ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿ ನೀಡಿ ಕಾಂಗ್ರೆಸ್‌ ನಾಟಕ: ನಳಿನ್‌

ವಲಸೆ ಕಾರ್ಮಿಕರ ಪ್ರತಿಭಟನೆ: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ
Last Updated 9 ಮೇ 2020, 9:17 IST
ಅಕ್ಷರ ಗಾತ್ರ

ಮಂಗಳೂರು: ವಲಸೆ ಕಾರ್ಮಿಕರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಕೊರೊನಾ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಸಂಸದರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ದಿಟ್ಟ ನಿರ್ಣಯಗಳಿಂದ ಕೊರೊನಾ ನಿಯಂತ್ರಣದಲ್ಲಿದೆ. ಆದರೆ, ಲಾಕ್‌ಡೌನ್ ಜಾರಿಯಲ್ಲಿದ್ದರೂ ಮಂಗಳೂರು ರೈಲು ನಿಲ್ದಾಣದಲ್ಲಿ ನೂರಾರು ಮಂದಿ ಹೊರ ರಾಜ್ಯದ ಕಾರ್ಮಿಕರನ್ನು ಸೇರಿಸಿ ಕಾಂಗ್ರೆಸ್ ನಾಯಕರು ಭಾಷಣ ಮಾಡಿದ್ದಾರೆ. ಇದರಿಂದ ಕೊರೊನಾ ಪ್ರಕರಣ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನೇರ ಹೊಣೆ’ ಎಂದು ಹೇಳಿದರು.

ಜಿಲ್ಲಾಡಳಿತ ಯಾವುದೇ ಸೂಚನೆ ನೀಡದಿದ್ದರೂ ಸಾವಿರಾರು ಮಂದಿ ರೈಲು ನಿಲ್ದಾಣದಲ್ಲಿ ಸೇರಲು ಕಾರಣ ಏನು ? ಅವರ ಕೈಗೆ ಘೋಷಣಾ ಫಲಕ ನೀಡಿದವರು ಯಾರು ? ಲಾಕ್‌ಡೌನ್ ಜಾರಿಯಲ್ಲಿದ್ದರೂ ಕಾಂಗ್ರೆಸ್ ನಾಯಕರು ಮೈಕ್ ಹಿಡಿದು ಭಾಷಣ ಮಾಡಿದ್ದು ಏಕೆ? ಇಂತಹ ಕ್ಷುಲ್ಲಕ ರಾಜಕಾರಣ ಮಾಡಿದ ಪರಿಣಾಮವೇ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಲಿ ಎಂದು ಹೇಳಿದರು.

ಹೊರ ರಾಜ್ಯದವರನ್ನು ಕಳುಹಿಸುವ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಹೊರಡಿಸಲಿದೆ. ಸುಳ್ಳು ಸಂದೇಶಗಳಿಗೆ ಕಾರ್ಮಿಕರು ಕಿವಿಗೊಡಬಾರದು. ವಲಸೆ ಕಾರ್ಮಿಕರು ಅನಿವಾರ್ಯವಾದರೆ ಮಾತ್ರ ತಮ್ಮ ಊರಿಗೆ ಹೋಗುವ ನಿರ್ಧಾರ ಕೈಗೊಳ್ಳಿ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಉದ್ಯಮ ಚಟುವಟಿಕೆ ಹಾಗೂ ಅಭಿವೃದ್ದಿ ಕಾಮಗಾರಿಗಳು ಆರಂಭವಾಗಲಿವೆ. ಹಾಗಾಗಿ ಜಿಲ್ಲೆಯಲ್ಲೇ ಇರುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಕಾರ್ಮಿಕರ ಪರದಾಟ

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಉತ್ತರ ಭಾರತದ ಕಾರ್ಮಿಕರ ಪರದಾಟಕ್ಕೆ ಅವಕಾಶ ಮಾಡಿರುವುದು ಸರಿಯಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಬೇರೆ ಎಲ್ಲ ರಾಜ್ಯದಿಂದ ಉತ್ತರ ಭಾರತದ ಕಡೆಗೆ ರೈಲು ಹೋಗುತ್ತದೆ. ಆದರೆ ನಮ್ಮ ರಾಜ್ಯದಿಂದ ಇನ್ನೂ ರೈಲುಗಳ ಸಂಚಾರ ಆರಂಭವಾಗಿಲ್ಲ. ಇದೇ ರೀತಿಯಾದರೆ, ಕಾರ್ಮಿಕರು ಮತ್ತೆ ರಾಜ್ಯಕ್ಕೆ ಬರಲ್ಲ. ರಾಜ್ಯದ ಸಹವಾಸ ಸಾಕು ಎಂದು ಹೋಗುತ್ತಾರೆ ಎಂದರು.

ಹಸಿವಿನಿಂದ ಜನ ರೈಲ್ವೆ ನಿಲ್ದಾಣ ಮುಂದೆ ಕುಳಿತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಸಮಸ್ಯೆ ಕೇಳಿಲ್ಲ. ಕಾರ್ಮಿಕರನ್ನು ಕಳುಹಿಸದೇ ಸತಾಯಿಸಲಾಗುತ್ತಿದೆ. ಇದು ಮಾನವ ಹಕ್ಕು ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT