ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ: ದಾವಣಗೆರೆಯಲ್ಲಿ ಬೆಡ್‌ಗಾಗಿ ಅಲೆದಾಟ

ತೀರ ಆಗತ್ಯ ಇರುವವರನ್ನು ಹೊರತುಪಡಿಸಿ ತಾಲ್ಲೂಕು ಮಟ್ಟದಲ್ಲೇ ಚಿಕಿತ್ಸೆ: ಡಿಸಿ
Last Updated 5 ಮೇ 2021, 4:18 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಡ್‌ ಸಿಗದೇ ಅಲೆದಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಬೆಡ್‌ ಖಾಲಿ ಇಲ್ಲ ಎಂಬ ಉತ್ತರ ಬರುತ್ತಿದೆ.

‘ನನಗೆ ಕೊರೊನಾ ಪಾಸಿಟಿವ್‌ ದೃಢಪಟ್ಟು ಸೋಮವಾರಕ್ಕೆ ನಾಲ್ಕು ದಿನಗಳಾಗಿತ್ತು. ಸೋಮವಾರ ರಾತ್ರಿ ತಡೆದುಕೊಳ್ಳಲು ವಿಪರೀತ ಉರಿ ಆರಂಭಗೊಂಡಿತು. ಆಸ್ಪತ್ರೆಗೆ ದಾಖಲು ಮಾಡಲು ಸ್ನೇಹಿತರಿಗೆ ತಿಳಿಸಿದೆ. ರಾತ್ರಿ ಇಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಬೆಡ್‌ ಸಿಗಲಿಲ್ಲ. ರಾತ್ರಿ 2 ಗಂಟೆಯ ಹೊತ್ತಿಗೆ ಮನೆಗೆ ವಾಪಸ್ಸಾದೆ’ ಎಂದು ಜಯನಗರದ ನಿವಾಸಿ ಫಕ್ರುದ್ದೀನ್‌ ತನ್ನ ಅನುಭವ ವಿವರಿಸಿದರು.

ಫಕ್ರುದ್ದೀನ್ ಅವರಿಗೆ ಎದೆ ಉರಿ, ಮೈಕೈ ನೋವು ಇತ್ತು. ಆದರೆ ಉಸಿರಾಟದ ತೊಂದರೆ ಸೇರಿದಂತೆ ಬೇರೆ ಸಮಸ್ಯೆಗಳಿರಲಿಲ್ಲ. ಆದರೆ ಉಸಿರಾಟದ ತೊಂದರೆ, ಎದೆನೋವು ಎಂದು ಬರುವ ಹಲವು ರೋಗಿಗಳು ಬೆಡ್‌ ಸಿಗದೇ ಪರದಾಡುತ್ತಿದ್ದಾರೆ. ಮಾಧ್ಯಮದ ಮಂದಿ ಸೇರಿ ಎಲ್ಲರಿಗೂ ಕರೆ ಮಾಡಿ ಬೆಡ್‌ ವ್ಯವಸ್ಥೆ ಮಾಡಿಕೊಡಿ ಎಂದು ಗೋಗರೆಯುತ್ತಿದ್ದಾರೆ.

‘ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿಯಾಗುತ್ತಾ ತುಂಬುತ್ತಾ ಇದೆ. ಇಲ್ಲಿವರೆಗೆ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಬೆಡ್ ಇಲ್ಲ ಎಂದು ಹೇಳಿಲ್ಲ. ಇಲ್ಲಿವರೆಗೆ ಸಮಸ್ಯೆಯಾಗಿಲ್ಲ’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಧರ್‌ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಎಲ್ಲರೂ ಬರುವುದು ಬೇಡ: ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಸಹಜವಾಗಿಯೇ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಉಸಿರಾಟದ ಪಲ್ಸ್‌ 90ರಿಂದ ಮೇಲೆ ಇರುವವರು ಸುಮ್ಮನೆ ಜಿಲ್ಲಾ ಕೇಂದ್ರಕ್ಕೆ ಬರಬಾರದು. ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಪ್ರತಿ ತಾಲ್ಲೂಕಿನಲ್ಲಿ ತಲಾ 50 ಆಮ್ಲಜನಕ ಬೆಡ್‌ಗಳಿವೆ. ಗಂಭೀರ ಸ್ಥಿತಿಯಲ್ಲಿ ಇರುವವರಷ್ಟೇ ಜಿಲ್ಲಾ ಆಸ್ಪತ್ರೆಗೆ ಬರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿಕೊಂಡಿದ್ದಾರೆ.

‘ಈಗ ಜಿಲ್ಲಾ ಆಸ್ಪತ್ರೆಯಲ್ಲಿರುವ ಬೆಡ್‌ಗಳು ಸಾಕಾಗುತ್ತಿವೆ. ಇನ್ನಷ್ಟು ಬೇಡಿಕೆ ಬಂದರೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಇಎಸ್‌ಐ ಆಸ್ಪತ್ರೆ ಕೋವಿಡ್‌ಗೆ ಮೀಸಲು’

‘ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಕೋವಿಡ್‌ ಆಸ್ಪತ್ರೆಯಾಗಿ ನಿಟುವಳ್ಳಿಯಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಬಳಸಬಹುದೇ ಎಂದು ಸರ್ಕಾರವನ್ನು ಕೇಳಿದ್ದೆವು. ಅದಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಂಗಳವಾರ ಅನುಮತಿ ನೀಡಿದ್ದಾರೆ. ಇಎಸ್ಐ ಆಸ್ಪತ್ರೆಯ 50 ಬೆಡ್‌ಗಳು ಮತ್ತು ಅಲ್ಲಿಯ ಸಿಬ್ಬಂದಿಯನ್ನು ಬಳಸಿಕೊಳ್ಳಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ನೋಡಲ್‌ ಅಧಿಕಾರಿಗಳು

ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್‌ಗಳಿವೆ. ಎಷ್ಟು ಮಂದಿ ಎಡ್ಮಿಟ್‌ ಆಗಿದ್ದಾರೆ. ಎಷ್ಟು ಖಾಲಿ ಇದೆ ಎಂದು ಪ್ರತಿದಿನ ಮಾಹಿತಿ ಪಡೆಯಲು ಪ್ರತಿ ಖಾಸಗಿ ಆಸ್ಪತ್ರೆಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ಬೆಡ್‌ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಜನರಿಗೆ ನೆರವಾಗಬೇಕು ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ’ ಎಂದು ಮನವು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT