ಶನಿವಾರ, ಸೆಪ್ಟೆಂಬರ್ 25, 2021
29 °C
ಖಾಸಗಿ ಬ್ಯಾನರಡಿ ಸರ್ಕಾರಿ ಲಸಿಕೆ ನೀಡುವುದು ಸರಿಯಲ್ಲ

ಜನ ನಾಲ್ಕು ಬಾರಿ ಪಾಠ ಕಲಿಸಿರುವುದು ಕಣ್ಣೆದುರು ಇದೆ: ಜಿ.ಎಂ. ಸಿದ್ದೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಖಾಸಗಿ ಬ್ಯಾನರಡಿ ಸರ್ಕಾರದ ಲಸಿಕೆ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಜಿಲ್ಲಾಡಳಿತ ಸಂಕೀರ್ಣದ ಸಭಾಂಗಣದಲ್ಲಿ ಮಂಗಳವಾರ ಕೋವಿಡ್‌ಗೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಮೀನಾಕ್ಷಿ ಅವರು ಲಸಿಕೆ ವಿವರ ನೀಡುವಾಗ ಈ ವಿಚಾರ ಚರ್ಚೆಯಾಯಿತು.

‘ಖಾಸಗಿ ಬ್ಯಾನರ್‌ನಲ್ಲಿ ಯಾಕೆ ಲಸಿಕೆ ನೀಡುತ್ತೀರಿ’ ಎಂದು ಉಸ್ತುವಾರಿ ಸಚಿವರು ಪ್ರಶ್ನಿಸಿದರು. ‘ಖಾಸಗಿ ಬ್ಯಾನರ್‌ನಡಿ ನೀಡುತ್ತಿಲ್ಲ ಎಂದು’ ಆರ್‌ಸಿಎಚ್‌ಒ ಸ್ಪಷ್ಟನೆ ನೀಡಿದರು. ‘ನಿನ್ನೆ ಮೇಯರ್‌ ವಾರ್ಡ್‌ನಲ್ಲಿ ಲಸಿಕೆ ತಪ್ಪಿಸಲು ಸಂಸದರೇ ಕಾರಣ. ಮೇಯರ್‌ ಸಂಸದರಿಗೆ ಹೇಳಿದ್ದಾರೆ. ಸಂಸದರು ತಪ್ಪಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಖಾಸಗಿ ಬ್ಯಾನರಲ್ಲಿ ಸರ್ಕಾರದ ಲಸಿಕೆ ಯಾಕೆ ಹಾಕಬೇಕು. ಅವರ ಲಸಿಕೆ ಹಾಕಿಸಿಕೊಳ್ಳಲಿ’ ಎಂದು ಸಂಸದರು ಸಲಹೆ ನೀಡಿದರು.

‘ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ನನಗೆ ಇಲ್ಲಿನ ಜನರು ನಾಲ್ಕು ಬಾರಿ ಪಾಠ ಕಲಿಸಿದ್ದಾರೆ. ಇವರಿಂದ ಏನೂ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

ಅವರು ಎಷ್ಟು ಲಸಿಕೆ ಉಚಿತ ಕೊಟ್ಟಿದ್ದಾರೆ. ಎಷ್ಟು ಮಾರಿಕೊಂಡಿದ್ದಾರೆ ಎಂಬುದನ್ನು ತಿಳಿಸಿ ಎಂದು ಕೋರಿದರು.

10 ಸಾವಿರ, 14 ಸಾವಿರ, 20 ಸಾವಿರ ಈ ರೀತಿ ಮೂರು ಬಾರಿ ಲಸಿಕೆ ತರಿಸಿದ್ದಾರೆ. 4,600 ಲಸಿಕೆಯನ್ನು ಅವರ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಮಾಡಿದ್ದ ದರಕ್ಕೆ ನೀಡಿದ್ದಾರೆ. 19 ಸಾವಿರ ಲಸಿಕೆ ಈಗ ಅವರಲ್ಲಿ ಉಳಿಕೆ ಇದೆ. ಉಳಿದವುಗಳನ್ನು ಉಚಿತವಾಗಿ ನಿಡಿದ್ದಾರೆ’ ಎಂದು ಆರ್‌ಸಿಎಚ್‌ ಅಧಿಕಾರಿ ಮಾಹಿತಿ ನೀಡಿದರು.

ಅವರು ಉಚಿತವಾಗಿ ನೀಡಲಿ ಅಥವಾ ಮಾರಿಕೊಳ್ಳಲಿ. ಅದು ನಮಗೆ ಸಂಬಂಧಿಸಿದ್ದಲ್ಲ. ಆದರೆ ಅವರು ಹೇಳಿದ ಮಾತಿಗೆ ತಪ್ಪಬಾರದು. ನಮ್ಮ ಲಸಿಕೆಯನ್ನು ಅವರ ಬ್ಯಾನರ್‌ನಡಿ ಹಾಕಬಾರದು. ಸರ್ಕಾರದಿಂದ ಬರುವ ಲಸಿಕೆಯನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಛಾಯಾಚಿತ್ರ ಇರುವ ಬ್ಯಾನರ್‌ನಡಿಯೇ ನೀಡಬೇಕು. ಇದನ್ನು ಮೀರಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಸಾವಿನ ಸುಳ್ಳು ಲೆಕ್ಕ ಕೊಡುತ್ತಿಲ್ಲ: ಡಿಸಿ ಸ್ಪಷ್ಟನೆ
ಕೊರೊನಾದಿಂದ ಮೃತಪಟ್ಟವರ ಲೆಕ್ಕವನ್ನು ಸರಿಯಾಗಿ ನೀಡುತ್ತಿಲ್ಲ. ತಪ್ಪು ಲೆಕ್ಕ ನೀಡುತ್ತಿದ್ದಾರೆ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿದೆ. ನೀವು ಸುಳ್ಳು ಲೆಕ್ಕ ಕೊಡುತ್ತಿದ್ದೀರಾ’ ಎಂದು ಜಿಲ್ಲಾಧಿಕಾರಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಪ್ರಶ್ನಿಸಿದರು.

‘ನಾವು ಯಾವುದೇ ತಪ್ಪು ಲೆಕ್ಕ ಕೊಡುತ್ತಿಲ್ಲ. ಕೋವಿಡ್ ಸಾವು ಎಷ್ಟಾಗುತ್ತಿದೆ ಮತ್ತು ಕೋವಿಡ್ ಇಲ್‍ನೆಸ್‍ನಿಂದ ಎಷ್ಟು ಜನ ಮೃತಪಡುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ಯಾವುದನ್ನು ಮರೆ ಮಾಚುವ ಪ್ರಶ್ನೆಯೇ ಇಲ್ಲ. ಮರೆಮಾಚಿದರೂ ಅದರಿಂದ ನಮಗೇನು ಸಿಗುವುದಿಲ್ಲ. ಆರೋಗ್ಯ ಸಚಿವರು ಬಂದಿದ್ದ ಸಮಯದಲ್ಲಿ ಅವರು ನೀಡಿರುವ ಮಾರ್ಗಸೂಚಿ ಪ್ರಕಾರವೇ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ‌ ಬೀಳಗಿ ಸ್ಪಷ್ಟನೆ ನೀಡಿದರು.

‘ಲಸಿಕೆಗೋಸ್ಕರ ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ’
‘ಜಿಲ್ಲೆಗೆ ಹೆಚ್ಚಿಗೆ ಲಸಿಕೆ ತರಲು ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ಪತ್ರ ಬರೆದರೆ ಲಸಿಕೆ ಬರುತ್ತದೆ. ಅದನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಗೆ ಹಂಚುತ್ತಾರೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಜಿಲ್ಲೆಗೆ ಹೆಚ್ಚಿನ ಲಸಿಕೆ ಬರುವಂತೆ ನೋಡಿಕೊಳ್ಳುತ್ತೇನೆ. ನವೆಂಬರ್ ಒಳಗೆ ಇಡೀ ಜಿಲ್ಲೆಗೆ ಜಿಲ್ಲೆಯ ಜನರಿಗೆ ಎರಡು ಡೋಸ್ ಹಾಕಿಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಅವರು (ಶಾಮನೂರು) ನನ್ನನ್ನು ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ನಾನು ಒಂದು ಬಿಲ್ಲೆ ದಾನ ಮಾಡಿಲ್ಲ. ನನ್ನ ಠೇವಣಿ ತೆಗೆಯುತ್ತೇನೆ ಎಂದು ಹೇಳಿದ್ದಾರೆ. ಜನ ಸೇವಕ ನಾನು, ಜನರು ತೀರ್ಪು ಕೊಡುತ್ತಾರೆ. ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಮುಂದಿನ ಸಲವೂ ಗೆಲ್ಲಿಸುತ್ತಾರೆ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು