ಭಾನುವಾರ, ಆಗಸ್ಟ್ 1, 2021
27 °C
14 ಮನೆಗಳ ಜನರ ಸ್ಥಳಾಂತರ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಭೂ ಕುಸಿತ: ಇಬ್ಬರು ಮಕ್ಕಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯಲ್ಲಿ ಭಾನುವಾರ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ  16 ವರ್ಷದ ಬಾಲಕ ಸಫ್ವಾನ್‌, 10 ವರ್ಷದ ಬಾಲಕಿ ಸಹಾಲಾ ಮೃತಪಟ್ಟಿದ್ದಾರೆ.

ಮಧ್ಯಾಹ್ನ 12.30ರ ಸುಮಾರಿಗೆ ಮಣ್ಣು ಕುಸಿದಿದ್ದು, ಎರಡು ಮನೆಗಳು ಸಂಪೂರ್ಣ ಮಣ್ಣಿನಲ್ಲಿ ಹೂತು ಹೋಗಿದ್ದವು. ಒಂದು ಮನೆಯಲ್ಲಿದ್ದ ಐವರ ಪೈಕಿ ಮೂವರು ಹೊರಗೆ ಓಡಿ ಬಂದಿದ್ದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದವು.

ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಪತ್ತೆ ಮಾಡಿದರು. ಆದರೆ, ಅಷ್ಟರಲ್ಲಿಯೇ ಮಕ್ಕಳು ಮೃತಪಟ್ಟಿದ್ದವು.

‘ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಮಣ್ಣು ಸಡಿಲವಾಗಿದ್ದರಿಂದ ಈ ಘಟನೆ ನಡೆದಿದೆ. ಈ ಹಿಂದೆಯೇ ಇಲ್ಲಿನ ಜನರನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬಂಗ್ಲೆಗುಡ್ಡೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ: ಮುಖ್ಯಮಂತ್ರಿ ಸೂಚನೆಯಂತೆ ಸಾವಿಗೀಡಾದವರ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

2 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅಪಾಯದ ಅಂಚಿನಲ್ಲಿರುವ 14 ಮನೆಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.  

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ಒಂದು ಮನೆಯ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಆತಂಕವಿದೆ. ಮಣ್ಣು ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದರು.

ಇಲ್ಲಿರುವ ಎಲ್ಲ ಮನೆಗಳನ್ನು ಸ್ಥಳಾಂತರ ಮಾಡಲಾಗುವುದು. ಸಮತಟ್ಟಾದ ಜಾಗದಲ್ಲಿ ಅವರಿಗೆ ಮನೆ ಕಟ್ಟಿಕೊಡಲಾಗುವುದು. ಸ್ಥಳಕ್ಕೆ ಬಂದು ಪರಿಶೀಲಿಸಿ, ವರದಿ ನೀಡುವಂತೆ ಎನ್‌ಐಟಿಕೆ ತಂಡಕ್ಕೆ ತಿಳಿಸಲಾಗಿದೆ. ಅವರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಘಟನೆಯ ಕುರಿತು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆಗೆ ಮಾತನಾಡಿದ್ದು, ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು