ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್‌ನಿಂದ ಕೋಯಿಕ್ಕೋಡ್‌ವರೆಗೆ ರೋರೋ ರೈಲಿನ ಪ್ರಾಯೋಗಿಕ ಸಂಚಾರ

Last Updated 20 ಆಗಸ್ಟ್ 2020, 6:47 IST
ಅಕ್ಷರ ಗಾತ್ರ

ಮಂಗಳೂರು: ಕೊಂಕಣ ರೈಲ್ವೆ ಆರಂಭಿಸಿರುವ ರೋರೋ ಸೇವೆಯನ್ನು ಇದೀಗ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ವಿಸ್ತರಿಸಲು ಚಿಂತನೆ ಆರಂಭವಾಗಿದೆ. ಕುಲಶೇಖರದಿಂದ ಕೋಯಿಕ್ಕೋಡವರೆಗೆ ಬುಧವಾರ ರೋರೋ ಸೇವೆಯನ್ನು ಪ್ರಾಯೋಗಿಕವಾಗಿ ನಡೆಸಲಾಯಿತು.

1999ರಲ್ಲಿ ಕೊಂಕಣ ರೈಲ್ವೆ ನಿಗಮ ಕೊಲಾಡ್‌ ಮತ್ತು ವರ್ಣಾ ನಡುವೆ ರೋರೋ ಸೇವೆಯನ್ನು ಆರಂಭಿಸಿತ್ತು. 2004 ರಲ್ಲಿ ಈ ಸೇವೆಯನ್ನು ಮಂಗಳೂರಿನ ಸುರತ್ಕಲ್‌ವರೆಗೆ ವಿಸ್ತರಿಸಲಾಗಿತ್ತು. ಬೇಡಿಕೆಗೆ ಅನುಗುಣವಾಗಿ ಸದ್ಯಕ್ಕೆ ನಿತ್ಯ 50 ಟ್ರಕ್‌ಗಳನ್ನು ಹೊಂದಿದ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿದೆ.

ಕೇರಳದವರೆಗೆ ರೋರೋ ಸೇವೆ ವಿಸ್ತರಿಸಲು ಬೇಡಿಕೆ ಬಂದಿದ್ದು, ದಕ್ಷಿಣ ರೈಲ್ವೆ ಸಹಯೋಗದಲ್ಲಿ ಸುರತ್ಕಲ್‌ನಿಂದ ಕೋಯಿಕ್ಕೋಡ್‌ವರೆಗೆ ಪ್ರಾಯೋಗಿಕ ಪರೀಕ್ಷೆಯನ್ನು ಬುಧವಾರ ಆರಂಭಿಸಲಾಯಿತು.

ಒಂದು ಎಂಜಿನ್‌, ಮೂರು ಬಿಆರ್‌ಎನ್‌ ಬೋಗಿಗಳು ಹಾಗೂ ಮೂರು ಖಾಲಿ ಟ್ರಕ್‌ಗಳನ್ನು ಹೊತ್ತ ರೋರೋ ಸಂಚಾರ ಬೆಳಿಗ್ಗೆ 8.20ಕ್ಕೆ ಸುರತ್ಕಲ್‌ನಿಂದ ಹೊರಟಿತು. ಈ ಸಂದರ್ಭದಲ್ಲಿ ಮೂರು ಖಾಲಿ ಟ್ರಕ್‌ಗಳು ಸುರಂಗ ಹಾಗೂ ವಿದ್ಯುತ್‌ ಮಾರ್ಗಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗಿತ್ತು.

‘ಪ್ರಾಯೋಗಿಕ ರೋರೋ ಸಂಚಾರ ಕೋಯಿಕ್ಕೋಡ್‌ವರೆಗೆ ಯಶಸ್ವಿಯಾಗಿ ನಡೆದಿದೆ. ಕುಲಶೇಖರದ ಸುರಂಗ ಹಾಗೂ ದಕ್ಷಿಣ ರೈಲ್ವೆ ವ್ಯಾಪ್ತಿಯ ವಿದ್ಯುತ್‌ ಮಾರ್ಗ ಸೇರಿದಂತೆ ಯಾವುದೇ ತೊಂದರೆಗಳು ಎದುರಾಗಲಿಲ್ಲ. ಬೆಳಿಗ್ಗೆ 9.10ಕ್ಕೆ ರೈಲು ಮಂಗಳೂರು ಜಂಕ್ಷನ್‌ ತಲುಪಿದ್ದು, ನಂತರ 10.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಕೋಯಿಕ್ಕೋಡ್‌ಗೆ ಸಂಚಾರ ಬೆಳೆಸಿತು’ ಎಂದು ದಕ್ಷಿಣ ರೈಲ್ವೆ ಪಾಲ್ಘಾಟ್‌ ವಲಯದ ಮಹಾಪ್ರಬಂಧಕ ಪ್ರತಾಪ್‌ಸಿಂಗ್ ಶಮಿ ತಿಳಿಸಿದ್ದಾರೆ.

ಪ್ರಾಯೋಗಿಕ ರೋರೋಸಂಚಾರವನ್ನು ತಿರುವನಂತಪುರದವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶೋರನೂರ್‌ ಬಳಿ ಇರುವ ರೈಲ್ವೆ ಮೇಲ್ಸೇತುವೆ ಅಡ್ಡಿಯಾಗಬಹುದು ಎಂದು ಆತಂಕವಿದೆ. ಆದರೆ, ದಕ್ಷಿಣ  ರೈಲ್ವೆ ಈ ಮೇಲ್ಸೇತುವೆಯ ಕೆಳಗಿನಿಂದ ಸಂಚರಿಸುವ ಪ್ರಯತ್ನ ಮಾಡಲಿದೆ. ಒಂದು ವೇಳೆ ಯಶಸ್ವಿ ಆಗದೇ ಇದ್ದಲ್ಲಿ, ಕೋಯಿಕ್ಕೋಡ್‌ವರೆಗೆ ರೋರೋ ಸೇವೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೋರೋ ಹೆಚ್ಚು ಅನುಕೂಲ...

ಈಗಾಗಲೇ ಜಾರಿಯಲ್ಲಿರುವ ಮಂಗಳೂರು-ಮುಂಬೈ ರೋರೋ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾಗಣೆಗೆ ಟ್ರಕ್‌ಗಳು ಸರದಿಯಲ್ಲಿ ಕಾಯುತ್ತಿವೆ. ಟರ್ಮಿನಲ್‌ನಲ್ಲಿ ಲಾರಿಗಳ ಲೋಡ್‌ ಮತ್ತು ಆನ್‌ಲೋಡ್‌ಗೆ ಕೇವಲ 2 ಗಂಟೆ ಸಮಯವಷ್ಟೆ ಬೇಕಾಗುತ್ತದೆ. ಮಾರ್ಗ ಮಧ್ಯೆ, ಅಪಘಾತಗಳ ಸಂಭವ ಕಡಿಮೆ. ಅಡಚಣೆ ಸಾಧ್ಯತೆಯೂ ಇಲ್ಲ. ಇಂಧನ, ಟ್ರಕ್‌ಗಳ ನಿರ್ವಹಣೆ ವೆಚ್ಚದಲ್ಲಿ ಗಣನೀಯ ಉಳಿತಾಯವಾಗುತ್ತದೆ. ಸಂಚಾರ ದಟ್ಟಣೆ ಮತ್ತು ಮಾಲಿನ್ಯವೂ ಕಡಿಮೆ ಎಂದು ಕೊಂಕಣ ರೈಲ್ವೆಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT