ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ ಖುಷಿಗಿಂತಲೂ ಬಾರದ ಸ್ನೇಹಿತರದ್ದೇ ನೆನಪು: ಉಕ್ರೇನ್‌ನಿಂದ ವಾಪಸಾದವರ ಅಳಲು

ರಷ್ಯಾದ ಗಡಿ ಸಮೀಪವಿದೆ ಉಕ್ರೇನ್‌ನ ಖಾರ್‌ಕೀವ್‌ ನಗರ
Last Updated 28 ಫೆಬ್ರುವರಿ 2022, 4:37 IST
ಅಕ್ಷರ ಗಾತ್ರ

ದಾವಣಗೆರೆ: ರಷ್ಯಾದ ಗಡಿಯಿಂದ ಕೇವಲ 40 ಕಿಲೋಮೀಟರ್‌ ದೂರದಲ್ಲಿರುವ ಖಾರ್‌ಕೀವ್‌ನಲ್ಲಿ ಕರ್ನಾಟಕದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ದೇಶಕ್ಕೆ ವಾಪಸ್‌ ಬರಲಾಗದೇ ಪರದಾಡುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣಕ್ಕಾಗಿ ಖಾರ್‌ಕೀವ್‌ಗೆ ಹೋಗಿರುವ ಹರಿಹರ ಭಾನುವಳ್ಳಿಯ ಬಾದಾಮಿ ವೀರೇಶ್‌–ಮಂಜುಳಾ ಅವರ ಮಗ ಪ್ರವೀಣ್‌ ಬಾದಾಮಿ, ದಾವಣಗೆರೆ ಡಿಸಿಎಂ ಟೌನ್‌ಶಿಪ್‌ ನಿವಾಸಿ, ಶಿಕ್ಷಕ ನಾಗರಾಜ್‌–ಸುನಂದಾ ದಂಪತಿಯ ಮಗ ಗಗನ್‌ ದೀಪ್‌ ಅವರು ‘ಪ್ರಜಾವಾಣಿ’ ಜತೆಗೆ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

‘ಎಂಬಿಬಿಎಸ್‌ ಓದಲು ಭಾರತದಿಂದ ಉಕ್ರೇನ್‌ಗೆ ಬರುವವರು ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಇರುವ ಚೆರ್ನವಿಟಿಸಿಯಲ್ಲಿರುವ ಬುಕವೇನಿಯನ್‌ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿ ಇಲ್ಲವೇ ಪೂರ್ವಭಾಗದಲ್ಲಿ ಇರುವ ನ್ಯಾಷನಲ್ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಚೆರ್ನವಿಟಿಸಿಯಿಂದ 400 ಕಿಲೋಮೀಟರ್‌ ದೂರದಲ್ಲಿ ರೊಮೇನಿಯ ಇರುವುದರಿಂದ ಅವರು ಸುಲಭವಾಗಿ ಅಲ್ಲಿ ಹೋಗಿ ಭಾರತಕ್ಕೆ ತೆರಳಿದ್ದಾರೆ. ಖಾರ್‌ಕೀವ್‌ನಲ್ಲಿ ಇರುವ ನಾವು ಸಿಲುಕಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ರೊಮೇನಿಯಾ ಅಥವಾ ಹಂಗೇರಿಗೆ ಬಸ್‌ ಇಲ್ಲವೇ ರೈಲಿನಲ್ಲಿ ಹೋಗಬೇಕು. ಅಲ್ಲಿಂದ ವಿಮಾನದಲ್ಲಿ ಭಾರತಕ್ಕೆ ಮರಳಬೇಕು. ಈ ಎರಡು ದೇಶಗಳು ಇಲ್ಲಿಂದ 1500 ಕಿಲೋಮೀಟರ್‌ ದೂರದಲ್ಲಿವೆ. ರಷ್ಯಾ ಕೇವಲ 40 ಕಿಲೋಮೀಟರ್‌ ದೂರದಲ್ಲಿದ್ದರೂ ಅಲ್ಲಿಗೆ ಹೋಗುವಂತಿಲ್ಲ. ಸದ್ಯ ಬಂಕರ್‌ನಲ್ಲಿದ್ದೇವೆ. ಅವರು ತಿಳಿಸಿದ ಸಂದರ್ಭ ಹೊರಗೆ ಬಂದು ಊಟ ಮಾಡಿಕೊಂಡು ಮತ್ತೆ ಬಂಕರ್‌ಗೆ ಬರುತ್ತಿದ್ದೇವೆ. ಈಗ ಇರುವ ನೀರು, ಆಹಾರವನ್ನು ಹಂಚಿ ತಿನ್ನುತ್ತಿದ್ದೇವೆ. ಯುದ್ಧ ಮುಂದುವರಿದರೆ ಅದಕ್ಕೂ ಕಷ್ಟವಾಗಲಿದೆ’ ಎಂದರು.

‘ರೈಲಿನ ಮೂಲಕ ಕೂಡಲೇ ಗಡಿ ಪ್ರದೇಶಕ್ಕೆ ಹೋಗಬೇಕು ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಆದರೆ ರೈಲಿನ ವ್ಯವಸ್ಥೆಯಾಗಿಲ್ಲ. ಮಗ ನಮ್ಮ ಸಂಪರ್ಕದಲ್ಲಿದ್ದಾನೆ. ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಾನೆ. ಎಲ್ಲ ಕನ್ನಡಿಗರನ್ನು, ಭಾರತೀಯರನ್ನು ಕರೆಸಿಕೊಳ್ಳುವ ಕಾರ್ಯವನ್ನು ಸರ್ಕಾರ ಮಾಡಬೇಕು’ ಎಂದು ಖಾರ್‌ಕೀವ್‌ನಲ್ಲಿ ಇರುವ ಇನ್ನೊಬ್ಬ ವಿದ್ಯಾರ್ಥಿ ವಿನಯ್‌ ಕಲ್ಲಿಹಾಳ್‌ ಅವರ ತಂದೆ, ಡಿಆರ್‌ಆರ್ ಪಾಲಿಟೆಕ್ನಿಕ್‌ನ ಉಪನ್ಯಾಸಕ ಕೆ.ಬಿ. ರುದ್ರೇಶ್ ಮನವಿ ಮಾಡಿಕೊಂಡಿದ್ದಾರೆ.

‘ಗಗನ್‌ದೀಪ್‌, ಪ್ರವೀಣ್‌ ಮತ್ತು ಅವರ ಸ್ನೇಹಿತರು ಇರುವ ಸುತ್ತಮುತ್ತಲಿನಲ್ಲೇ ಯುದ್ಧ ನಡೆಯುತ್ತಿದೆ. ಅವರು ಅಲ್ಲಿ ಆತಂಕದಲ್ಲಿದ್ದರೆ, ಇಲ್ಲಿ ನಾವು ಆತಂಕದಲ್ಲಿದ್ದೇವೆ. ಅವರನ್ನು ಹೇಗಾದರೂ ಭಾರತಕ್ಕೆ ಕರೆತರುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಗಗನ್‌ದೀಪ್‌ನ ಹೆತ್ತವರಾದ ಸುನಂದಾ ಮತ್ತು ನಾಗರಾಜ್‌ ಕೋರಿದ್ದಾರೆ.

‘ಬಂದ ಖುಷಿಗಿಂತಲೂ ಬಾರದ ಸ್ನೇಹಿತರದ್ದೇ ನೆನಪು ಹೆಚ್ಚು’

‘ಉಕ್ರೇನ್‌ನಿಂದ ನಾವು ಬಂದು ಮುಂಬಯಿಯಲ್ಲಿ ಇಳಿದಾಗ ಬಹಳ ಸಂತೋಷವಾಯಿತು. ಬೆಂಗಳೂರಿಗೆ ಬಂದಾಗ ಅಪ್ಪ, ಅಮ್ಮ, ಸಂಬಂಧಿಕರನ್ನು ನೋಡಿದ ಮೇಲೆ ಖುಷಿ ಇನ್ನೂ ಜಾಸ್ತಿಯಾಯಿತು. ಆದರೆ ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಸ್ನೇಹಿತರ ಪರಿಸ್ಥಿತಿ ಈಗ ಬಿಗಡಾಯಿಸುತ್ತಿರುವ ಮಾಹಿತಿ ಬಂದಾಗ ಖುಷಿಗಿಂತ ವೇದನೆ ಉಂಟಾಗುತ್ತಿದೆ’.

ಉಕ್ರೇನ್‌ನ ಚೆರ್ನವಿಟಿಸಿಯಿಂದ ಬಂದಿರುವ ವಿದ್ಯಾನಗರದ ಸೈಯದ್‌ ಅಶ್ರಫ್‌ ಉಲ್ಲಾ–ಆಯಿಷಾ ಅವರ ಮಗಳು ಸೈಯಿದ ಹಬೀಬಾ ‘ಪ್ರಜಾವಾಣಿ’ ಜತೆ ಹಂಚಿಕೊಂಡಿರುವ ವಿಚಾರ ಇದು.

ಸೈಯಿದ ಹಬೀಬಾ ಉಕ್ರೇನ್‌ನಿಂದ ರೊಮೇನಿಯಕ್ಕೆ ಹೋಗಿ ಅಲ್ಲಿಂದ ಮುಂಬಯಿಗೆ ವಿಮಾನದಲ್ಲಿ ಬಂದು ಶನಿವಾರ ರಾತ್ರಿ ಬೆಂಗಳೂರಿಗೆ ತಲುಪಿದ್ದರು. ತನ್ನ ಹೆತ್ತವರ ಜತೆಗೆ ಬೆಂಗಳೂರಿನಿಂದ ತುಮಕೂರಿನಲ್ಲಿ ಇರುವ ಸಂಬಂಧಿಕರ ಮನೆಗೆ ತೆರಳಿ, ಅಲ್ಲಿಂದ ಭಾನುವಾರ ರಾತ್ರಿ ದಾವಣಗೆರೆ ಬಂದಿದ್ದಾರೆ.

ಇಲ್ಲಿನ ಭಗತ್‌ಸಿಂಗ್‌ ನಗರದ ಶೌಕತ್‌ ಅಲಿ ಅವರ ಮಗ ಮಹಮ್ಮದ್‌ ಆಬೀದ್‌ ಅಲಿ ಕೂಡ ಭಾನುವಾರ ಮನೆಗೆ ಬಂದಿದ್ದಾರೆ.

ಹೊನ್ನಾಳಿ ತಾಲ್ಲೂಕು ಕುಂದೂರಿನ ಜ್ಞಾನೇಶ್ವರ ಬಿ.ಸಿ.– ನೇತ್ರಾವತಿ ಅವರ ಮಗಳು ಪ್ರಿಯಾ ಎರಡನೇ ವಿಮಾನದಲ್ಲಿ ಭಾನುವಾರ ದೆಹಲಿಗೆ ತಲುಪಿದ್ದು, ರಾತ್ರಿ ಬೆಂಗಳೂರಿಗೆ ಬಂದಿದ್ದಾರೆ.

‘ತಂಗಿಯನ್ನು ಕರೆದುಕೊಂಡು ಹೋಗಲು ಅಪ್ಪ, ಅಮ್ಮ ಬೆಂಗಳೂರಿಗೆ ಬಂದಿದ್ದಾರೆ. ನಾನು ಬೆಂಗಳೂರಿನಲ್ಲೇ ಇದ್ದೇನೆ. ಯಾವುದೇ ತೊಂದರೆ ಇಲ್ಲದೇ ಅವಳು ಬಂದಿರುವುದು ಖುಷಿಯಾಗಿದೆ’ ಎಂದು ಪ್ರಿಯಾ ಅವರ ಸಹೋದ ಪ್ರೇಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT