ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ: 150 ಮಾನವ ದಿನಗಳ ಹೆಚ್ಚಳಕ್ಕೆ ಚಿಂತನೆ

ಬರದ ಹಿನ್ನೆಲೆ: ಕೇಂದ್ರದ ಅಧಿಸೂಚನೆಗೆ ಕಾಯುತ್ತಿರುವ ರಾಜ್ಯ* ಜಿಲ್ಲೆಯಲ್ಲಿ 52 ಲಕ್ಷ ಮಾನವ ದಿನಗಳ ಏರಿಕೆ ನಿರೀಕ್ಷೆ
Published 28 ಸೆಪ್ಟೆಂಬರ್ 2023, 6:28 IST
Last Updated 28 ಸೆಪ್ಟೆಂಬರ್ 2023, 6:28 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದೆಲ್ಲೆಡೆ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಮೂಲಕ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಸಾಮಾನ್ಯವಾಗಿ ಬರಗಾಲ ಬಂದಾಗ ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸುವುದು ವಾಡಿಕೆ. ಪ್ರಸ್ತುತ ಮಾನವ ದಿನಗಳ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರದ ಅಧಿಸೂಚನೆಗಾಗಿ ಕಾಯುತ್ತಿದೆ. ನರೇಗಾದಡಿ ಪ್ರಸ್ತುತ ಒಂದು ಕುಟುಂಬಕ್ಕೆ 100 ದಿನಗಳ ಕೆಲಸ ನೀಡುತ್ತಿದ್ದು, ಕೇಂದ್ರದಿಂದ ಅಧಿಸೂಚನೆ ಬಂದರೆ 150 ದಿನಗಳು ಕೆಲಸ ನಿರ್ವಹಿಸಲಿವೆ. 

‘ಜಿಲ್ಲೆಯಲ್ಲೂ ಬರ ನಿರ್ವಹಣಾ ಕಾಮಗಾರಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 100 ದಿನಗಳು ಕೆಲಸ ನೀಡಿದರೆ ಪ್ರಸ್ತುತ ವರ್ಷಕ್ಕೆ 35 ಲಕ್ಷ ಮಾನವ ದಿನಗಳಾಗುತ್ತಿದೆ. 150 ದಿನಗಳ ಕಾಲ ಕೆಲಸ ನೀಡಿದರೆ 50 ಲಕ್ಷದಿಂದ 52 ಲಕ್ಷ ಮಾನವ ದಿನಗಳಿಗೆ ಏರಿಕೆಯಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಪ್ರಜಾವಾಣಿಗೆ ತಿಳಿಸಿದರು.

‘ನೈಸರ್ಗಿಕ ಕಾಮಗಾರಿಗಳಾದ ಕೆರೆ, ಕಾಲುವೆಗಳ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣದ ಜೊತೆಗೆ ‘ಜಲ ಸಂಜೀವಿನಿ’ ಯೋಜನೆಯಡಿ, ಮೇಲಿನಿಂದ ಕೆಳಗಡೆ ಹರಿದು ಬರುವ ನೀರನ್ನು ನಿಲ್ಲಿಸಿ ಇಂಗುವಂತೆ ಮಾಡುವುದು, ಚೆಕ್ ಡ್ಯಾಂಗಳ ನಿರ್ಮಾಣ, ಗೋಕಟಗ್ಟೆ, ಕೃಷಿಹೊಂಡ, ಟ್ರಂಚ್ ಕಂ ಬಂಡ್ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಈಗಾಗಲೇ ಐಇಸಿ ಕೊ ಆರ್ಡಿನೇಟರ್‌ಗಳನ್ನು ಪ್ರತಿ ಗ್ರಾಮಕ್ಕೆ ಕಳುಹಿಸಿ ನೀರಾವರಿ ಇಲಾಖೆಯಿಂದ ಎಲ್ಲೆಲ್ಲಿ ಕಾಲುವೆಯಿಂದ ಹೂಳೆತ್ತಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಲ್ಲೆಲ್ಲಿ ಬೇಡಿಕೆ ಇದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಜಗಳೂರು ತಾಲ್ಲೂಕಿನಲ್ಲಿ ಆಗಸ್ಟ್ 15ರಿಂದಲೇ 150 ದಿನಗಳು ಕೆಲಸ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಇತ್ತೀಚೆಗೆ ಬರ ಘೋಷಿಸಿರುವುದರಿಂದ ಕೇಂದ್ರದಿಂದ ಅಧಿಸೂಚನೆ ಬಂದ ಬಳಿಕ ನಿರ್ಧರಿಸಲಾಗುವುದು’ ಎಂದು ಹೇಳಿದರು.

ಬರ ಸಂಬಂಧಿತ ಕಾಮಗಾರಿಗಳು:

‘ಜಿಲ್ಲೆಯಲ್ಲಿ ಬರ ಪರಿಹಾರ ನಿರ್ವಹಣೆ ಸಂಬಂಧ ಉದ್ಯೋಗ ಖಾತರಿ ಯೋಜನೆಯಡಿ, 1,959 ಕಾಮಗಾರಿಗಳನ್ನು ನಿರ್ವಹಿಸುವ ಗುರಿ ಇದ್ದು, ಅವುಗಳಲ್ಲಿ 42 ಕಾಮಗಾರಿಗಳು ಈಗಾಗಲೇ ಮುಗಿದಿದ್ದು, 247 ಕಾಮಗಾರಿಗಳು ಪ್ರಗತಿಯಲ್ಲಿವೆ. ಅವುಗಳಲ್ಲಿ 499 ಬದುಗಳನ್ನು ನಿರ್ಮಾಣ ಮಾಡುವ ಗುರಿ ಇದ್ದು, 37ರಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. 68 ಟ್ರಂಚ್‌ಗಳಲ್ಲಿ 2 ಮುಗಿದಿದ್ದು, 28 ಪ್ರಗತಿಯಲ್ಲಿವ. 86 ಬಂಡೆಯ ಚೆಕ್‌ ಡ್ಯಾಂ (ಬೌಲ್ಡರ್ ಚೆಕ್ಸ್)ಗಳ ನಿರ್ಮಿಸುವ ಗುರಿ ಇದೆ. 599 ಇಂಗು ಗುಂಡಿಗಳಲ್ಲಿ 91 ಪ್ರಗತಿಯಲ್ಲಿವೆ. 533 ಕೃಷಿ ಹೊಂಡಗಳ ನಿರ್ಮಾಣದ ಗುರಿ ಇದ್ದು, ಅವುಗಳಲ್ಲಿ 74 ಪ್ರಗತಿಯಲ್ಲಿವೆ’ ಎಂದು ಸುರೇಶ್ ಇಟ್ನಾಳ್ ಮಾಹಿತಿ ನೀಡಿದರು.

ಸುರೇಶ್‌ ಇಟ್ನಾಳ್‌
ಸುರೇಶ್‌ ಇಟ್ನಾಳ್‌
ಉದ್ಯೋಗ ಖಾತರಿ ಯೋಜನೆಯಡಿ 52 ಲಕ್ಷ ಮಾನವ ದಿನಗಳಿಗೆ ಏರಿಕೆಯಾಗಿದ್ದು ಐಇಸಿ ಸಂಚಾಲಕರ ಮೂಲಕ ಗ್ರಾಮಗಳಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಸುರೇಶ್ ಬಿ.ಇಟ್ನಾಳ್ ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT