ಶನಿವಾರ, ಸೆಪ್ಟೆಂಬರ್ 21, 2019
24 °C

ಗೋಶಾಲೆ ತೆರೆಯಲು ಕಟ್ಟುನಿಟ್ಟಿನ ಸೂಚನೆ: ಬಿಸಿ ಮುಟ್ಟಿಸಿದ ಉಸ್ತುವಾರಿ ಕಾರ್ಯದರ್ಶಿ

Published:
Updated:
Prajavani

ದಾವಣಗೆರೆ: ಬರಗಾಲ ಇದ್ದರೂ ಗೋಶಾಲೆ ತೆರೆಯಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಶೀಘ್ರವೇ ಎರಡು ತಾಲ್ಲೂಕುಗಳಲ್ಲಾದರೂ ಗೋಶಾಲೆ ಆರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಬರಗಾಲ ಪರಿಸ್ಥಿತಿ ಕುರಿತು ಪ್ರಗತಿ ಪರಿಶೀಲಿಸಿದ ಅವರು, ‘ಗೋಶಾಲೆ ತೆರೆದರೆ ಅದರ ನಿರ್ವಹಣೆಯ ತಲೆನೋವು ಅನುಭವಿಸಬೇಕಾಗುತ್ತದೆ ಎಂದು ಸುಮ್ಮನೆ ಇದ್ದೀರಾ? ಎಲ್ಲರೂ ನಾಜೂಕಯ್ಯ ಆಗಿದ್ದೀರಿ. ಅದರ ಲೆಕ್ಕ ಇಡಬೇಕಾಗುತ್ತದೆ ಎಂದು ಸುಮ್ಮನಿದ್ದರೆ ಹೇಗೆ? ಕೆಲಸ ಮಾಡುವುದನ್ನು ಬಿಟ್ಟು ಕಚೇರಿಯಲ್ಲಿ ಫ್ಯಾನಿನ ಕೆಳಗೆ ಕುಳಿತುಕೊಳ್ಳುತ್ತೀರಿ. ಗೋಶಾಲೆ ತೆರೆಯುವಂತೆ ಹೈಕೋರ್ಟ್‌ ಆದೇಶಿಸಿದ್ದರೂ ಏಕೆ ಇನ್ನೂ ಆರಂಭಿಸಿಲ್ಲ’ ಎಂದು ಗುಡುಗಿದರು.

‘ಸಹಜವಾಗಿ ಮೇವು ಲಭ್ಯವಾಗುತ್ತಿರುವ ಕಡೆ ಗೋಶಾಲೆ ತೆರೆಯಬೇಕಾಗಿಲ್ಲ. ಬರಗಾಲ ಇರುವುದರಿಂದ ಹಣ ಕೊಟ್ಟು ಮೇವು ಖರೀದಿಸುವ ಶಕ್ತಿ ಎಷ್ಟೋ ರೈತರಿಗೆ ಇರುವುದಿಲ್ಲ. ಅವರೂ ನಿಮ್ಮಂತೆ ಸೋಮಾರಿಗಳಾಗಿದ್ದಾರೆ. ಗೋಶಾಲೆ ತೆರೆದರೆ ರೈತರಿಗೆ ಮೇವಿನ ಖರ್ಚು ಉಳಿಯುತ್ತದೆ. ಶಾಲೆ ಇಲ್ಲದಿದ್ದರೂ ಮಕ್ಕಳಿಗೆ ಗುಣಮಟ್ಟದ ಆಹಾರ ಸಿಗಲಿ ಎಂದು ರಜೆಯಲ್ಲೂ ಬಿಸಿಯೂಟ ನೀಡುತ್ತಿಲ್ಲವೇ? ಗೋಶಾಲೆಗೆ ನಿಮ್ಮ ಕೈಯಿಂದ ಹಣ ಕೊಡಬೇಕಾಗಿಲ್ಲ’ ಎಂದು ಅವರು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

‘ಗೋಶಾಲೆ ತೆರೆದರೆ ರೈತರ ಬಳಿ ಇರುವ ದನ ಉಳಿದುಕೊಳ್ಳುತ್ತದೆ. ಮೇವು ಸಿಗದೆ ರೈತರು ಜಾನುಮಾರು ಮಾರಾಟ ಮಾಡಲು ಆರಂಭಿಸಿದರೆ ನಿಮ್ಮಿಂದ ತಡೆಯಲು ಸಾಧ್ಯವೇ? ಹೀಗಾಗಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವಿಶೇಷ ಕಾಳಜಿ ವಹಿಸಿ ಗೋಶಾಲೆ ಆರಂಭಿಸಬೇಕು. ಬರಿ ಕಾನೂನು ನೋಡುತ್ತ ಕುಳಿತುಕೊಳ್ಳಬೇಡಿ. ಬರಗಾಲದ ಸಂದರ್ಭದಲ್ಲಿ ಸಹಾನುಭೂತಿಯನ್ನೂ ತೋರಿಸಿ’ ಎಂದು ಉಮಾಶಂಕರ್‌ ಸೂಚಿಸಿದರು.

ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ‘ಜಗಳೂರು ತಾಲ್ಲೂಕಿನಲ್ಲಿ ಗೋಶಾಲೆ ತೆರೆಯಲು ಪ್ರಸ್ತಾವ ಸಲ್ಲಿಸಲಾಗಿದೆ. ಕೂಡಲೇ ಗೋಶಾಲೆಯನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೂ ಮೊದಲು ಪಶುಸಂಗೋಪನಾ ಇಲಾಖೆ ಪ್ರಭಾರ ಉಪನಿರ್ದೇಶಕ ವೀರೇಶ್, ‘ಜಿಲ್ಲೆಯಲ್ಲಿ ಒಟ್ಟಾರೆ 27 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ. ಜಗಳೂರು ತಾಲ್ಲೂಕಿನಲ್ಲಿ ಮಾತ್ರ ಏಳು ವಾರಗಳಿಗೆ ಸಾಲುವಷ್ಟು ಮೇವು ಇದೆ. ಹೀಗಾಗಿ ಅಲ್ಲಿ ಮೇವು ಬ್ಯಾಂಕ್‌ ತೆರೆಯಲು ಚಿಂತನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

Post Comments (+)