹಾಲ್‌ ಟಿಕೆಟ್‌ ಪಡೆಯದ ವಿದ್ಯಾರ್ಥಿಗಳು ಸೋಮವಾರ ಕಾಲೇಜಿಗೆ ಭೇಟಿ ನೀಡಿ ಉಪನ್ಯಾಸಕರನ್ನು ಪ್ರಶ್ನಿಸಿದ್ದರು.

‘ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿದವರನ್ನು ಉಪನ್ಯಾಸಕರು ವಿನಾ ಕಾರಣಕ್ಕೆ ಥಳಿಸಿದರು. ಕೂದಲು ಹಿಡಿದು ಕಾರಿಡಾರ್‌ನಲ್ಲಿ ಎಳೆದಾಡಿದರು. ಇದರಿಂದ ಅವಮಾನಗೊಂಡ ಮನೋಜ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಸಹಪಾಠಿಗಳು ಆರೋಪಿಸಿದರು.

‘ಕಾಲೇಜಿನಿಂದ ಮನೆಗೆ ಮರಳಿದ ಮನೋಜ್‌ ಮೌನವಾಗಿದ್ದನು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೋಮವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಆತನನ್ನು ರಕ್ಷಿಸಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ’ ಎಂದು ಮನೋಜ್‌ ಸಹೋದರ ಮಂಜುನಾಥ್‌ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಗುಂಪು ಕಾಲೇಜು ಪ್ರವೇಶಿಸಿ ಉಪನ್ಯಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು.

ಮೊಬೈಲ್‌ ಗೀಳು: ಪ್ರಕರಣ

ಮೊಬೈಲ್‌ ಗೀಳು ಬಿಟ್ಟು ಓದಿಕೊಳ್ಳುವಂತೆ ತಂದೆ ಹೇಳಿದ ಬುದ್ಧಿಮಾತಿನಿಂದ ಮನನೊಂದು ಮನೋಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸೋಮವಾರ ಮನೆಗೆ ಮರಳಿದ ವಿದ್ಯಾರ್ಥಿ ಮೊಬೈಲ್‌ನಲ್ಲಿ ತಲ್ಲೀನನಾಗಿದ್ದನು. ಇದರಿಂದ ಕುಪಿತಗೊಂಡ ಅವರ ತಂದೆ ಮೊಬೈಲ್‌ ಬಿಟ್ಟು ಓದಿಕೊಳ್ಳುವಂತೆ ಬುದ್ಧಿಮಾತು ಹೇಳಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ದೂರು ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು