ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿ: ಸಂಚಾರ ದಟ್ಟಣೆ, ಪ್ರಯಾಣಿಕರ ಪರದಾಟ

Last Updated 30 ಜುಲೈ 2021, 12:47 IST
ಅಕ್ಷರ ಗಾತ್ರ

ಉಜಿರೆ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಶುಕ್ರವಾರ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು.

ಚಾರ್ಮಾಡಿ ಘಾಟಿಯ 7ನೇ ತಿರುವಿನ ಸಮೀಪ ಅಗಲ ಕಿರಿದಾದ ರಸ್ತೆಯಲ್ಲಿ ಲಾರಿಯೊಂದು ಕೆಸರಿನಲ್ಲಿ ಹೂತು ಹೋಗಿರುವುದು ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ವಾಹನಗಳು ಅಡ್ಡಾದಿಡ್ಡಿ ಚಲಿಸಿ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು.

ಹೊರ ಜಿಲ್ಲೆಗಳಿಂದ ಉಜಿರೆ, ಮಂಗಳೂರು ಕಡೆ ಬರುವ ಎ.ಸಿ. ಹಾಗೂ ಸ್ಲೀಪರ್ ಬಸ್‍ಗಳು, ಕೊಟ್ಟಿಗೆಹಾರದ ಮೂಲಕ ಬರುವ ಲಾರಿಗಳು ಕೂಡಾ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಯಿತು. ಘಾಟಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಐದು ಕಿ.ಮೀ. ವರೆಗೆ ವಾಹನಗಳ ಸಾಲು ಕಂಡು ಬಂದಿದೆ. ಸಮಸ್ಯೆ ಪರಿಹರಿಸಲು, ಚಾರ್ಮಾಡಿ ಪೊಲೀಸ್ ಗೇಟ್‍ನಲ್ಲಿ ಕೊಟ್ಟಿಹಾರ ಕಡೆ ಹೋಗುವ ವಾಹನಗಳನ್ನು ನಿಲ್ಲಿಸಿ ಸರದಿ ಪ್ರಕಾರ ಬಿಡಲಾಯಿತು.

ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್ ನೇತೃತ್ವದಲ್ಲಿ ಧರ್ಮಸ್ಥಳದ ಸಬ್‌ ಇನ್‌ಸ್ಪೆಕ್ಟರ್‌ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ತಂಡ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬರ ತಂಡ ಹಾಗೂ ಸ್ಥಳೀಯರು ಸೇರಿ ಏಕಮುಖ ಸಂಚಾರಕ್ಕೆ ಅನುಕೂಲ ಮಾಡಿ ಸಹಕರಿಸಿದರು.

ಘಾಟಿ ಪ್ರದೇಶದಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡಾ ಸಿಗದೆ ಆಸ್ಪತ್ರೆಗೆ ಹೋಗುವವರು, ನಿತ್ಯ ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು. ಜಡಿಮಳೆ ಇನ್ನಷ್ಟು ಸಮಸ್ಯೆ ಉಂಟು ಮಾಡಿತು.

‘ಚಾರ್ಮಾಡಿ ಗೇಟಿನಲ್ಲಿ ಕೊಟ್ಟಿಗೆಹಾರದ ಕಡೆಗೆ ಪ್ರಯಾಣಿಸಲು ದೊಡ್ಡ ಗಾತ್ರದ ವಾಹನಗಳಿಗೆ ಅವಕಾಶ ನೀಡುತ್ತಿಲ್ಲ. ಆದರೆ, ಕೊಟ್ಟಿಗೆಹಾರದಿಂದ ಕೆಲವು ಘನವಾಹನಗಳು ಉಜರೆ ಕಡೆ ಸಂಚರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಮೂಡಿಗೆರೆ ಠಾಣೆಯ ಅಧಿಕಾರಿಗಳಲ್ಲಿ ಚರ್ಚಿಸಿ, ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಇನ್‌ಸ್ಪೆಕ್ಟರ್‌ ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT