ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತಿಲರಿಗೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧೆ

ಪುತ್ತಿಲ ಪರಿವಾರದ ಸಮಾಲೋಚನಾ ಸಭೆ: ಮೂರು ದಿನಗಳ ಗಡುವು
Published 6 ಫೆಬ್ರುವರಿ 2024, 5:38 IST
Last Updated 6 ಫೆಬ್ರುವರಿ 2024, 5:38 IST
ಅಕ್ಷರ ಗಾತ್ರ

ಪುತ್ತೂರು: ‘ಮುಂದಿನ ಮೂರು ದಿನಗಳೊಳಗೆ ಅರುಣ್‍ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬೇಕು. ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ವಿಫಲವಾದರೆ ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಿಯೇ ಸಿದ್ಧ’ ಎಂದು ಪುತ್ತಿಲ ಪರಿವಾರದ ಸಭೆ ನಿರ್ಣಯ ಸ್ವೀಕರಿಸಿದೆ.

ಪುತ್ತಿಲ ಪರಿವಾರದ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ ನಿರ್ಣಯ ಮಂಡಿಸಿದರು. ‘ಅರುಣ್‍ಕುಮಾರ್ ಪುತ್ತಿಲ ಅವರು ಮಾತೃ ಸಂಘ, ಸಂಘ ಪರಿವಾರ ಮತ್ತು ಬಿಜೆಪಿ ಹಿರಿಯರ ಬಗ್ಗೆ ಎಲ್ಲಿಯೂ ಅಗೌರವ ತೋರುವ ಮಾತುಗಳನ್ನು ಆಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಅವರು ಹೇಳಿದರು.

ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್‍ಕುಮಾರ್ ಪುತ್ತಿಲ ಮಾತನಾಡಿ, ‘ನಾವೆಲ್ಲರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ರಾಷ್ಟ್ರೀಯ ವಿಚಾರಧಾರೆಗಳ ಜತೆಗೆ ನಮ್ಮ ಬದುಕು. ಪ್ರಸ್ತುತ ಸನ್ನಿವೇಶದಲ್ಲಿ ಸಂಘದ ಮತ್ತು ಪಕ್ಷದ ಹಿರಿಯರ ಯೋಜನೆಗೆ ಕಟಿಬದ್ಧರಾಗಿ ಮತ್ತು ಯಾವ ಕಾರ್ಯಕರ್ತನಿಗೂ ನೋವಾಗದ ರೀತಿಯಲ್ಲಿ ನಡೆದುಕೊಳ್ಳಲು ಸಿದ್ಧರಾಗಿದ್ದೇವೆ. ಮಾತೃ ಪಕ್ಷ ಸೇರ್ಪಡೆಗೆ ಪರಿವಾರದಲ್ಲಿ ಯಾವುದೇ ಕಾರ್ಯಕರ್ತರ ವಿರೋಧವಿಲ್ಲ. ಪುತ್ತಿಲ ಪರಿವಾರ -ಬಿಜೆಪಿ ಸಂಘ ಪರಿವಾರ ನಡುವಿನ ಗೊಂದಲಕ್ಕೆ ತಾರ್ಕಿಕ ಅಂತ್ಯ ಕೊಡಬೇಕೆಂಬ ನೆಲೆಯಲ್ಲಿ ಸಮಾವೇಶ ನಡೆಸಿದ್ದೇವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷವಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಬೇಕಿದೆ’ ಎಂದರು.

‘ಚುನಾವಣೆಯ ಸಂದರ್ಭದಲ್ಲಿನ ತಪ್ಪುಗಳನ್ನು ಸರಿಪಡಿಸುವ ಮಾತುಕತೆ ನಡೆದಿದೆ. ಜಿಲ್ಲೆಯಲ್ಲಿ ಜವಾಬ್ದಾರಿ ನೀಡಬೇಕೆಂಬ ನೆಲೆಯಲ್ಲಿ ಮಾತುಕತೆ ನಡೆದಿದೆ. ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತರಿಗೆ ಮತ್ತು ಪ್ರಧಾನ ಕಾರ್ಯದರ್ಶಿ ಉಮೇಶ್ ಅವರಿಗೆ ಸೂಕ್ತ ಸ್ಥಾನ ‌ನೀಡಿದರೆ ಅವರ ಜತೆ ಸೇರಿಕೊಂಡು ಕೆಲಸ ಮಾಡಲು ನಾನು ಸಿದ್ಧ. ನನ್ನ ಬಗ್ಗೆ ಅಪಪ್ರಚಾರ ಮಾಡುವವರು ಮಹಾಲಿಂಗೇಶ್ವರ ದೇವಳದ ನಡೆಗೆ ಬರುವುದಾದರೆ ದೇವರ ನಡೆಯಲ್ಲಿ ಪ್ರಾರ್ಥನೆ ಮಾಡಲು ನಾನು ಸಿದ್ಧ’ ಎಂದರು.

ಸಂಘಟನಾ ಸಂದೇಶ ನೀಡಿದ ಶ್ರೀಕೃಷ್ಣ ಉಪಾಧ್ಯಾಯ ಅವರು, ‘ಬಿಜೆಪಿ ಪುತ್ತಿಲರನ್ನು ಸೇರಿಸಿಕೊಳ್ಳುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ನರೇಂದ್ರ ಮೋದಿಗಾಗಿ ಕೆಲಸ ಮಾಡಬೇಕೆಂದು ಯುವಕರು ಕಾಯುತ್ತಿದ್ದು, ಈ ಅವಾಂತರಗಳನ್ನು ಪರಿಹರಿಸಿದ ತಕ್ಷಣ ಪುತ್ತಿಲ ಪರಿವಾರ ಕೆಲಸಕ್ಕಿಳಿಯಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 10 ಲಕ್ಷ ಮತ ಗಳಿಸುವ ಗುರಿಯಿಟ್ಟು ಕೆಲಸ ಮಾಡುತ್ತೇವೆ’ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಶಶಾಂಕ ಕೊಟೋಚಾ ಅವರು ಸಮಾಲೋಚನಾ ಸಮಾವೇಶ ಉದ್ಘಾಟಿಸಿದರು. ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ವಕ್ತಾರರಾದ ವಕೀಲ ರಾಜೇಶ್ ಆರ್ಲಪದವು, ಪುತ್ತಿಲ ಪರಿವಾರದ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್ ಬೆಳ್ಳಿಪ್ಪಾಡಿ, ನಗರ ಘಟಕದ ಅಧ್ಯಕ್ಷ ಅನಿಲ್ ತೆಂಕಿಲ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೀಷ್ ಕುಲಾಲ್ ಇದ್ದರು.

ಪುತ್ತಿಲ ಪರಿವಾರದ ಸುನಿಲ್ ಬೋರ್ಕರ್, ಮಹೇಂದ್ರ ವರ್ಮ, ದಿನೇಶ್, ಗಿರೀಶ್ ರೈ ಮುಕ್ವೆ, ಅಮರನಾಥ ಆಳ್ವ ಕರ್ನೂರುಗುತ್ತು, ಅನ್ನಪೂರ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ ಮಠ ಸ್ವಾಗತಿಸಿದರು. ನವೀನ್ ರೈ ಪಂಜಳ  ವಂದಿಸಿದರು.

ಬಿಜೆಪಿ ಬಿಟ್ಟು ಹೋದವರಲ್ಲಿ ಪಕ್ಷವನ್ನು ಮತ್ತು ನಾಯಕರನ್ನು ಬೈಯದಿರುವವರು ಪುತ್ತಿಲ ಮಾತ್ರ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ.
ಶ್ರೀಕೃಷ್ಣ ಉಪಾಧ್ಯಾಯ ಪರಿವಾರದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT