ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಪ್ರಾಯ ಚಲಾವಣೆಯೇ ಮತದಾನ: ಶಿವಾನಂದ ಕಾಪಶಿ

Last Updated 26 ಜನವರಿ 2023, 5:05 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮನ್ನು ಯಾರು ಆಳಬೇಕು. ಎಂಥವರು ನಮ್ಮ ನಾಯಕರಾಗಬೇಕು ಎಂಬ ಅಭಿಪ್ರಾಯವನ್ನು ಚಲಾಯಿಸುವ ಅಧಿಕಾರವೇ ಮತದಾನ. ಮತದಾನ ಪಟ್ಟಿಯಲ್ಲಿ ಹೆಸರು ಇರುವ ಎಲ್ಲರೂ ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚರಂಡಿ ಸರಿ ಇಲ್ಲ, ರಸ್ತೆ ಸರಿಯಿಲ್ಲ, ಶಾಲೆ, ಅಂಗನವಾಡಿ, ಕಾಲೇಜು ಸರಿ ಇಲ್ಲ, ನೀರು ಬರುತ್ತಿಲ್ಲ ಎಂದೆಲ್ಲ ದೂರುತ್ತಾ ಕೂರುವ ಬದಲು ಯಾರು ನಮ್ಮ ಮೂಲಸೌಕರ್ಯಗಳನ್ನು ಕಲ್ಪಿಸಲು ಸ್ಪಂದಿಸುತ್ತಾರೋ ಅಂಥವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದಡಿ ಇಡಬೇಕು. ಅದಕ್ಕಾಗಿ ಮತ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನ ಬದ್ಧವಾಗಿ ಹಕ್ಕನ್ನು ನೀಡಲಾಗಿದೆ. ಆದರೆ, ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಯಾರೂ ಇಷ್ಟವಿಲ್ಲ ಎಂಬ ಕಾರಣಕ್ಕೆ ಕೆಲವು ಮಂದಿ ಮತಗಟ್ಟೆ ಕಡೆಗೆ ಬರುತ್ತಿರಲಿಲ್ಲ. ಇದನ್ನು ಮನಗಂಡು ಚುನಾವಣಾ ಆಯೋಗವು ಅದಕ್ಕೂ ಅವಕಾಶ ಮಾಡಿಕೊಟ್ಟಿದೆ. ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಿಲ್ಲದೇ ಇದ್ದರೆ ಅದನ್ನೂ ಹೇಳುವ ಹಕ್ಕು ಅದು. ನೋಟಾ ಚಲಾಯಿಸುವ ಮೂಲಕ ಈ ಅಭಿಪ್ರಾಯವನ್ನು ನೀಡಬಹುದು’ ಎಂದರು.

‘ಶಾಲಾ ಕಾಲೇಜುಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಎಲೆಕ್ಟ್ರಲ್‌ ಕ್ಲಬ್‌ಗಳನ್ನು ಮಾಡಲಾಗಿದೆ. ಚುನಾವಣೆ ಹೇಗೆ ನಡೆಯುತ್ತದೆ? ಆಯ್ಕೆಯಾದವರು ಏನು ಮಾಡಬೇಕು? ನಮ್ಮ ಹಕ್ಕುಗಳನ್ನು ಪಡೆಯುವುದು ಹೇಗೆ? ಮುಂತಾದ ವಿಚಾರಗಳು ಈ ಕ್ಲಬ್‌ ಮೂಲಕ ಚರ್ಚೆಯಾಗುತ್ತದೆ’ ಎಂದರು.

‘ಹೊಸ ಮತದಾರರು ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರು, ವಿಶೇಷಚೇತನರು, ಬುಡಕಟ್ಟು ಸಮುದಾಯದವರನ್ನು ಒಳಗೊಂಡಂತೆ ಓಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಮೂಲಕ ವರ್ಷಕ್ಕೆ ನಾಲ್ಕು ಬಾರಿ ಹೆಸರನ್ನು ನೋಂದಾಯಿಸಿ ಮತದಾರರ ಪಟ್ಟಿಯಲ್ಲಿ ಸೇರಲು ಅವಕಾಶ ಮಾಡಿಕೊಟ್ಟಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ವಿವರಿಸಿದರು.

ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್‌, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತೆ ರೇಣುಕಾ, ಡಿಡಿಪಿಯು ಶಿವರಾಜ್‌ ಎಂ., ಡಿಡಿಪಿಐ ಸಿ.ಆರ್‌. ತಿಪ್ಪೇಶಪ್ಪ, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌, ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT