ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬ್ರೇಕ್ ವಾಟರ್ ವಿಸ್ತರಣೆಗೆ ಬೇಡಿಕೆ

ಕುಳಾಯಿ ಜೆಟ್ಟಿ ನಿರ್ಮಾಣ ಸ್ಥಳಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಭೇಟಿ
Published 25 ಜನವರಿ 2024, 5:24 IST
Last Updated 25 ಜನವರಿ 2024, 5:24 IST
ಅಕ್ಷರ ಗಾತ್ರ

ಮಂಗಳೂರು: ಸಾಗರಮಾಲಾ ಯೋಜನೆಯಡಿ ಕುಳಾಯಿಯಲ್ಲಿ ₹196.51 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಗೊಳ್ಳುತ್ತಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಜೆಟ್ಟಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಶಾಸಕ ಡಾ. ಭರತ್‌ ಶೆಟ್ಟಿ ಅವರೊಂದಿಗೆ ಭೇಟಿ ನೀಡಿದ ಅವರು, ಕಾಮಗಾರಿ ಪರಿಶೀಲಿಸಿ, ಸ್ಥಳೀಯರ ಅಹವಾಲು ಆಲಿಸಿದರು. ಕೇಂದ್ರದಿಂದ ₹98.25 ಕೋಟಿ, ಬಂದರು ಇಲಾಖೆಯ ₹88.43 ಕೋಟಿ ಹಾಗೂ ರಾಜ್ಯ ಸರ್ಕಾರದ ₹9.85 ಕೋಟಿ ಅನುದಾನದಲ್ಲಿ ಜೆಟ್ಟಿ ನಿರ್ಮಾಣವಾಗುತ್ತಿದೆ. ಒಳನಾಡು ಮೀನುಗಾರರಿಗೆ ಜೆಟ್ಟಿಯ ಬಳಕೆಗೆ ಅವಕಾಶ ನೀಡಲಾಗುವುದು. 250 ಬೋಟ್‌ ತಂಗಲು ಅವಕಾಶವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಮಂಗಳೂರಿನ ಮೊದಲ ಬಂದರು ಉದ್ಘಾಟನೆ ಸಂದರ್ಭದಲ್ಲಿ ಕುಳಾಯಿಯಲ್ಲಿ ಬಂದರು ಸಂತ್ರಸ್ತರಿಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸುವ ಭರವಸೆ ನೀಡಿದ್ದರು. ನಾನಾ ಕಾರಣಗಳಿಗೆ ಅದು ವಿಳಂಬವಾಗಿತ್ತು. ಈಗ ನಡೆಯುತ್ತಿರುವ ಕಾಮಗಾರಿ ಶೀಘ್ರ ಮುಕ್ತಾಯವಾಗುವ ಭರವಸೆ ಇದೆ ಎಂದರು.

ಇಲ್ಲಿ 264 ಮೀಟರ್‌ ಹಾಗೂ 831 ಮೀಟರ್‌ಗಳ ಎರಡು ಬ್ರೇಕ್‌ ವಾಟರ್‌ ನಿರ್ಮಿಸಲಾಗಿದೆ. ಇದನ್ನು ಇನ್ನೂ 500 ಮೀಟರ್ ವಿಸ್ತರಿಸುವಂತೆ ಮೀನುಗಾರರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಎನ್‌ಎಂಪಿಎ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಸ್ಥಳೀಯ ಸದಸ್ಯೆ ಸುಮಿತ್ರಾ, ಎನ್‌ಎಂಪಿಎ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಬಿ. ನಿಭವಾಂಕರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರವೀಣ್‌ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT