ಭಾನುವಾರ, ಜನವರಿ 26, 2020
20 °C
ಬೃಹತ್‌ ಕಳ್ಳಸಾಗಣೆ ಪತ್ತೆ ಮಾಡಿದ ಡಿಆರ್‌ಐ

5 ಕೆ.ಜಿ. ಚಿನ್ನ ವಶ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗಣಿ ಉದ್ಯಮದಲ್ಲಿ ಬಳಸುವ ಲೋಹದ ‘ಕನ್ವೆಯರ್‌ ಡ್ರೈವ್‌ ಚೈನ್‌’ನ ಒಳಭಾಗದಲ್ಲಿರಿಸಿ ವಿದೇಶದಿಂದ ಕಳ್ಳಸಾಗಣೆ ಮಾಡಿಕೊಂಡು ಬಂದ 5 ಕೆ.ಜಿ. ಚಿನ್ನವನ್ನು ಸೋಮವಾರ ವಶಪಡಿಸಿಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಈ ಸಂಬಂಧ ಕಂಪನಿಯೊಂದರ ನಿರ್ದೇಶಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ಡಿಆರ್‌ಐ ಅಧಿಕಾರಿಗಳು ಸೋಮವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ₹ 2 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪದ ಮೇಲೆ ಉಡುಪಿಯ ಸ್ವರೂಪ್‌ ಮಿನರಲ್‌ ರಿಸೋರ್ಸಸ್‌ ಕಂಪನಿಯ ನಿರ್ದೇಶಕ ಮನೋಹರ್‌ ಕುಮಾರ್‌ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್‌ ಶ್ರೀಯಾನ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಉಪ ನಿರ್ದೇಶಕ ಶ್ರೇಯಸ್‌ ಕೆ.ಎಂ. ತಿಳಿಸಿದ್ದಾರೆ.

ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮನೋಹರ್‌ ಕುಮಾರ್‌ನನ್ನು ಬೆಂಗಳೂರಿನಲ್ಲಿ ಮತ್ತು ಲೋಹಿತ್‌ನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.

‘ಸ್ವರೂಪ್‌ ಮಿನರಲ್‌ ರಿಸೋರ್ಸಸ್ ಕಂಪನಿ ‘ಮೈನಿಂಗ್‌ ಕನ್ವೇಯರ್‌ ಡ್ರೈವ್‌ ಚೈನ್‌’ ಆಮದು ಮಾಡಿಕೊಂಡಿತ್ತು. ಸರಕು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು. ಅದರೊಳಗೆ ಚಿನ್ನ ಅಡಗಿಸಿಟ್ಟು ತಂದಿರುವ ಮಾಹಿತಿ ಲಭ್ಯವಾಗಿತ್ತು. ಮೇಲ್ನೋಟಕ್ಕೆ ಸಂಶಯ ಬರುವಂತೆ ಇರಲಿಲ್ಲ. ಖಚಿತ ಮಾಹಿತಿ ಆಧರಿಸಿ ಸರಕನ್ನು ಸ್ಕ್ಯಾನ್‌ ಮಾಡಲಾಯಿತು. ಆಗ ದೊರಕಿದ ಮಾಹಿತಿ ಆಧರಿಸಿ ತಾಂತ್ರಿಕ ಸಿಬ್ಬಂದಿ ಮತ್ತು ಲೇಥ್‌ ಬಳಸಿ ಅದನ್ನು ತೆರೆಯಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ಮೈನಿಂಗ್‌ ಕನ್ವೇಯರ್‌ ಬೆಲ್ಟ್‌ನ ಒಳ ಭಾಗದಲ್ಲಿ ಐದು ವೃತ್ತಾಕಾರದ ಚಿನ್ನದ ತಟ್ಟೆಗಳನ್ನು ಅಡಗಿಸಿ ಇಡಲಾಗಿತ್ತು. ಅವುಗಳಲ್ಲಿ 24 ಕ್ಯಾರಟ್‌ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನ ಪತ್ತೆಯಾಯಿತು. ಈ ಚಿನ್ನದ ಒಟ್ಟು ಮೌಲ್ಯ ₹ 2 ಕೋಟಿ ಎಂದು ತಿಳಿಸಿದ್ದಾರೆ.

ಚಿನ್ನ ಕಳ್ಳಸಾಗಣೆಯ ಜಾಲ ಮತ್ತು ಅದರಲ್ಲಿ ಹೂಡಿಕೆ ಮಾಡುತ್ತಿದ್ದವರು ಹಾಗೂ ಈವರೆಗೆ ನಡೆದಿರುವ ಕಳ್ಳಸಾಗಣೆಯ ಒಟ್ಟು ಪ್ರಮಾಣದ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು