ಸಚಿವ ಸದಾನಂದ ಗೌಡರಿಗೆ ಮನವಿ

ಮಂಗಳೂರು: ಮಂಗಳೂರು ಆದಾಯ ತೆರಿಗೆ (ಆಡಳಿತ) ಪ್ರಧಾನ ಆಯುಕ್ರತ ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ (ಆಡಳಿತ) ಪ್ರಧಾನ ಆಯುಕ್ತರ ಕಚೇರಿಯೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಶನಿವಾರ ಕೆಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಮನವಿ ನೀಡಲಾಯಿತು.
‘ಕೇಂದ್ರದ ನೇರ ತೆರಿಗೆಗಳ ಗೆಜೆಟ್ ಅಧಿಸೂಚನೆ ಪ್ರಕಾರ ಮಂಗಳೂರು ಕಚೇರಿಯನ್ನು ರದ್ದುಗೊಳಿಸಿ ಗೋವಾದ ಪಣಜಿಗೆ ಸ್ಥಳಾಂತರಿಸಲಾಗುತ್ತದೆ. ಇದರಿಂದ ತೆರಿಗೆದಾರರಿಗೆ ತೊಂದರೆ ಉಂಟಾಗುತ್ತದೆ. ಮಂಗಳೂರು ಅನೇಕ ವ್ಯವಹಾರಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಟ್ರಸ್ಟ್‌ಗಳ ಕೇಂದ್ರವಾಗಿದೆ. ಕಚೇರಿಯನ್ನು ಬದಲಾಯಿಸುವುದರಿಂದ ತೆರಿಗೆ ಕಾರ್ಯವಿಧಾನಗಳಲ್ಲಿ ವಿಳಂಬವಾಗುತ್ತದೆ’ ಎಂದು ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಎಸ್. ಎಸ್. ನಾಯಕ್ ತಿಳಿಸಿದರು.
‘ಮಂಗಳೂರು ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ವ್ಯಾಪ್ತಿಯು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿವೆ. ಸುಮಾರು 5 ಲಕ್ಷ ತೆರಿಗೆ ಪಾವತಿದಾರರು ಇದ್ದು, ವಾರ್ಷಿಕ ₹4 ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹಿಸುತ್ತದೆ’ ಎಂದು ಅವರು ವಿವರಿಸಿದರು.
ಐಸಿಎಐನ ಉಡುಪಿ ಶಾಖೆಯ ಅಧ್ಯಕ್ಷ ಪ್ರದೀಪ್ ಜೋಗಿ, ಕಾರ್ಯದರ್ಶಿ ಲೋಕೇಶ್, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಮನವಿ ಮಾಡಿದರು. ಸುದೇಶ್ ರೈ, ಅನಂತ ಪದ್ಮನಾಭ, ಅಬ್ದುರ್ ರಹಮಾನ್ ಮುಸ್ಬಾ ಮತ್ತು ಯಶಶ್ವಿನಿ ಕೆ ಅಮೀನ್ ಇದ್ದರು.
‘ಬೇಡಿಕೆ ಕುರಿತು ವಿತ್ತ ಸಚಿವರ ಬಳಿ ಪ್ರಸ್ತಾವಿಸಲಾಗುವುದು ಎಂದು ಸಚಿವ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಮನವಿ:
ಮಂಗಳೂರಿನ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾದ ಪಣಜಿಯ ಕಚೇರಿ ಜೊತೆ ವಿಲೀನ ಮಾಡದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ವ್ಯವಹಾರ ದೃಷ್ಟಿಯಲ್ಲಿ ಮಂಗಳೂರು ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದ್ದು, ರಸ್ತೆ, ವಿಮಾನ, ರೈಲ್ವೆ ಹಾಗೂ ಜಲಸಂಪರ್ಕ ಹೊಂದಿದೆ. ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಸುಮಾರು 4.50 ಲಕ್ಷ ಮತ್ತು ಹೆಚ್ಚಿನ ತೆರಿಗೆ ಪಾವತಿದಾರರು ಮತ್ತು ಸುಮಾರು 2 ಸಾವಿರ ವೃತ್ತಿಪರರು ಇದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಣಜಿಯು ಮಂಗಳೂರಿನಿಂದ 376 ಕಿ.ಮೀ. ದೂರದಲ್ಲಿದೆ. ತೆರಿಗೆ ಪಾವತಿದಾರರು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಅಂಗೀಕರಿಸಿದ ಮೌಲ್ಯಮಾಪನ ಆದೇಶದಲ್ಲಿ ಯಾವುದೇ ಪರಿಷ್ಕರಣೆಗಾಗಿ ಪ್ರಧಾನ ಆಯುಕ್ತರನ್ನು ಸಂಪರ್ಕಿಸಬೇಕು. ಈ ನಿಟ್ಟಿನಲ್ಲಿ, ಪ್ರಧಾನ ಆಯುಕ್ತರು ಇಂತಹ ಪರಿಷ್ಕರಣೆ ಅರ್ಜಿಯ ಆದೇಶವನ್ನು ರವಾನಿಸುವಾಗ, ಕರ್ನಾಟಕ ಹೈಕೋರ್ಟ್‌ನ ತೀರ್ಪುಗಳನ್ನು ಪರಿಗಣಿಸದಿರುವ ಸಾಧ್ಯತೆಗಳಿವೆ. ತೆರಿಗೆ ಪಾವತಿದಾರರು ಅಂತಹ ಪ್ರಕರಣಗಳಲ್ಲಿ ತೊಂದರೆ ಅನುಭವಿಸಬೇಕಾಗಬಹುದು. ಇಂತಹ ಪ್ರಮುಖ ಕಾರಣಗಳಿಗಾಗಿ ಸ್ಥಳಾಂತರಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.