ಸೋಮವಾರ, ಆಗಸ್ಟ್ 15, 2022
23 °C

PV Web Exclusive | ಜನ್ಮದಿನದ ಸಂಭ್ರಮಕ್ಕೆ ಅರಳಿದ ಪರಿಸರ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಕುಂದವಾಡದ ಬಳಿ ಸಾಗುತ್ತಿದ್ದ ವೇಳೆ ಸತ್ಯನಾರಾಯಣ ಕ್ಯಾಂಪ್ ಬಳಿ ಹೋಗುತ್ತಿದ್ದಂತೆ ಒಂದು ಆಂಜನೇಯ ಸ್ವಾಮಿ ದೇವಾಲಯ ಸಿಕ್ಕಿತು. ದೇವಾಲಯದ ಮುಂದೆ ಸಾಲು ಮರಗಳು ಎದುರಾದವು. ಹೂವಿನ ಗಿಡಗಳು ಕಂಪು ಸೂಸಿದವು. ಈ ಗಿಡಗಳನ್ನು ನೆಟ್ಟಿದ್ದು ಯಾರು ಎಂದು ವಿಚಾರಿಸಿದರೆ ಸಿಗುವ ಉತ್ತರ: ಎನ್.ಎಸ್. ವೆಂಕಟರಾಮಾಂಜನೇಯ ಸ್ವಾಮಿ.

ಅನತಿ ದೂರ ಸಾಗುತ್ತಿದ್ದಂತೆಯೇ ಕಣ್ಮನ ಸೂರೆಗೊಳ್ಳುವ ತೋಟವೊಂದು ಎದುರಾಯಿತು. ಅಲ್ಲಿ ನಿಂತಿದ್ದವರೇ ವೆಂಕಟರಾಮಾಂಜನೇಯ ಸ್ವಾಮಿ. ಪ್ರಗತಿಪರ ಕೃಷಿಕರಾಗಿರುವ ಇವರು ಪರಿಸರ ಪ್ರೇಮಿಯೂ ಹೌದು. ಊರ ಓಣಿಯಲ್ಲಿ ಬೆಳೆದಿರುವ ಮರಗಳ ಬಗ್ಗೆ ಕೇಳಿದಾಗ ಅವರಿಂದ ಸಿಕ್ಕಿದ ಉತ್ತರವೇ ಕೂತುಹಲವಾಗಿತ್ತು. 2009ರಲ್ಲಿ ತಮ್ಮ ಜನ್ಮದಿನಕ್ಕೆ ನೆಟ್ಟ ಗಿಡಗಳು ಅವು ಎಂದರು.

ಹೌದು, 11 ವರ್ಷಗಳ ಹಿಂದೆ ನೆಟ್ಟ ಸಸಿಗಳು ಇಂದು ಮರಗಳಾಗಿ ಬೆಳೆದು ಜನರಿಗೆ ನೆರಳು ನೀಡುತ್ತಿವೆ. ಬೆಳೆದ ಹೂವಿನ ಗಿಡಗಳು ದೇವರ ಕೊರಳಿಗೆ ಮಾಲೆಯಾಗುತ್ತಿವೆ. ಬಹುತೇಕ ಮಂದಿಗೆ ಕೇಕ್ ಕತ್ತರಿಸಿ, ಗುಂಡು–ತುಂಡು ಪಾರ್ಟಿ ಮಾಡಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ ವೆಂಕಟರಾಮಾಂಜನೇಯ ಸ್ವಾಮಿ ಅವರ ಜನ್ಮದಿನ ಬಂತೆಂದರೆ ಪರಿಸರಕ್ಕೆ 50 ಇಲ್ಲವೇ 100 ಗಿಡಗಳು ಭೂಮಿ ತಾಯಿಯ ಮಡಿಲು ಸೇರುತ್ತವೆ.

ಇವರ 36 ಎಕರೆ ತೋಟದಲ್ಲಿ ಎಷ್ಟೆಲ್ಲಾ ಹಣ್ಣಿನ ಮರಗಳು, ಔಷಧೀಯ ಸಸ್ಯಗಳು, ಒಂದೇ ಜಮೀನಿನಲ್ಲಿ ಆದಾಯ ತಂದು ಕೊಡುವ ಹತ್ತಾರು ತರಕಾರಿಗಳು, ತೆಂಗು ಅಡಿಕೆ ತೋಟಗಳು, ನೆಲದಲ್ಲಿ ಅಸಂಖ್ಯಾತ ಎರೆಹುಳುಗಳ ನರ್ತನ, ಅಪರೂಪದ ಔಷಧೀಯ ಗಿಡಗಳು ಕಣ್ಮನ ಸೆಳೆಯುತ್ತವೆ.

ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಿ ಲಾಭದಾಯಕವಾಗಿ ಆದಾಯ ಬರುವಂತೆ ತೋಟವನ್ನು ರೂಪುಗೊಳಿಸಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕವನ್ನು ಬಳಸದೇ ಬೆಳೆ ಬೆಳೆದಿರುವುದು ಇವರ ವಿಶೇಷ. ತೋಟಗಾರಿಕೆ ಬೆಳೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿ ನಿರಂತರವಾಗಿ ಆದಾಯ ಗಳಿಸುತ್ತಿದ್ದಾರೆ. ಇವರ ಶಿಸ್ತುಬದ್ಧ ಕೃಷಿಯಲ್ಲಿ ನೋಡಿ ಕಲಿಯುವುದು ಸಾಕಷ್ಟಿದೆ. ತೋಟಗಾರಿಕೆ ಬೆಳೆಗಳಿಗೆ ಆರಂಭದಲ್ಲಿ ಬಿಟ್ಟರೆ ಆನಂತರದ ದಿನಗಳಲ್ಲಿ ಯಾವುದೇ ಖರ್ಚು ಮಾಡದಿರುವುದು ಇವರ ಕೃಷಿಯ ವಿಶೇಷ. ಕಳೆ ತೆಗೆಯುವುದನ್ನು ಬಿಟ್ಟು ನಾಲ್ಕಾರು ವರ್ಷಗಳಾಗಿವೆ. ಜಮೀನು ಪೂರ್ತಿ, ಅಲ್ಲಲ್ಲಿ ಗ್ಲಿರಿಸೀಡಿಯಾ ಗಿಡಗಳನ್ನು ಬೆಳೆಸಿದ್ದಾರೆ. ಇವನ್ನು ತಿಂಗಳಿಗೊಮ್ಮೆ ಕಟಾವು ಮಾಡಿ, ಅಲ್ಲಲ್ಲಿ ಮುಚ್ಚಿಗೆ ಮಾಡುತ್ತಾರೆ. ಎರೆಗೊಬ್ಬರಯುಕ್ತ ಭೂಮಿಯಿಂದಾಗಿ ಬೆಳೆಗಳ ಇಳುವರಿ ಹೆಚ್ಚಿದೆ. ಕೀಟ, ರೋಗರುಜಿನಗಳ ಹಾವಳಿ ಇಲ್ಲ. ಫಸಲಿನ ಗಾತ್ರ ಮತ್ತು ತೂಕ ಹೆಚ್ಚಾಗಿದೆ.

ಇವರ ತೋಟದಲ್ಲಿ 120ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಟ್ಟಿದ್ದು, ಅವುಗಳೆಲ್ಲಾ ಮರಗಳಾಗಿ ಹಣ್ಣು ನೀಡುತ್ತಿವೆ. ಕೆಲವೊಂದು ಔಷಧೀಯ ಸಸ್ಯಗಳು, ತುಂಬ ಬೆಲೆಬಾಳುವ ಮರಗಳನ್ನೂ ಬೆಳೆಸಿದ್ದಾರೆ.

ಪಾಲಪತ್ತರ್ ಸಪೋಟ, ಹಾಲು ಸಪೋಟ, ಮೋಸಂಬಿ, ಕಿತ್ತಳೆ, ಚಕ್ಕೋತ, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಗೋಡಂಬಿ, ಬಾದಾಮಿ, ನೇರಳೆ, ಹುಣಸೆ, ಸಿಹಿ ಹುಣಸೆ, ದ್ವಾರ ಹುಣಸೆ, ನೆಲ್ಲಿಕಾಯಿ, ಬೆಟ್ಟದ ನೆಲ್ಲಿಕಾಯಿ, ಅಂಜೂರ, ಬೇಲದ ಹಣ್ಣು, ಕೆಂಪು ಪೇರಳೆ, ಸಾದಾ ಪೇರಳೆ, ಲಲಿತ ಪೇರಳೆ, ಕೇಜಿ ಪೇರಳೆ, ಥೈಯ್ಲಾಂಡ್ ಪೇರಳೆ, ದಾಳಿಂಬೆ, ಏಲಕ್ಕಿ ಬಾಳೆ, ಪಚ್ಚೆ ಬಾಳೆ, ತರಕಾರಿ ಬಾಳೆ, ಅನಾನಸ್, ಕಬ್ಬು, ಪಾಮೇರಾ ಪಾಮ್, ತೋತಾಪುರಿ ಮಾವು, ನೀಲಂ ಮಾವು, ಬಂಗಿಪಲ್ಲಿ ಮಾವು, ಸುವರ್ಣರೇಖ ಮಾವು, ಪುನಸ್ಕಾಪು(2 ಬೆಳೆ ಮಾವು) ಪಂಡೂರುವಾರಿ ಮಾವು, ಕೊತ್ತಪ್ಪಲ್ಲಿ ಕೊಬ್ಬರಿ ಮಾವು, ಮಲ್ಲಿಕ ಮಾವು, ಹಿಮಾನ್ ಪಸಂದ್ ಮಾವು, ಸಿಹಿ ಮಾವು(ಕೊಬ್ಬರಿ ತರಹ) ಚೆರಕು ರಸ ಮಾವು (ಕಬ್ಬಿನರಸ) ಇನ್ನಿತರೆ ಹಣ್ಣುಗಳು ಘಮ್ಮೆನ್ನುತ್ತವೆ.


ದಾವಣಗೆರೆಯ ಸತ್ಯನಾರಾಯಣ ಕ್ಯಾಂಪ್‌ನ ರಸ್ತೆ ಬದಿಯಲ್ಲಿ ವೆಂಕಟರಾಮಾಂಜನೇಯ ಅವರ ಜನ್ಮದಿನದ ಪ್ರಯುಕ್ತ ನೆಟ್ಟ ಗಿಡಗಳು ಮರಗಳಾಗಿ ಬೆಳೆದಿವೆ. 

ತೋಟದಲ್ಲಿಯೇ ಅರಣ್ಯ ಕೃಷಿ

ಅರಣ್ಯದಲ್ಲಿ ಬೆಳೆಯುವಂತಹ ಸಾಗುವಾನಿ (ತೇಗ), ಮಹಾಘನಿ, ಸಿಲ್ವರ್ ಓಕ್, ಬೇವು, ಹೆಬ್ಬೇವು, ರಕ್ತ ಚಂದನ, ಶ್ರೀಗಂಧದ ಬಿ.ಟಿ. ಬಿದಿರು, ಮತ್ತಿ ಮರಗಳನ್ನು ತೋಟದಲ್ಲಿಯೇ ಬೆಳೆದಿದ್ದಾರೆ. ತೆಂಗು ಲೋಕಲ್, ಹೈಬ್ರಿಡ್ ತೆಂಗು, ಕೋಕೊ, ಈಚಲ ಮರ, ಅಂಟುವಾಳ, ಅಡಿಕೆ ಮರಗಳು ಕಂಗೊಳಿಸುತ್ತವೆ. ಅಮೃತಾಂಜನ್ ಸಸಿ, ಲಾವಂಚ ಸಸಿ, ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ಇವುಗಳ ಜತೆಗೆ ಭತ್ತ ಬೆಳೆಯುವುದು, ಹೈನುಗಾರಿಕೆ, ಮೀನುಗಾರಿಕೆ, ಜೇನು ಕೃಷಿ ಮಾಡಿದ್ದಾರೆ.

ಸೌಗಂಧಿಕಾಪುಷ್ಪ, ಅಂಟುವಾಳ, ಲಕ್ಷ್ಮಣಫಲ, ಪುಂಡಿ ಪಲ್ಯದ ಸೊಪ್ಪು, ಗಾರ್ಸಿನಿಯಾ ಕಾಂಬೊಗಿಯ, ಮಲೈರ್ ಆ್ಯಪಲ್, ಆಫ್ರಿಕನ್ ಅಂಜೂರ ಮುಂತಾದ ಗಿಡಗಳನ್ನು ಬೆಳೆಸಿದ್ದಾರೆ. ಗಾರ್ಸಿನಿಯಾ ಕಾಂಬೊಗಿಯ ಜಾತಿಯ ಹಣ್ಣು ತೂಕ ಇಳಿಸಲು, ಆಫ್ರಿಕನ್ ಅಂಜೂರು ವೀರ್ಯ ವೃದ್ಧಿಗೆ ಸಹಕಾರಿ ಎಂದು ಅಲ್ಲಿ ಬೆಳೆದಿರುವ ತಳಿಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಸಾಲವಿದ್ದರೂ ಹೆದರಲಿಲ್ಲ

ಬಹುತೇಕ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ವೆಂಕಟರಾಮಾಂಜನೇಯ ಸ್ವಾಮಿ ಸಾಲಕ್ಕೆ ಹೆದರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಬೆಳೆದರು. 1990ರಲ್ಲಿ ವೆಂಕಟರಾಮಾಂಜನೇಯ ಅವರ ತಂದೆ ನೆಕ್ಕಂಬಿ ಸುಬ್ಬಾರಾವ್ ಅನಾರೋಗ್ಯಕ್ಕೆ ತುತ್ತಾದರು. ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಅನಾರೋಗ್ಯ ತೀವ್ರಗೊಂಡು ಸುಬ್ಬಾರಾವ್ ಅವರು 1993ರಲ್ಲಿ ಕೊನೆ ಉಸಿರೆಳೆದರು. ಚಿಕ್ಕ ವಯಸ್ಸಿಗೆ ಕುಟುಂಬದ ಹೊಣೆ ಇವರ ಹೆಗಲ ಮೇಲೆ ಬಿತ್ತು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಇವರಿಗೆ ಓದುವ ಆಸೆ ಇದ್ದರೂ ಸಾಲದ ಹೊರೆ ಸಂಸಾರದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತ್ತು. ತಂದೆ ಬಿಟ್ಟುಹೋದ ಜಮೀನಿನಲ್ಲಿಯೇ ಕೃಷಿ ಮುಂದುವರೆಸಿದರು. ಸಂಸಾರ ವಿಭಜನೆಯಾದಾಗ ಆಂಜನೇಯ ಅವರ ಚಿಕ್ಕಪ್ಪನವರ ಭಾಗಕ್ಕೆ ಹಣ್ಣಿನ ಮರಗಳು ಸೇರ್ಪಡೆಗೊಂಡವು. ಹಣ್ಣು ಕೇಳಿದಾಗ ಅವರು ಕೊಡದೇ ಹೀಯಾಳಿಸುತ್ತಿದ್ದರು. ಅವರ ಮೂದಲಿಕೆಯ ಮಾತುಗಳೇ ಇವರಿಗೆ ಹಣ್ಣಿನ ಮರ ಬೆಳೆಯಲು ಪ್ರೇರಣೆಯಾದವು. ತಾಯಿ ಹೇಳಿದಂತೆ "ನೀನು ಯಾರ ಬಳಿಯೂ ಕೈಯೊಡ್ಡಬಾರದು. ಬದಲಾಗಿ ನೀನೆ ಹಣ್ಣನ್ನು ಬೆಳೆ' ಎಂಬ ನುಡಿಗಳೇ ಇವರಿಗೆ ಸ್ಫೂರ್ತಿಯಾದವು.


ವೆಂಕಟರಾಮಾಂಜನೇಯ ಅವರ ತೋಟದಲ್ಲಿ ಬೆಳೆದಿರುವ ಮರಗಳು

ಜನ್ಮದಿನದ ನೆಪದಲ್ಲಿ...

ಸೀತಾರಾಮಾಂಜನೇಯ ಅವರು ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವಾಗ ಒಮ್ಮೆ ಇವರಿಗೆ ಅನಿಸಿದ್ದು: 'ಊಟ ತಿಂಡಿಯಲ್ಲೇ ಖುಷಿ ಪಟ್ಟರೆ ಅದು ಒಂದೇ ದಿನ ನಂತರ ಮರೆತುಹೋಗುತ್ತದೆ. ಆದರೆ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು’. ಆಗ ಹೊಳೆದಿದ್ದು ಗಿಡ ನೆಡುವುದು. ಅಂದೇ ಇವರು ನಿರ್ಧರಿಸಿ ತಮ್ಮ ಜನ್ಮದಿನ ಬಂದಾಗಲೆಲ್ಲ, ಶಾಲಾ, ಕಾಲೇಜು, ಗ್ರಾಮ ಪಂಚಾಯಿತಿ, ಅಂಗವನಾಡಿ, ಪಶು ಆಸ್ಪತ್ರೆ ಸೇರಿ ಸಾರ್ವಜನಿಕ ಕಟ್ಟಡಗಳಲ್ಲಿ ಗಿಡಗಳು ಭೂಮಿಗೆ ಸೇರುತ್ತವೆ. ಮಕ್ಕಳ ಹುಟ್ಟು ಹಬ್ಬ ಬಂತೆಂದರೆ ಎಲ್ಲಾದರೂ ಒಂದು ಕಡೆ 50 ಸಸಿಗಳನ್ನು ನಡೆಸುತ್ತಾರೆ.

1999ರಿಂದ ಇಲ್ಲಿಯವರೆಗೆ 1500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಬರೀ ಗಿಡ ನೆಟ್ಟರೆ ಜವಾಬ್ದಾರಿ ಮುಗಿಯುವುದಿಲ್ಲ. ಅವುಗಳ ಪೋಷಣೆ ಮುಖ್ಯ. ಶ್ರೀಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳ ಕಾರ್ಯಕರ್ತರಿಗೆ ಅವರು ಈ ಜವಾಬ್ದಾರಿ ನೀಡುತ್ತಿದ್ದಾರೆ. ಅವರು ಅಚ್ಚುಕಟ್ಟಾಗಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಅಲ್ಲದೇ ಅವರ ಸ್ನೇಹಿತರು ಇಲ್ಲವೇ ನಂಬಿಕೆಗೆ ಅರ್ಹರಾದವರಿಗೆ ಸಸಿಗಳ ಪೋಷಣೆಯ ಹೊರೆ ಹೊರಿಸುತ್ತಾರೆ. ಕುಂದವಾಡ ಶಾಲೆ, ಸಾಲುಕಟ್ಟೆ ಗ್ರಾಮ ಪಂಚಾಯಿತಿ, ಬೇವಿನಹಳ್ಳಿ ದೇವಸ್ಥಾನ, ಮಲ್ಲನಾಯಕನಹಳ್ಳಿ, ಸತ್ಯನಾರಾಯಣ ಕ್ಯಾಂಪ್, ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಣ್ಣೂರು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಗುಡದೂರು ಬಳಿ ಇವರು ನೆಟ್ಟ ಸಸಿಗಳು ಮರಗಳಾಗಿ ಬೆಳೆದಿವೆ. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯಗಳು ನಡೆದರೆ ಬಂದ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವುದು ಇವರ ಹವ್ಯಾಸ. ಈ ಬಾರಿ ಲೋಕಿಕೆರೆಯಲ್ಲಿ 50 ಗಿಡಗಳನ್ನು ನೆಟ್ಟಿದ್ದಾರೆ.

ಗೌರವ ಡಾಕ್ಟರೇಟ್ ಪಡೆದ ಕೃಷಿಕ

ಇವರ ಪರಿಸರ ಪ್ರೇಮಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. 2014–15ರಲ್ಲಿ ಕೃಷಿ ಇಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ರಾಜ್ಯ ಮಟ್ಟದ ಅನುಶೋಧಕರ ರೈತರ ಸಮ್ಮೇಳನದಲ್ಲಿ ಪ್ರಶಸ್ತಿ ಲಭಿಸಿದೆ. 2015–16ರಲ್ಲಿ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಇವಿಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆ. ವಿಯೆಟ್ನಾಂನ ಜನರೇಟಿಂಗ್ ಗ್ಲೋಬಲ್ ಸಾಲಿಡಾರಿಟಿ ಪಾರ್ಟನರ್‌ಶಿಪ್ ಸಂಸ್ಥೆ ಗ್ಲೋಬಲ್ ಎಕ್ಸಲೆನ್ಸಿ ಅವಾರ್ಡ್ ಫಾರ್ ಅಗ್ರಿಕಲ್ಚರಲ್ ಡೆವಲಪ್‌ಮೆಂಟ್ ವಿತ್ ಗೋಲ್ಡ್ ಮೆಡಲ್, ವಿಜಯವಾಡದ ಕಮ್ಮವಾರಿ ಸಂಘದಿಂದ ಇಂಡಿಯನ್ ಕಮ್ಮ ಲೆಜೆಂಡರಿ ಅವಾರ್ಡ್‌ಗಳು ಬಂದಿವೆ. 2019ರಲ್ಲಿ ಫ್ರಾನ್ಸ್‌ ಇಕೋಲೆ ಸುಪಿರಿಯಟ್ ರಾಬರ್ಟ್ ಡಿ ಸರ್ಬನ್ ಸಂಸ್ಥೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ.

‘ಪ್ರತಿಯೊಬ್ಬರೂ ಮದುವೆ ಕಾಲಕ್ಕೆ 100 ಗಿಡಗಳನ್ನು ಬೆಳೆಸಿದರೆ ಅವರ ಮಕ್ಕಳ ಮದುವೆಯ ಕಾಲಕ್ಕೆ ಫಲ ನೀಡುತ್ತವೆ. ಪ್ರತಿಯೊಬ್ಬರೂ ಜನ್ಮದಿನ, ಮದುವೆಯ ಸಂಭ್ರಮಗಳಿಗೆ ಗಿಡ ನೆಟ್ಟಿದ್ದೇ ಆದರೆ ಉತ್ತಮ ಗಾಳಿ, ನೀರು, ಬೆಳಕು ಸಿಗುತ್ತದೆ. ಯಾವುದಾದರೂ ವಿಮೆ ಮಾಡಿಸಿದರೆ ಹಲವು ವರ್ಷಗಳಿಗೆ ಅದು ಮುಗಿದುಹೋಗುತ್ತದೆ. ಆದರೆ ಮರಗಳನ್ನು ಬೆಳೆಸಿದರೆ ಶಾಶ್ವತವಾಗಿ ಇರುತ್ತವೆ. ಮುಂದಿನ ದಿನಗಳಲ್ಲಿ ಆಮ್ಲಜನಕ ಖರೀದಿ ಮಾಡುವುದು ತಪ್ಪುತ್ತದೆ’ ಎನ್ನುತ್ತಾರೆ ವೆಂಕಟರಾಮಾಂಜನೇಯ ಸ್ವಾಮಿ.

ವೆಂಕಟ ರಾಮಾಂಜನೇಯ ಸ್ವಾಮಿ ಸಂಪರ್ಕ ಸಂಖ್ಯೆ- 92433 63446

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು