ಭಾನುವಾರ, ಆಗಸ್ಟ್ 1, 2021
25 °C
ದುಬೈಗೆ ತೆರಳಲು ಅವಕಾಶ ನಿರಾಕರಣೆ

ಸ್ಕ್ಯಾನ್‌ ಆಗದ ಆರ್‌ಟಿಪಿಸಿಆರ್‌ ಕ್ಯೂಆರ್‌ ಕೋಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಆರ್‌ಟಿಪಿಸಿಆರ್‌ ವರದಿಯಲ್ಲಿನ ಕ್ಯೂಆರ್‌ ಕೋಡ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ದುಬೈಗೆ ತೆರಳುವವರು 48 ಗಂಟೆಯೊಳಗಿನ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಹೊಂದಿರಬೇಕು. ನಗರದ ಆಸ್ಪತ್ರೆ ಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು, ವರದಿ ಹೊಂದಿದ್ದರೂ ಬುಧವಾರ ರಾತ್ರಿ ದುಬೈಗೆ ತೆರಳಬೇಕಿದ್ದ ಕೆಲ ಪ್ರಯಾಣಿಕರಿಗೆ ಕ್ಯೂಆರ್ ಕೋಡ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈಗೆ ತೆರಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಬುಧವಾರ ರಾತ್ರಿ 1.40ರ ಸ್ಪೈಸ್‌ಜೆಟ್ ವಿಮಾನದ ಮೂಲಕ ದುಬೈಗೆ ತೆರಳಬೇಕಿತ್ತು. 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಗತ್ಯ ದಾಖಲೆಗಳನ್ನು ತಪಾಸಣೆ ನಡೆಸಲಾಯಿತು. ಆದರೆ ನನ್ನ ಕೋವಿಡ್ ಟೆಸ್ಟ್ ವರದಿಯ ಕ್ಯೂಆರ್ ಕೋಡ್ ಲಿಂಕ್ ಆಗದ ಕಾರಣ ಸಮಸ್ಯೆ ಎದುರಿಸಬೇಕಾಯಿತು’ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.

ಸಂಬಂಧಪಟ್ಟ ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ, ವೆಬ್‌ಸೈಟ್‌ನಲ್ಲಿ ಸಮಸ್ಯೆ ಇದೆ. ಕ್ಯೂಆರ್ ಕೋಡ್ ಲಿಂಕ್ ಆಗುತ್ತಿಲ್ಲ. ಎರರ್ ಬರುತ್ತಿದೆ ಎಂದು ಸ್ಪೈಸ್ ಜೆಟ್ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯಾಣಕ್ಕೆ ಸಹಕರಿಸುವಂತೆ ಕೇಳಿಕೊಂಡರು. ಆದರೆ, ದುಬೈನಲ್ಲಿ ಕ್ಯೂಆರ್ ಕೋಡ್ ಲಿಂಕ್ ಆಗಬೇಕಾಗಿರುವುದು ಅಗತ್ಯವಾಗಿದ್ದು, ಲಿಂಕ್ ಆಗದೆ ಕಳುಹಿಸಲು ಸಾಧ್ಯವಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ದುಬೈಗೆ ತೆರಳದೇ ಹಿಂದಿರುಗಬೇಕಾಯಿತು’ ಎಂದು ತಿಳಿಸಿದ್ದಾರೆ.

‘‘ಆಸ್ಪತ್ರೆಯವರು ನಮ್ಮಿಂದ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ನನಗೆ ಸುಮಾರು ₹36 ಸಾವಿರ ನಷ್ಟವಾಗಿದೆ’ ಎಂದು ಪ್ರಯಾಣಿಕ ಅಳಲು ತೋಡಿಕೊಂಡಿದ್ದಾರೆ.

‘ಐಸಿಎಂಆರ್‌ನಿಂದ ನೀಡಲಾಗುವ ಕೋವಿಡ್ ವರದಿಗೆ, ಸಂಬಂಧಪಟ್ಟ ಆಸ್ಪತ್ರೆಯ ಕ್ಯೂಆರ್ ಕೋಡ್ ಲಗತ್ತಿಸಿ ವಿದೇಶಕ್ಕೆ ಹೋಗುವವರಿಗೆ ನೀಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಮಾಡಲಾಗುತ್ತದೆ. ಇದು ತಾಂತ್ರಿಕ ವ್ಯವಸ್ಥೆಯಾಗಿದ್ದು, ಕೆಲ ಆಸ್ಪತ್ರೆ ಗಳಲ್ಲಿ ಈ ವ್ಯವಸ್ಥೆ ಇನ್ನೂ ಸರಿಯಾಗಿ ಆಗದ ಕಾರಣ ನಮ್ಮಲ್ಲಿ ಹೆಚ್ಚು ಪ್ರಯಾಣಿಕರು ಬರುತ್ತಿದ್ದಾರೆ’ ಎಂದು ಫಾದರ್‌ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕಿಶನ್ ಶೆಟ್ಟಿ ತಿಳಿಸಿದ್ದಾರೆ.

ಭಾರತದಿಂದ ದುಬೈಗೆ ವಿಮಾನಯಾನ ಸ್ಥಗಿತ

ಮಂಗಳೂರು: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಏ.25ರಿಂದ 10 ದಿನಗಳ ಕಾಲ ದುಬೈ ಹಾಗೂ ಭಾರತದ ನಡುವಿನ ವಿಮಾನ ಯಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ 14 ದಿನಗಳಲ್ಲಿ ಭಾರತದಲ್ಲಿ ಸಂಚರಿಸಿರುವ ಪ್ರಯಾಣಿಕರಿಗೆ ಯುಎಇಗೆ ಬರಲು ಅನುಮತಿ ಇಲ್ಲ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. 10 ದಿನಗಳ ಬಳಿಕ ನಿರ್ಧಾರವನ್ನು ಪರಿಶೀಲಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು