ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರಿನಲ್ಲಿ ರಾಗ–ತಾನ ‘ಬೈಠಕ್‌’

Published 7 ಡಿಸೆಂಬರ್ 2023, 5:03 IST
Last Updated 7 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ಮಂಗಳೂರು: ಎಲ್ಲ ಪ್ರಹರಗಳ ರಾಗಗಳನ್ನು ಕೇಳುವ ಹಿಂದೂಸ್ತಾನಿ ಸಂಗೀತಾಸಕ್ತರಿಗೆ ನಗರದಲ್ಲಿ ಇನ್ನು ಮುಂದೆ ಬೈಠಕ್‌ಗಳ ರಸ ರೋಮಾಂಚನ. ಡಿಸೆಂಬರ್ 16ರಂದು ಅಹೋರಾತ್ರಿ ನಡೆಯಲಿರುವ ಸಂಗೀತ ಕಾರ್ಯಕ್ರಮದ ಮೂಲಕ ಕಡಲ ತಡಿಯ ನಗರದಲ್ಲಿ ಬೈಠಕ್ ಪರಂಪರೆಗೆ ಮರುಜೀವ ಸಿಗಲಿದೆ.

ಸಂಗೀತಾಸಕ್ತ ಯುವ ಸಮುದಾಯ ಸ್ಥಾಪಿಸಿರುವ ಸ್ವರಾನಂದ್ ಪ್ರತಿಷ್ಠಾನ್‌ ಈ ಪ್ರಯೋಗಕ್ಕೆ ಮುಂದಾಗಿದ್ದು ಡಿಸೆಂಬರ್ 16ರ ನಂತರ ಪ್ರತಿ ತಿಂಗಳು ಕನಿಷ್ಠ ಒಂದು ಕಾರ್ಯಕ್ರಮ ಆಯೋಜನೆ ಆಗಲಿದೆ. 

ಹಿಂದುಸ್ತಾನಿ ಸಂಗೀತದಲ್ಲಿ ರಾಗಗಳನ್ನು ಪ್ರಸ್ತುತಪಡಿಸುವಾಗ ಪ್ರಹರಗಳಿಗೆ ಪ್ರಾಮುಖ್ಯ ನೀಡಲಾಗುತ್ತದೆ. ಹಗಲು ಮತ್ತು ರಾತ್ರಿ ಸಂಗೀತೋತ್ಸವಗಳು ನಡೆಯುತ್ತಿದ್ದ ಕಾಲದಲ್ಲಿ ಎಲ್ಲ ಪ್ರಹರದ ರಾಗಗಳನ್ನು ಕೇಳುವ ಅವಕಾಶ ಸಹೃದಯರಿಗೆ ಸಿಗುತ್ತಿತ್ತು. ಆದರೆ ಈಚೆಗ ಹಗಲು ಅಥವಾ ಸಂಜೆ ವೇಳೆ ಮಾತ್ರ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ಮಧ್ಯರಾತ್ರಿ, ತಡರಾತ್ರಿ ಮತ್ತು ಮುಂಜಾನೆ ರಾಗಗಳು ಅಪರೂಪವಾಗುತ್ತಿವೆ. ಆಸಕ್ತರು ಯು ಟ್ಯೂಬ್‌ನಲ್ಲಿ ಮಾತ್ರ ಈ ರಾಗಗಳನ್ನು ಕೇಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಪುಣೆ, ಮುಂಬೈ ಮುಂತಾದ ಕಡೆಗಳಲ್ಲಿ ಈಗಲೂ ಹಗಲು ರಾತ್ರಿ ಸಂಗೀತೋತ್ಸವ ನಡೆಯುತ್ತದೆ. ಕರ್ನಾಟಕದ ಕೆಲವು ಕಡೆ ಈ ಪದ್ಧತಿ ಇದ್ದರೂ ವ್ಯಾಪಕವಾಗಿ ನಡೆಯುತ್ತಿಲ್ಲ. ಅದರಲ್ಲೂ ಬೈಠಕ್‌ ಸಂಪ್ರದಾಯ ಇಲ್ಲವೆಂದೇ ಹೇಳುವ ಸ್ಥಿತಿ ಉಂಟಾಗಿದೆ. ಇದನ್ನು ಮನಗಂಡ ಸಂಗೀತ ಪ್ರಿಯರು ‘ಸ್ವರಾನಂದ’ ನೀಡುವ ಯೋಜನೆ ಹಮ್ಮಿಕೊಂಡಿದ್ದಾರೆ. 

ಏನಿದು ಸಂಗೀತ ಬೈಠಕ್‌?

ಸಂಗೀತ ಬೈಠಕ್‌ನಲ್ಲಿ ಕಲಾವಿದರು ಮತ್ತು ಶ್ರೋತೃಗಳಿಗೆ ತುಂಬ ಅಂತರ ಇರುವುದಿಲ್ಲ. ಜಮಖಾನ ಹಾಸಿ ಇಬ್ಬರೂ ಒಂದೇ ಸ್ಥರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಕಲಾವಿದರ ಹತ್ತಿರದಲ್ಲೇ ಕುಳಿತುಕೊಳ್ಳುವ ಆಸ್ವಾದಕರು ಸಣ್ಣ ಸಣ್ಣ ‘ಸಂಗತಿ’ಗಳನ್ನೂ ಗಮನಿಸಲು ಸಾಧ್ಯವಾಗುತ್ತದೆ. ರಸಿಕರ ಸೂಕ್ಷ್ಮ ಹಾವ–ಭಾವದ ಮೇಲೆ ಕಣ್ಣಿಡುವ ಕಲಾವಿದರು ಗಾಯನ– ವಾದನಕ್ಕೆ ಮತ್ತಷ್ಟು ರಂಗು ತುಂಬಲು ಸಾಧ್ಯವಾಗುತ್ತದೆ. ಶ್ರೋತೃಗಳಲ್ಲಿ ನೀರಸ ಭಾವ ಕಂಡರೆ ಆಸಕ್ತಿ ಕೆರಳಿಸುವಂತೆ ಮಾಡುವುದಕ್ಕೂ ಅವಕಾಶವಿರುತ್ತದೆ.

‘ಮಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ 7 ಮಂದಿ ಒಟ್ಟುಗೂಡಿ ‘ಸ್ವರಾನಂದ್‌’ ಸಂಸ್ಥೆ ಆರಂಭಿಸಿದ್ದೇವೆ. ವರ್ಷದಲ್ಲಿ ಕನಿಷ್ಠ 8ರಿಂದ 12 ಬೈಠಕ್‌ಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ ಬೈಠಕ್‌ನಲ್ಲಿ ಒಬ್ಬರು ಸ್ಥಳೀಯ ಕಲಾವಿದರು ಮತ್ತು ಒಬ್ಬರು ಹೊರಗಿನ ಕಲಾವಿದರು ಇರಲಿದ್ದಾರೆ. ಹೆಸರಾಂತ ಕಲಾವಿದರು ಪಾಲ್ಗೊಳ್ಳುವುದಾದರೆ ಒಂದೇ ಕಛೇರಿ ಇರುತ್ತದೆ’ ಎಂದು ಸಂಘಟಕರಲ್ಲಿ ಒಬ್ಬರಾಗಿರುವ ಭಾರವಿ ದೇರಾಜೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮನಾಥ ಮರಡೂರರಿಂದ ಆರಂಭ

ಮಂಗಳೂರು ಸಂಗೀತ ಬೈಠಕ್‌ಗೆ ರಥಬೀದಿಯ ಬಿಇಎಂ ಹೈಸ್ಕೂಲ್‌ ಸಭಾಂಗಣವನ್ನು ಗುರುತಿಸಲಾಗಿದೆ. 16ರಂದು ನಡೆಯಲಿರುವ ಮೊದಲ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು ಧಾರವಾಡದ ಪಂಡಿತ್ ಸೋಮನಾಥ ಮರಡೂರ ಗಾಯನ ಪ್ರಸ್ತುತಪಡಿಸುವರು.

ನಂತರ ಮುಂಬೈನ ಸುಧೀರ್ ನಾಯಕ್ ಅವರಿಂದ ಹಾರ್ಮೋನಿಯಂ ಸೋಲೊ, ಪುಣೆಯ ಅಪೂರ್ವ ಗೋಖಲೆ ಮತ್ತು ಪಲ್ಲವಿ ಜೋಶಿ ಅವರಿಂದ ದ್ವಂದ್ವ ಗಾಯನ, ಅಭಿಷೇಕ್ ಬೋರ್ಕರ್ ಅವರಿಂದ ಸರೋದ್ ವಾದನ, ಬೆಂಗಳೂರಿನ ಕುಮಾರ ಮರಡೂರು ಮತ್ತು ಮಣಿಪಾಲದ ರವಿಕಿರಣ್ ಅವರ ಗಾಯನ ಇರಲಿದೆ.

ಪುಣೆ ಮುಂಬೈ ಧಾರವಾಡಗಳಲ್ಲಿ ಬೈಠಕ್‌ ಸಂಸ್ಕೃತಿಯಿಂದಾಗಿ ಅನೇಕ ಕಲಾವಿದರು ಬೆಳಕಿಗೆ ಬಂದಿದ್ದಾರೆ. ಸಂಗೀತ ಪ್ರಿಯರಿಗೂ ಅನುಕೂಲ ಆಗಿದೆ. ಮಂಗಳೂರಿನಲ್ಲೂ ಇದು ಯಶಸ್ವಿಯಾಗಲಿದೆ.
ಕವಿತಾ ಶೆಣೈ, ಬಸ್ತಿ ಗಾಯಕಿ
ಪಂ.ಸೋಮನಾಥ ಮರಡೂರ

ಪಂ.ಸೋಮನಾಥ ಮರಡೂರ

ಅಭಿಷೇಕ್‌ ಬೋರ್ಕರ್‌

ಅಭಿಷೇಕ್‌ ಬೋರ್ಕರ್‌

ಕವಿತಾ ಶೆಣೈ

ಕವಿತಾ ಶೆಣೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT