ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲವರ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ: ಸತ್ಯಜಿತ್ ಸುರತ್ಕಲ್‌

ಶ್ರೀ ನಾರಾಯಣ ಗುರು ವಿಚಾರವೇದಿಕೆಯಿಂದ ಶೀಘ್ರ ಸಭೆ: ಸತ್ಯಜಿತ್ ಸುರತ್ಕಲ್‌
Last Updated 19 ಸೆಪ್ಟೆಂಬರ್ 2022, 4:52 IST
ಅಕ್ಷರ ಗಾತ್ರ

ಮಂಗಳೂರು: ಬಿಲ್ಲವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಅವರ ಹೆಸರಿಡಬೇಕು ಮತ್ತು ಬಿಲ್ಲವರನ್ನು ಪ್ರವರ್ಗ-1ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಶ್ರೀ ನಾರಾಯಣ ಗುರು ವಿಚಾರವೇದಿಕೆ ನಿರ್ಧರಿಸಿದೆ.

ನಗರದ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಸಮಿತಿಯ ರಾಜ್ಯ ಕಾರ್ಯಕಾರಿಣಿ ನಂತರ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಹೋರಾಟಕ್ಕೆ ಸಂಬಂಧಿಸಿ ವೇದಿಕೆಯನ್ನು ರಚಿಸಲಾಗಿದ್ದು‌ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

‘ರಾಜ್ಯದಲ್ಲಿ ಈಗ ಅಧಿಕಾರದಲ್ಲಿರುವ ಸರ್ಕಾರ ಪ್ರತಿ ಹಂತದಲ್ಲೂ ಬಿಲ್ಲವ ಸಮುದಾಯವನ್ನು ಕಡೆಗಣಿಸುತ್ತಿದೆ ಮತ್ತು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಬಾರಿ ನಾರಾಯಣಗುರು ಜಯಂತಿಯನ್ನು ಆಚರಿಸಿದ್ದರೂ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮ ಎಂದು ಅನಿಸಲೇ ಇಲ್ಲ.‌ ಮುಖ್ಯಮಂತ್ರಿಗಳು ಗುರುಗಳಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲೇ ಇಲ್ಲ’ ಎಂದು ಅವರು ದೂರಿದರು.

‘ಬಿಲ್ಲವ ಸಮುದಾಯವನ್ನು ಪ್ರವರ್ಗ 2-ಎಯಿಂದ ಪ್ರವರ್ಗ-1ಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ನಿಗಮ ಸ್ಥಾಪಿಸಿ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎಂಬ ಬೇಡಿಕೆಗೂ ಸ್ಪಂದಿಸಲಿಲ್ಲ. ಇತರ ಸಮುದಾಯದವರ ಬೇಡಿಕೆಗೆ ಸ್ಪಂದಿಸುವ ಸರ್ಕಾರ ಬಿಲ್ಲವರನ್ನು ನಿರಂತರವಾಗಿ ಕಡೆಗಣಿಸುತ್ತಿದೆ. ಕೊರೊನಾದ ನೆಪದಲ್ಲಿ ದೇವರಾಜ ಅರಸು ನಿಗಮಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ ಆ ಮೂಲಕ ಬಿಲ್ಲವರೂ ಒಳಗೊಂಡಂತೆ ಹಿಂದುಳಿದ ವರ್ಗದವರನ್ನು ತುಳಿಯುವ ಯತ್ನ ಮಾಡಿದೆ. ಅಲ್ಪಸಂಖ್ಯಾತ ನಿಗಮಕ್ಕೆ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಕೊರೊನಾ ಅಡ್ಡಿಯಾಗಲಿಲ್ಲ’ ಎಂದು ಆರೋಪಿಸಿದರು.

‘ಮುಂದಿನ ಚುನಾವಣೆಯಲ್ಲಿ ಸಮಾಜದ ಪರವಾಗಿ ನಿಲ್ಲುವವರಿಗೆ ರಾಜಕೀಯ ಬೆಂಬಲ‌ ನೀಡಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಯುತ್ ಅಮೀನ್, ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ್, ನಾಗರಾಜ ಮುಡುಬಾ, ಪ್ರಧಾನ‌ ಕಾರ್ಯದರ್ಶಿ ರಾಘವೇಂದ್ರ ನಾಯಕ, ಕಾನೂನು ಸಲಹೆಗಾರ ಉಮೇಶ್, ಕೇಶವಮೂರ್ತಿ, ವಿಷ್ಣುಮೂರ್ತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT