ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಹೋರಾಟ ದಮನಕ್ಕೆ ಷಡ್ಯಂತ್ರ: ಸರ್ಕಾರದ ವಿರುದ್ಧ ಸ್ವಾಮೀಜಿ ಆಕ್ರೋಶ

Published 7 ಆಗಸ್ಟ್ 2024, 10:08 IST
Last Updated 7 ಆಗಸ್ಟ್ 2024, 10:08 IST
ಅಕ್ಷರ ಗಾತ್ರ

ದಾವಣಗೆರೆ: ‘ಇತರೆ ಹಿಂದುಳಿದ ವರ್ಗಗಳ 2ಎ’ ಮೀಸಲಾತಿ ಸೌಲಭ್ಯಕ್ಕೆ ಪಟ್ಟು ಹಿಡಿದಿರುವ ಪಂಚಮಸಾಲಿ ಸಮುದಾಯದ ಧ್ವನಿ ವಿಧಾನಸೌಧದಲ್ಲಿ ಮೊಳಗದಂತೆ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.

‘ವಿಧಾನಮಂಡಲದ ಅಧಿವೇಶನದಲ್ಲಿ ಮೀಸಲಾತಿ ಕುರಿತು ಮಾತನಾಡಲು ಸಮುದಾಯದ ಶಾಸಕರ ಕೋರಿಕೆಗೆ ವಿಧಾನಸಭೆ ಸಭಾಧ್ಯಕ್ಷರು ಸ್ಪಂದಿಸಿಲ್ಲ. ಶಾಸಕರ ಹಕ್ಕನ್ನು ನಿರಾಕರಿಸಿ ಅವಮಾನಿಸಲಾಗಿದೆ. ಬಿಜೆಪಿ ಅಧಿಕಾರವಧಿಯಲ್ಲಿ ಸಮುದಾಯದ ಶಾಸಕರ ಕೂಗಿಗೆ ಅಧಿವೇಶನದಲ್ಲಿ ಅವಕಾಶ ಸಿಗುತ್ತಿತ್ತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಅವಕಾಶವೂ ಇಲ್ಲವಾಗಿದೆ’ ಎಂದು ಬುಧವಾರ ಸುದ್ದಿಗಾರರ ಬಳಿ ದೂರಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಲಿಂಗಾಯತರ ಪಾತ್ರ ಪ್ರಮುಖವಾಗಿದೆ. ಪಂಚಮಸಾಲಿ ಹೋರಾಟದ ಪರಿಣಾಮವಾಗಿ ಅನೇಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಸೆ.11ರಂದು ರಾಜ್ಯಮಟ್ಟದ ಪಂಚಮಸಾಲಿ ವಕೀಲರ ಸಮಾವೇಶವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದ ಹೊತ್ತಿಗೆ ಹೋರಾಟ ಉಗ್ರ ರೂಪ ಪಡೆಯಲಿದೆ’ ಎಂದು ಹೇಳಿದರು.

‘ಬಸವಣ್ಣನಿಗೆ ಅಪಚಾರ ಸಲ್ಲದು’

‘ನಾವು ಭಾಷೆಯಿಂದ ಕನ್ನಡಿಗರು, ರಾಷ್ಟ್ರೀಯತೆಯಿಂದ ಭಾರತೀಯರು, ಧಾರ್ಮಿಕವಾಗಿ ಲಿಂಗಾಯತರು. ಬಸವಣ್ಣನವರ ತತ್ವಗಳಿಗೆ ಅಪಚಾರ ಆಗುವಂತೆ ಯಾರೊಬ್ಬರೂ ನಡೆದುಕೊಳ್ಳಬಾರದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಲಿಂಗಾಯತರು ಹಿಂದೂ ಧರ್ಮಿಯರು’ ಎಂಬ ವಚನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತಾತ್ವಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಬಸವಣ್ಣನವರ ಮೂಲತತ್ವಕ್ಕೆ ಕೊಡಲಿಪೆಟ್ಟು ನೀಡುವ ಕೆಲಸ ಮಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT