ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ದಾವಣಗೆರೆ | ಮನೆ ಮನೆಗಳಲ್ಲಿದೆ ರೋಗಾಣು: ತುರಿಕೆಯಿಂದ ಹೈರಾಣು!

ಹಳೇ ದಾವಣಗೆರೆಯಲ್ಲಿ ತಲೆದೋರಿದೆ ಚರ್ಮರೋಗ ಸಮಸ್ಯೆ
Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ದಾವಣಗೆರೆ: ಹಳೇ ದಾವಣಗೆರೆ ಭಾಗದ ಬಾಷಾನಗರ, ಶಿವನಗರ, ಎಸ್‌ಜೆಎಂ ನಗರ, ರಜಾ ಮುಸ್ತಾಫನಗರ, ಎಚ್‌ಕೆಜಿಎನ್ ನಗರ, ಎಸ್‌ಎಸ್‌ಎಂ ನಗರ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳಲ್ಲಿ ಇತ್ತೀಚೆಗೆ ಚರ್ಮರೋಗ ವ್ಯಾಪಕವಾಗಿ ಹರಡುತ್ತಿದೆ.

ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ಚರ್ಮರೋಗದಿಂದ ಬಳಲುತ್ತಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿನ ಜನರನ್ನು ಈ ಸಮಸ್ಯೆ ಕಾಡುತ್ತಿದೆ.

ಬಾಷಾನಗರ 15ನೇ ಕ್ರಾಸ್‌ನ ಶಹನಾಜ್‌ಬಿ ಅವರ ಮುಖದಲ್ಲಿ ಕಜ್ಜಿಗಳು ಕಾಣಿಸಿಕೊಂಡಿವೆ. ಎಸ್‌ಎಸ್‌ಎಂ ನಗರದ ಕೌಸರ್‌ ಬಾನು ಅವರಿಗೆ ಮುಖ ಹೊರತುಪಡಿಸಿ ದೇಹದ ವಿವಿಧ ಭಾಗಗಳಲ್ಲಿ ಕಜ್ಜಿಗಳ ಬಾಧೆ ಉಂಟಾಗಿದೆ. ಬಾಷಾನಗರದ 15ನೇ ಕ್ರಾಸ್‌ನ ರೇಷ್ಮಾ ಬಾನು, 14ನೇ ಕ್ರಾಸ್‌ನ ಫರಿನ್‌ ಬಾನು ಮತ್ತು ಅವರ ತಮ್ಮ ಹಬೀಬುಲ್ಲಾ ಅವರೂ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಿಹಾನಾ ಮತ್ತು ಅವರ ಮಗ ವಸೀಂ ಮೈಮೇಲೆ ಗುಳ್ಳೆಗಳೆದ್ದಿವೆ.

ಬಾಷಾನಗರದ 16ನೇ ಕ್ರಾಸ್‌ ನಿವಾಸಿ ನಸ್ರಿನ್‌ ಬಾನು, ದಾದಾಪೀರ್‌, ಅಬ್ದುಲ್ಲಾ, ಶಿವನಗರ 5ನೇ ಕ್ರಾಸ್‌ನ ನಾಜೀಮಾ ಬಾನು, 6ನೇ ಕ್ರಾಸ್‌ನ ಸಬೀನಾ ಬಾನು ಕುಟುಂಬ, ರಜಾ ಮುಸ್ತಾಫನಗರದ ಮೆಹರುನ್ನಿಸಾ, ಎಚ್‌ಕೆಜಿಎನ್‌ ನಗರದ ಸೈಯದ್‌ ಬಾಬಾಜಾನ್‌ ಸೇರಿದಂತೆ ಅನೇಕ ಜನ ಚರ್ಮರೋಗದಿಂದ ಬಳಲುತ್ತಿದ್ದಾರೆ.

‘ಆಸ್ಪತ್ರೆಗೆ ಹೋದರೆ ಲೋಷನ್‌ ಟ್ಯೂಬ್ ಕೊಡುತ್ತಾರೆ. ಅದನ್ನು ಸವರಿಕೊಂಡಾಗ ಸ್ವಲ್ಪ ಕಡಿಮೆಯಾಗುತ್ತದೆ. ಟ್ಯೂಬ್‌ನಲ್ಲಿನಲೋಷನ್‌ ಮುಗಿಯುತ್ತಿದ್ದಂತೆ ಮತ್ತೆ ಕಜ್ಜಿಯ ಕಾಟ ಶುರುವಾಗುತ್ತದ. ಬದನೆಕಾಯಿ ತಿನ್ನಬೇಡಿ, ಆಲೂ ದೂರವಿಡಿ, ಮೆಣಸಿನಕಾಯಿ ಮುಟ್ಟಬೇಡಿ ಎಂದು ಪಥ್ಯ ಹೇಳುತ್ತಾರೆ. ಅದನ್ನು ಪಾಲಿಸಿದರೂ ಕಜ್ಜಿ ಕಡಿಮೆಯಾಗುತ್ತಿಲ್ಲ’ ಎಂದು ಯಾಸ್ಮಿನ್‌ ಬಾನು ಅಸಹಾಯಕತೆ ತೋಡಿಕೊಂಡರು. ಅವರಿಗೆ ಮಾತ್ರವಲ್ಲದೆ ಅವರ ಪತಿ ಹಜರತ್‌ ಅಲಿ, ಅತ್ತೆ ಸಪೂರಬಿ ಅವರಿಗೂ ಈ ಕಜ್ಜಿಯ ಸಮಸ್ಯೆ ಇದೆ.

‘ತುರಿಸಿಕೊಂಡಾಗ ಒಮ್ಮೆ ನೆಮ್ಮದಿಯಾಗುತ್ತದೆ. ಆದರೆ ತುರಿಕೆ ನಿಲ್ಲಿಸಿದ ಮರುಕ್ಷಣ ಉರಿ ಹತ್ತಿಕೊಳ್ಳುತ್ತದೆ. ಮಾಡುವ ಕೆಲಸ ಬಿಟ್ಟು ತುರಿಸಿಕೊಂಡೇ ಕೂತಿರಬೇಕಾಗುತ್ತದೆ’ ಎಂದು ಮಹಮ್ಮದ್‌ ಜಾಕೀರ್‌ ಬೇಸರದಿಂದ ತಿಳಿಸಿದರು.

‘ಈ ಭಾಗದಲ್ಲಿ 15 ದಿನಗಳಿಗೊಮ್ಮೆ ನಲ್ಲಿ ನೀರು ಸರಬರಾಜಾಗುತ್ತದೆ. ಅದಕ್ಕಾಗಿಯೇ ಸ್ವಚ್ಛತೆ ಕೊರತೆ ಇದೆ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಕುಡಿಯುವ ನೀರು, ಚರಂಡಿ ನೀರು, ಒಳಚರಂಡಿ ನೀರು ಎಲ್ಲ ಮಿಶ್ರಣವಾಗಿ ಪೂರೈಕೆಯಾಗುತ್ತಿರುವ ಸಂಶಯ ಇದೆ. ಇದು ಚರ್ಮರೋಗವಷ್ಟೇ ಅಲ್ಲ, ಎಲ್ಲ ರೋಗಗಳಿಗೆ ಕಾರಣವಾಗುತ್ತಿದೆ. ಹಳೇ ದಾವಣಗೆರೆಯ ಪ್ರತಿ ಗಲ್ಲಿಗಳಲ್ಲಿ ಆರೋಗ್ಯದ ಸಮಸ್ಯೆ ಇದೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ‘ನೆರಳು ಬೀಡಿ ಕಾರ್ಮಿಕರ ಯೂನಿಯನ್‌’ ಅಧ್ಯಕ್ಷೆ ಜಬೀನಾ ಖಾನಂ ವಿವರಿಸಿದರು.

‘ವೈಯಕ್ತಿಕ ಸ್ವಚ್ಛತೆ ಅಗತ್ಯ’
ಶಿಲೀಂದ್ರ ಸೊಂಕು (ಫಂಗಸ್‌ ಇನ್‌ಫೆಕ್ಷನ್‌) ಇದಕ್ಕೆ ಕಾರಣ. ನಿತ್ಯ ಸ್ವಚ್ಛವಾಗಿ ತೊಳೆದ ಬಟ್ಟೆಗಳನ್ನು ಧರಿಸಬೇಕು. ಬೆವರು ದೇಹದಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಫಂಗಸ್‌ನಿಂದ ಈ ಅಲರ್ಜಿ ಬರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಇರುವವರಿಗೆ ಬೇಗ ಬರುತ್ತದೆ. ಜತೆಗೆ ಇದು ಅಂಟುರೋಗ ಆಗಿರುವುದರಿಂದ ಮನೆಯ ಇತರ ಸದಸ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಚರ್ಮರೋಗ ತಜ್ಞ ಡಾ. ಸೂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನಿಂದಲೂ ಅಲರ್ಜಿ ಉಂಟಾಗುತ್ತದೆ. ಮನೆಯಲ್ಲಿ ಒಬ್ಬರ ಬಟ್ಟೆ ಇನ್ನೊಬ್ಬರು ಹಾಕುವುದು, ಸ್ನಾನಕ್ಕೆ ಒಂದೇ ಸೋಪು ಎಲ್ಲರೂ ಬಳಸುತ್ತಿದ್ದಲ್ಲಿ, ಒಬ್ಬರಿಗಿರುವ ಈ ಕಾಯಿಲೆ ಇತರರಿಗೂ ಹರಡುತ್ತದೆ. ತುಸು ಎಚ್ಚರಿಕೆ ವಹಿಸಿದರೆ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬಹುದು. ಕಜ್ಜಿ, ಅಲರ್ಜಿ ಇರುವವರನ್ನು ಗುಣಪಡಿಸಬಹುದು’ ಎಂದು ಅವರು ಸಲಹೆ ನೀಡಿದರು.

‘ಇದೇನು ಗುಣವಾಗದ ಕಾಯಿಲೆಯಲ್ಲ. ಡೆರ್ಮಟೈಸ್ ಎಂದು ಕರೆಯಲಾಗುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು. ವೈದ್ಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT