ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ನಿರ್ಮಾಣಕ್ಕೆ ಇಚ್ಛಾಶಕ್ತಿ: 4 ದಶಕಗಳ ಸಮಸ್ಯೆ ನಿವಾರಣೆ ಸನ್ನಿಹಿತ

Published 24 ಮೇ 2024, 6:40 IST
Last Updated 24 ಮೇ 2024, 6:40 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಪೇಟೆಯಲ್ಲಿ 40 ವರ್ಷಗಳಿಂದ ಸಮಸ್ಯೆಯಾಗಿ ಕಾಡುತ್ತಿದ್ದ, ಕೊಳಚೆ ನೀರು ಹರಿಯದ ಚರಂಡಿ ಸಮಸ್ಯೆ 40 ವರ್ಷಗಳ ಬಳಿಕ ಅಧಿಕಾರಿಯೊಬ್ಬರ ಇಚ್ಛಾಶಕ್ತಿಯಿಂದ ನಿವಾರಣೆಯಾಗುವ ಹಂತದಲ್ಲಿದೆ.

ಉಪ್ಪಿನಂಗಡಿ ಪೇಟೆಯ ಕೊಳಚೆ ನೀರು ಇಲ್ಲಿನ ಸೂರಪ್ಪ ಕಾಂಪೌಂಡ್‌ ದಾಟಿ, ಶೆಣೈ ಆಸ್ಪತ್ರೆ, ಮಾದರಿ ಶಾಲೆಯಾಗಿ ನಟ್ಟಿಬೈಲು ಪ್ರದೇಶವನ್ನು ದಾಟಿ ಕುಮಾರಧಾರಾ ನದಿಯನ್ನು ಸೇರುತ್ತಿತ್ತು. ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡವಾಗಿ ಇದ್ದ ಮೋರಿ ಹೂಳು ತುಂಬಿ ಕೊಳಚೆ ನೀರು, ಮಳೆಗಾಲದ ನೀರು ಹರಿಯದೆ ಕೆರೆಯಂತೆ ನಿಂತು ವರ್ಷ ಪೂರ್ತಿ ಗಬ್ಬು ನಾರುತ್ತಿತ್ತು.

ಈ ದುರ್ನಾತದ ಸಮಸ್ಯೆಯಿಂಂದಾಗಿ ಸ್ಥಳೀಯವಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದವರು ಅಲ್ಲಿಂದ ತೆರಳಿದ್ದರು. ಇದೇ ಕಾರಣಕ್ಕೆ ಇಡೀ ಪ್ರದೇಶ ಜನ ವಸತಿ ಇಲ್ಲದೆ ಬಿಕೋ ಎನ್ನುವಂತಾಯಿತು. ಚರಂಡಿಯಲ್ಲಿ ನೀರು ಹರಿಯದೆ ವಾಣಿಜ್ಯ ಮಳಿಗೆಗಳು ನೆರೆಗೆ ಸಿಲುಕಿ ಅಂಗಡಿ ಮುಂಗಟ್ಟೆಗಳನ್ನು ಬಂದ್ ಮಾಡುವ ಸ್ಥಿತಿ ಕಳೆದ ವರ್ಷದವರೆಗೆ ಸಾಮಾನ್ಯವಾಗಿತ್ತು.

ಸಿಗದ ಸ್ಪಂದನೆ: ಸಮಸ್ಯೆ ಪರಿಹರಿಸುವ ಸಂಬಂಧ ಹಲವು ಗ್ರಾಮ ಸಭೆ, ಜನಸಂಪರ್ಕ ಸಭೆಯಲ್ಲೂ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಶಾಸಕರು, ಸಚಿವರು ಸೇರಿದಂತೆ ಉಪ್ಪಿನಂಗಡಿಗೆ ಭೇಟಿ ನೀಡಿದ್ದ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆಯೂ ಮನವಿ, ಅಹವಾಲು ಸಲ್ಲಿಕೆಯಾಗಿತ್ತು. ಯಾರೂ ಸ್ಪಂದಿಸಿರಲಿಲ್ಲ.

ಸ್ಥಳದಲ್ಲೇ ಪರಿಹಾರದ ಸೂಚನೆ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗಿ ಜನ ಸಮಸ್ಯೆಗೆ ಸಿಲುಕುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪರಿಶೀಲನೆಗಾಗಿ ಮೇ 2ರಂದು ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಬಂದಿದ್ದರು. ಈ ವೇಳೆ ಚರಂಡಿ ಸಮಸ್ಯೆಯ ಬಗ್ಗೆಯೂ ಅವರ ಗಮನ ಸೆಳೆಯಲಾಯಿತು. ಈ ಸಂದರ್ಭ ಹೆದ್ದಾರಿ ಕಾಮಗಾರಿ ನಿರತ ಅಧಿಕಾರಿಗಳಿಗೆ ಹೆದ್ದಾರಿಯ ಸಂಪರ್ಕ ರಸ್ತೆಯಡಿ ಹಾದು ಹೋಗಿರುವ ಚರಂಡಿಯನ್ನು ತೆಗೆದು ದೊಡ್ಡ ಗಾತ್ರದ ಕಾಂಕ್ರೀಟ್ ಚರಂಡಿ ಅಳವಡಿಸಲು ಸೂಚನೆ ನೀಡಿದರು.

‘ಈ ರಸ್ತೆ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕಾಮಗಾರಿ ನಿರತ ಅಧಿಕಾರಿಗಳು ತಿಳಿಸಿದರಾದರೂ, ಸಾರ್ವಜನಿಕರ ಹಿತಕ್ಕಾಗಿ ದೀರ್ಘ ಕಾಲದ ಸಮಸ್ಯೆಯ ನಿವಾರಣೆಗಾಗಿ ಕಾಮಗಾರಿ ನಡೆಸಲು ನಿರ್ದೇಶನ ನೀಡಿದರು. ಈ ಕಾಮಗಾರಿಗೆ ಹದಿನೈದು ದಿನಗಳ ಗಡುವನ್ನೂ ವಿಧಿಸಿ, ಮೇಲ್ವಿಚಾರಣೆಗೆ ಸ್ಥಳೀಯ ಕಂದಾಯ ನಿರೀಕ್ಷಕರನ್ನು, ಪಿಡಿಒ ಅವರನ್ನು ನಿಯೋಜಿಸಿ ಕಾಮಗಾರಿ ಪ್ರಗತಿಯ ವರದಿ ಒಪ್ಪಿಸಬೇಕೆಂದು ತಿಳಿಸಿದ್ದರು.

ನೀಡಿದ ಗಡುವು ದಾಟಿದರೂ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ರಸ್ತೆಯ ಮುಕ್ಕಾಲು ಭಾಗದಲ್ಲಿ ಬೃಹತ್ ಚೌಕಾಕಾರದ ಕಾಂಕ್ರೀಟ್ ಮೋರಿ ಅಳವಡಿಸಲಾಗಿದೆ. ಇದರಿಂದ ತ್ಯಾಜ್ಯ ನೀರು, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿದೆ.

ಸಮಸ್ಯೆಯ ಗಂಭೀರತೆ ಅರ್ಥವಾಗಿತ್ತು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರೊಂದಿಗೆ ಚರ್ಚಿಸಿ ಅವರ ನಿರ್ದೇಶನದಂತೆ ಚತುಷ್ಪಥ ರಸ್ತೆ ಕಾಮಗಾರಿ ನಿರ್ವಹಣೆಯ ಕೆಎನ್ಆರ್ ಸಂಸ್ಥೆಯ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಹಕಾರ ಪಡೆದು ಬೃಹತ್ ಗಾತ್ರದ ಮೋರಿ ಅಳವಡಿಸಲು ಸೂಚಿಸಿದ್ದೆ. ಇದರಲ್ಲಿ ಹೆಚ್ಚುಗಾರಿಕೆ ಇಲ್ಲ ಎಂದು ಉಪ ವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಪ್ರತಿಕ್ರಿಯಿಸಿದ್ದಾರೆ.

30 ಮೀಟರ್ ಉದ್ದ, ₹ 30 ಲಕ್ಷ ವೆಚ್ಚ: ಈ ಕಾಮಗಾರಿ ಅನುಮೋದಿತ ಕಾಮಗಾರಿಯ ವ್ಯಾಪ್ತಿಯಲ್ಲಿ ಇಲ್ಲ. ಅಧಿಕಾರಿಗಳ ಒತ್ತಾಸೆಯಂತೆ ಸುಮಾರು 30 ಮೀಟರ್ ಉದ್ದದ ಬೃಹತ್ ಗಾತ್ರದ ಕಾಂಕ್ರೀಟ್ ಮೋರಿಯ ಕಾಮಗಾರಿಯನ್ನು ಕೆಎನ್ಆರ್ ಸಂಸ್ಥೆ ಹೆಚ್ಚುವರಿಯಾಗಿ ಮಾಡುತ್ತಿದೆ. ಅಂದಾಜು ₹ 30 ಲಕ್ಷ ವೆಚ್ಚವಾಗಲಿದೆ ಎಂದು ಕೆಎನ್‌ಆರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಂದ ಕುಮಾರ್ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಯನ್ನು ಅಧಿಕಾರಿ ಸುಲಭವಾಗಿ ಬಗೆಹರಿಸಿದ್ದಾರೆ. ಆಡಳಿತ ಯಂತ್ರವನ್ನು ಸಮರ್ಪಕವಾಗಿ ಬಳಸುವುದರಿಂದ ಆಗುವ ಪ್ರಯೋಜನಗಳಿಗೆ ಪುತ್ತೂರು ಉಪ ವಿಭಾಗಾಧಿಕಾರಿಯ ಕಾರ್ಯ ವೈಖರಿ ಸಾಕ್ಷಿಯಾಗಿದೆ ಎಂದು ಉಪ್ಪಿನಂಗಡಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ತಿಳಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಕೊಳಚೆ ನೀರು ಹರಿಯುವ ರಾಜಕಾಲುವೆ
ಉಪ್ಪಿನಂಗಡಿಯಲ್ಲಿ ಕೊಳಚೆ ನೀರು ಹರಿಯುವ ರಾಜಕಾಲುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT