ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಮಾಲೀಕನಿಗೆ ₹ 30 ಸಾವಿರ ಪರಿಹಾರ

₹ 3.68 ಲಕ್ಷ ದುರಸ್ತಿ ವೆಚ್ಚ ಪಾವತಿಸಲು ಬಜಾಜ್‌ ಅಲಯನ್ಸ್‌ಗೆ ಗ್ರಾಹಕರ ವೇದಿಕೆ ಸೂಚನೆ
Last Updated 11 ಜನವರಿ 2020, 10:45 IST
ಅಕ್ಷರ ಗಾತ್ರ

ದಾವಣಗೆರೆ: ವಿಮೆ ಕಂತು ಪಾವತಿಸಿದ್ದರೂ ಅಪಘಾತಕ್ಕೀಡಾದ ಕಾರಿಗೆ ಪರಿಹಾರ ನೀಡದೇ ಸೇವಾಲೋಪ ಎಸಗಿದ ಬಜಾಜ್‌ ಅಲಯನ್ಸ್‌ ವಿಮಾ ಕಂಪನಿಯು ಅರ್ಜಿದಾರನಿಗೆ ₹ 3,68,387 ವಿಮಾ ಪರಿಹಾರ ಹಾಗೂ ಈ ಮೊತ್ತಕ್ಕೆ ಶೇ 9 ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.

ಆದಾಯ ನಷ್ಟವಾಗಿರುವುದಕ್ಕೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರಾಮನಗರದ ಜಿ.ಕೆ. ಬಸವರಾಜ್ ಅವರಿಗೆ ವಿಮಾ ಕಂಪನಿಯು ₹ 20 ಸಾವಿರ ನಷ್ಟವನ್ನು ಭರಿಸಿಕೊಡಬೇಕು. ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 5,000 ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಟಿ.ಎನ್. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ್‌ ಜಂಬಗಿ ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ಬಸವರಾಜ್‌ ಅವರು ತಮ್ಮ ಫೋಕ್ಸ್‌ ವ್ಯಾಗನ್‌ ಕಾರಿಗೆ ₹ 33,845 ವಿಮೆ ಕಂತು ಪಾವತಿಸಿದ್ದರು. 2017ರ ಮೇ 21ರಂದು ರಾತ್ರಿ ದಾವಣಗೆರೆಯ ಬಿಐಇಟಿ ರಸ್ತೆಯಲ್ಲಿ ಈ ಕಾರು ಅಪಘಾತವಾಗಿತ್ತು. ಈ ಬಗ್ಗೆ ಇಲ್ಲಿನ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಅಪಘಾತದ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡಿದ್ದ ಬಸವರಾಜ್‌, ಪರಿಹಾರ ನೀಡುವಂತೆ ಕೋರಿದ್ದರು. ಅಪಘಾತಕ್ಕೀಡಾದ ಕಾರಿಗೆ ₹ 3,68,387 ನಷ್ಟ ಭರಿಸಿಕೊಡಬಹುದು ಎಂದು ಸ್ವತಂತ್ರ ಸರ್ವೇಯರ್ ವರದಿಯನ್ನೂ ನೀಡಿದ್ದರು. ಆದರೆ, ಅಪಘಾತ ವೇಳೆ ಚಾಲಕ ಮದ್ಯಸೇವನೆ ಮಾಡಿದ್ದ ಎಂದು ಎಫ್‌ಐಆರ್‌ನಲ್ಲಿರುವ ಅಂಶವನ್ನೇ ಮುಂದಿಟ್ಟುಕೊಂಡು ವಿಮಾ ಕಂಪನಿಯು ಪರಿಹಾರ ನೀಡಲು ನಿರಾಕರಿಸಿತ್ತು.

ಹೀಗಾಗಿ ಬಸವರಾಜ್‌ ಅವರು 2019ರ ನವೆಂಬರ್‌ 25ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು. ವಿಮಾ ಕಂಪನಿಯು ₹ 9,35,345 ನಷ್ಟ ಪರಿಹಾರ ಹಾಗೂ ₹ 50 ಸಾವಿರ ದಾವೆ ವೆಚ್ಚವನ್ನು ಭರಿಸಿಕೊಡಬೇಕು ಎಂದು ಅರ್ಜಿದಾರರ ಪರ ವಕೀಲ ಗೋಪಾಲ್‌ ಎಂ. ವಾದಿಸಿದ್ದರು. ಪುಣೆಯಲ್ಲಿರುವ ಬಜಾಜ್ ಅಲಯನ್ಸ್‌ ವಿಮಾ ಕಂಪನಿ, ಹುಬ್ಬಳ್ಳಿಯಲ್ಲಿರುವ ಕಂಪನಿಯ ಕ್ಲೇಮ್‌ ಮ್ಯಾನೇಜರ್, ದಾವಣಗೆರೆಯಲ್ಲಿರುವ ಕಂಪನಿಯ ಮ್ಯಾನೇಜರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು.

ಅಪಘಾತ ನಡೆದ 16 ದಿನಗಳ ಬಳಿಕ, ಅದರಲ್ಲೂ ಪೊಲೀಸ್‌ ಠಾಣೆಯಿಂದ ವಾಹನ ತೆಗೆದುಕೊಂಡು ಹೋದ ಏಳು ದಿನಗಳ ನಂತರ ಮಾಹಿತಿ ನೀಡುವ ಮೂಲಕ ಷರತ್ತು ಉಲ್ಲಂಘಿಸಲಾಗಿದೆ. ವಾಹನ ಚಾಲಕ ಮದ್ಯಸೇವನೆ ಮಾಡಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಿಮಾ ಕಂಪನಿ ವಾದ ಮಂಡಿಸಿತ್ತು.

ಅಪಘಾತ ನಡೆದ ಬಳಿಕ ಚಾಲಕ ಸ್ಥಳದಲ್ಲಿ ಇರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಚಾಲಕ ಮದ್ಯಸೇವನೆ ಮಾಡಿದ್ದ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ವಿಮಾ ಪಾಲಿಸಿ ಚಾಲ್ತಿಯಲ್ಲಿರುವುದರಿಂದ ಪರಿಹಾರ ಹಣ ಪಾವತಿಸುವುದು ಕಂಪನಿಯ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟ ಗ್ರಾಹಕರ ವೇದಿಕೆಯು, 45 ದಿನಗಳ ಒಳಗೆ ಪ್ರತಿವಾದಿಗಳು ಗ್ರಾಹಕನಿಗೆ ಪರಿಹಾರ ಹಣ ಪಾವತಿಸಬೇಕು ಎಂದು ಸೂಚಿಸಿದೆ.

ಕಾರಿನ ದುರಸ್ತಿ ವೆಚ್ಚ ₹ 1.10 ಲಕ್ಷ ಪಾವತಿಗೆ ಆದೇಶ

ನಗರದ ಬಂಬೂ ಜಜಾರ್‌ನ ಸತೀಶ್‌ ಎಂ.ಎನ್‌ ಅವರಿಗೆ ಸ್ಕೋಡಾ ರ‍್ಯಾಪಿಡ್‌ ಕಾರ್ ದುರಸ್ತಿ ವೆಚ್ಚವಾಗಿ ₹ 1,10,146 ಹಾಗೂ ಈ ಮೊತ್ತಕ್ಕೆ ಶೇ 9ರಷ್ಟು ಬಡ್ಡಿಯನ್ನು ಬಜಾಜ್‌ ಅಲಯನ್ಸ್‌ ವಿಮಾ ಕಂಪನಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.

ಸೇವಾ ಲೋಪದಿಂದಾಗಿ ಅರ್ಜಿದಾರರಿಗೆ ಆಗಿರುವ ₹ 20 ಸಾವಿರ ಆದಾಯ ನಷ್ಟವನ್ನು ವಿಮಾ ಕಂಪನಿ ಭರಿಸಿಕೊಡಬೇಕು. ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಪರಿಹಾರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಗ್ರಾಹಕರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ್‌ ಜಂಬಗಿ ಒಳಗೊಂಡ ಪೀಠವು ಸೂಚಿಸಿದೆ.

ಸತೀಶ್‌ ಅವರು ತಮ್ಮ ಕಾರಿಗೆ ₹ 52,896 ವಿಮೆ ಕಂತು ಪಾವತಿಸಿದ್ದರು. 2018ರ ನವೆಂಬರ್‌ 8ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಐಹೊಳೆಯಲ್ಲಿ ಕಾರು ಅಪಘಾತವಾಗಿತ್ತು. ಕಾರಿನ ದುರಸ್ತಿಗಾಗಿ ₹ 1,44,281 ಖರ್ಚು ಮಾಡಿದ್ದ ಸತೀಶ್‌ ಅವರು, ತಮಗೆ ₹ 2 ಲಕ್ಷ ಪರಿಹಾರ ಕೊಡಿಸಬೇಕು ಎಂದು 2019ರ ಜನವರಿ 19ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು. ಸತೀಶ್‌ ಪರವಾಗಿ ವಕೀಲ ಡಿ.ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT