ಮಂಗಳವಾರ, ಏಪ್ರಿಲ್ 7, 2020
19 °C
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ

ಕೊರೊನಾ ಮುನ್ನೆಚ್ಚರಿಕೆ: ಪಿಲಿಕುಳ ನಿಸರ್ಗಧಾಮ ಒಂದು ವಾರ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಇಲ್ಲಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಮುಂದಿನ ಒಂದು ವಾರ ಪ್ರವಾಸಿಗರಿಗೆ ಬಂದ್ ಆಗಲಿದ್ದು, ಸುಮಾರು ₹10 ಲಕ್ಷ ನಷ್ಟ ಅಂದಾಜಿಸಲಾಗಿದೆ.

ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಪೈಕಿ ಪ್ರಮುಖವಾದ ಪಿಲಿಕುಳದಲ್ಲಿ ಜೈವಿಕ ಉದ್ಯಾನ, ವಿಜ್ಞಾನ ಕೇಂದ್ರ, ಸರೋವರ ಉದ್ಯಾನ, ಬೋಟಿಂಗ್, ವಾಟರ್ ಅಮ್ಯೂಸ್‌ಮೆಂಟ್, ಗಾಲ್ಫ್, ಪರಂಪಯ ಹಳ್ಳಿ ಮತ್ತಿತರ ಪ್ರವಾಸಿ ತಾಣಗಳಿವೆ. ಪ್ರತಿನಿತ್ಯ  ಸಾವಿರದಿಂದ ಮೂರು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿ ವಾರ ಸುಮಾರು ₹10 ಲಕ್ಷ ಆದಾಯವಿದೆ.

ಇಲ್ಲಿರುವ ಜೈವಿಕ ಉದ್ಯಾನದಲ್ಲಿ ಸುಮಾರು 1,300 ಪ್ರಭೇದಗಳ ಪ್ರಾಣಿ, ಪಕ್ಷಿ, ಸರೀಸೃಪ, ಸಸ್ತನಿ ಸೇರಿದಂತೆ  ವೈವಿಧ್ಯಗಳಿವೆ. ಕೊರೊನಾ, ಹಕ್ಕಿಜ್ವರಗಳ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದು, ರೋಗ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಸಿಬ್ಬಂದಿ: ಪ್ರಾಣಿ–ಪಕ್ಷಿಗಳ ನಿರ್ವಹಣಾ ಸಿಬ್ಬಂದಿಗೆ ‘ಕೊರೊನಾ’ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ ಮಾಡಲಾಗಿದೆ. ಎಲ್ಲ ಜೀವಿಗಳ ಪಂಜರ, ವಾಸ್ತವ್ಯ ವ್ಯಾಪ್ತಿಯಲ್ಲಿ ನಿರಂತರವಾಗಿ ರೋಗ ನಿವಾರಕ ಸಿಂಪಡಣೆಗಳನ್ನು ಮಾಡಲಾಗುತ್ತಿದೆ. ಜೀವಿಗಳಿಗೆ ರೋಗನಿರೋಧಕಗಳನ್ನು ಆಹಾರದ ಮೂಲಕ ನೀಡಲಾಗುತ್ತಿದೆ. ಪ್ರತಿನಿತ್ಯ ಪ್ರಾಣಿಗಳ ಲಕ್ಷಣಗಳನ್ನು ಪರಿಶೀಲಿಸಲಾಗುತ್ತಿದೆ. ವ್ಯತ್ಯಾಸ ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಡಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಎಚ್ಚರಿಕೆ: ಪ್ರಾಣಿ–ಪಕ್ಷಿಗಳ ಬಳಿಗೆ ತೆರಳುವಾಗ ಮಾತ್ರವಲ್ಲ, ಒಂದು ಪ್ರಾಣಿಯ ತಪಾಸಣೆ, ಪರೀಕ್ಷೆ ಅಥವಾ ಆಹಾರ ನೀಡಿದ ಬಳಿಕ ಮತ್ತೊಂದು ಪ್ರಾಣಿ–ಪಕ್ಷಿಯನ್ನು ಸ್ಪರ್ಶಿಸುವ ಮೊದಲು ಸ್ಯಾನಿಟೈಸೆಷನ್ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಿಸರ್ಗಧಾಮದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದರು.  

ಆಹಾರ: ಸಸ್ಯಾಹಾರಿ ಮತ್ತು ಮಾಂಸಾಹಾರಿ ಜೀವಿಗಳಿದ್ದು, ಆಹಾರ ನೀಡುವಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ವೈದ್ಯರ ನೇತೃತ್ವದ ತಂಡವೊಂದು ಆಹಾರವನ್ನು ಪರೀಕ್ಷಿಸಿದ ಬಳಿಕವೇ ನೀಡಲಾಗುತ್ತಿದೆ. ಈ ಹಿಂದೆ ಕೋಳಿ ಮಾಂಸವನ್ನು ತರಿಸಿಕೊಳ್ಳುತ್ತಿದ್ದೆವು. ಆದರೆ, ಈಗ ಜೀವಂತ ಕೋಳಿಯನ್ನೇ ತರಿಸಿ, ಅದರ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ನೀಡಲಾಗುತ್ತಿದೆ. ಆಹಾರವನ್ನು ಮೃಗಾಲಯದ ಒಳಗೆ ಸಿದ್ಧಪಡಿಸಲಾಗುತ್ತಿದೆ.

ರೋಗದ ಆತಂಕ ಮಾತ್ರವಲ್ಲ, ಬಿಸಿಲಿನ ಝಳದ ಕಾರಣವೂ ಪ್ರಾಣಿಗಳ ಪಂಜರ, ವಾಸ್ತವ್ಯ ಸ್ಥಳದಲ್ಲಿ ನೀರು ಹನಿಸುವ ವ್ಯವಸ್ಥೆ ಮಾಡಲಾಗಿದೆ. 

‘ಬಾವಲಿಗಳಿಂದ ಆತಂಕ ಇಲ್ಲ

‘ಕೆಲವು ವರ್ಷಗಳ ಹಿಂದೆ ಸಾರ್ಸ್‌ ಬಂದಿತ್ತು. ಆಗ ಬಾವಲಿಗಳಿಂದ ರೋಗಾಣುಗಳು ಬಂದಿವೆ ಎಂದಿದ್ದರು. ಆದರೆ, ಅದು ದೃಢಪಟ್ಟಿರಲಿಲ್ಲ. ನಮ್ಮಲ್ಲಿ ಅಳಿವಿನಂಚಿನಲ್ಲಿರುವ ಆರು ಪ್ರಭೇದಗಳ ಬಾವಲಿಗಳು ಇವೆ. ಇವುಗಳನ್ನೂ ತೀವ್ರ ಉಸ್ತುವಾರಿಯಲ್ಲಿ ಇರಿಸಲಾಗಿದ್ದು, ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ನಿಸರ್ಗಧಾಮದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದರು. 

ಹೊರಗಿನ ಪ್ರಾಣಿ–ಪಕ್ಷಿಗಳಿಗೂ ಪ್ರವೇಶವಿಲ್ಲ

ಕೇವಲ ಪ್ರವಾಸಿಗರು ಮಾತ್ರವಲ್ಲ, ಹೊರಗಿನ ಪ್ರಾಣಿ–ಪಕ್ಷಿಗಳಿಗೂ ನಿರ್ಬಂಧ ಹೇರಲಾಗಿದೆ. ಗಾಯಗೊಂಡ, ರೋಗ ಬಂದ, ಹೊಸದಾಗಿ ಪತ್ತೆಯಾದ ಇತ್ಯಾದಿ ಪ್ರಾಣಿ–ಪಕ್ಷಿಗಳನ್ನು ನಿಸರ್ಗಧಾಮಕ್ಕೆ ಚಿಕಿತ್ಸೆ ಹಾಗೂ ಕೊಡುಗೆಯಾಗಿ ನೀಡುತ್ತಾರೆ. ಆದರೆ, ಅಂತಹ ಪ್ರಾಣಿ–ಪಕ್ಷಿಗಳನ್ನು ಹೊರಗಡೆ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು