ದಾವಣಗೆರೆ | ರಂಜಾನ್‌ಗೆ ಕೊರೊನಾ ಕರಿನೆರಳು

ದಾವಣಗೆರೆ: ಕೋವಿಡ್–19ನಿಂದ ಲಾಕ್‌ಡೌನ್ ಘೋಷಣೆಯಾಗಿದ್ದು, ನಗರದಲ್ಲಿ ಈದ್–ಉಲ್–ಫಿತ್ರ್ ಸಂಭ್ರಮಕ್ಕೆ ಕೊರೊನಾ ಕರಿನೆರಳು ಬಿದ್ದಿದೆ.
ಈದ್–ಉಲ್–ಫಿತ್ರ್ ಹಬ್ಬಕ್ಕೆ ಮೂರು ದಿನಗಳು ಬಾಕಿ ಇವೆ. ಹಳೇ ದಾವಣಗೆರೆಯ ಭಾಗದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಅಲ್ಲಿನ ಬಡಾವಣೆಗಳು ಸೀಲ್‌ಡೌನ್ ಆಗಿವೆ. ಅವರು ಆ ಬಡಾವಣೆಗಳಿಂದ ಹೊರಬರುವುದು ಅಸಾಧ್ಯವಾಗಿದೆ.
ರಂಜಾನ್ ಮಾಸ ಎಂದರೆ ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ ದಾನ ಧರ್ಮ ಮಾಡಿ ಆಚರಿಸುವ ಪವಿತ್ರ ಹಬ್ಬ. ಮಸೀದಿಯ ರಸ್ತೆಗಳು ಹೊಸ ಬಟ್ಟೆ ಹಾಗೂ ಆಭರಣ ಖರೀದಿಸಿ ಸಂಭ್ರಮಿಸಬೇಕಾದವರ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಕೊರೊನಾ ವೈರಸ್ ಬಾರದೇ ಇದ್ದಿದ್ದರೆ ಈ ವೇಳೆಗಾಗಲೇ ಮಸೀದಿ ಬದಿಯ ರಸ್ತೆಗಳಲ್ಲಿ ಜನಸಂದಣಿ ಇರುತ್ತಿತ್ತು.
ವಿವಿಧ ಉಡುಪುಗಳು, ಟೋಪಿ, ಬಾದಾಮ್, ಪಿಸ್ತಾ, ಖರ್ಜೂರ, ಒಣದ್ರಾಕ್ಷಿ, ಶ್ಯಾವಿಗೆ, ಸುಗಂಧ ದ್ರವ್ಯಗಳು, ಚಪ್ಪಲಿ, ಶೂ, ಬಳೆ, ಫ್ಯಾನ್ಸಿ ಐಟಂಗಳು, ಮಕ್ಕಳ ಆಟಿಕೆಗಳು, ಮಕ್ಕಳ ಬಟ್ಟೆಗಳ ವ್ಯಾಪಾರ ಜೋರಾಗಿರುತ್ತಿತ್ತು. ಒಂದು ರೀತಿಯಲ್ಲಿ ವ್ಯಾಪಾರಿಗಳಿಗೆ ಸುಗ್ಗಿಯಾಗುತ್ತಿತ್ತು. ಆದರೆ ಕೊರೊನಾ ಆ ಸಂಭ್ರಮವನ್ನು ಕಸಿದಿದೆ.
ಹಿಂದೂಗಳು ಯುಗಾದಿ, ಕ್ರೈಸ್ತರು ಗುಡ್‌ಫ್ರೈಡೆ ಹಾಗೂ ಜೈನರು ಮಹಾವೀರ ಜಯಂತಿ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದಾರೆ. ಅದರಂತೆ ಮುಸ್ಲಿಮರು ರಂಜಾನ್ ಅನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ಬಟ್ಟೆ, ಬಳೆ, ಚಪ್ಪಲಿ, ಶೂಗಳನ್ನು ಖರೀದಿಸದೇ ಸರಳವಾಗಿ ಆಚರಿಸಿ ಹಬ್ಬದ ಶಾಪಿಂಗ್‌ನ ಉಳಿತಾಯದ ಹಣವನ್ನು ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.
‘ಬಹುತೇಕ ಮಂದಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಬಡಾವಣೆಗಳ ಜನರಿಗೆ ಈವರೆಗೆ ಆಹಾರದ ಕಿಟ್‌ಗಳು ದೊರೆತಿಲ್ಲ. ಇದರಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಎಲ್ಲಮ್ಮ.
‘ಬಹುತೇಕ ಮಂದಿ ಕಟ್ಟಡ ಕಾರ್ಮಿಕರು, ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುವವರು. ಬಾರ್ ಬೆಂಡಿಂಗ್ ಕೆಲಸದವರು ಇದ್ದಾರೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರಿಗೆ ಕೆಲಸವಿಲ್ಲದಂತಾಗಿದೆ. ಈದ್ ಉಲ್ ಫಿತ್ರ್ ಹಬ್ಬದ ಖರೀದಿಗೂ ಹಣವಿಲ್ಲದಂತಾಗಿದೆ’ ಎಂಬುದು ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಅಧ್ಯಕ್ಷ ಎಂ.ಷಬೀರ್ ಸಾಬ್ ಅವರ ಮಾತು.
*
ಲಾಕ್‌ಡೌನ್‌ನಿಂದಾಗಿ ಕೂಲಿಯೂ ಇಲ್ಲ. ಮುಖ ನೋಡಿ ಕಿಟ್ ವಿತರಿಸಿದ್ದಾರೆ. ಪತಿಯೂ ಕೂಲಿಗೆ ಹೋಗುತ್ತಿಲ್ಲ. ನಾನು ಬೀಡಿ ಕಟ್ಟುವುದನ್ನು ನಿಲ್ಲಿಸಿದ್ದೇನೆ. ಹಬ್ಬವನ್ನು ಆಚರಿಸುವುದಾದರೂ ಹೇಗೆ?
-ರಬಿಯಾ ಬಸ್ರಿ, ಮುಸ್ತಫಾನಗರ
*
ಗಂಡ ಗುಜರಿ ಕೆಲಸ ಮಾಡುತ್ತಾರೆ. ಈಗ ಅದೂ ಇಲ್ಲದಂತಾಗಿದೆ. ಸಾಲ ತಂದು ಊಟ ಮಾಡುತ್ತಿದ್ದೇವೆ. ಬಡವರಿಗೆ ಒಂದಷ್ಟು ಅಕ್ಕಿ, ಬೇಳೆಯನ್ನಾದರರೂ ಕೊಟ್ಟರೆ ಜೀವನ ಮಾಡುತ್ತೇವೆ.
-ಮಮತಾಜ್, ಶಿವನಗರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.