ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಪಾಲಿಗೆ ಮರೀಚಿಕೆಯಾದ ಮಾಸಾಶನ; ಅಧಿಕಾರಿಗಳಿಂದ ಕೋವಿಡ್ ನೆಪ

ಕಷ್ಟದ ಹಾದಿಯಲ್ಲಿ ಕಲಾವಿದರ ಪಯಣ
Last Updated 31 ಜನವರಿ 2022, 9:49 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್–19 ಸೋಂಕು ಹಾಗೂ ಲಾಕ್‌ಡೌನ್‌ ನಂತರ ಸಾರ್ವಜನಿಕ ಕಾರ್ಯಕ್ರಮ, ಜಾತ್ರೆಗಳಿಗೆ ಸರ್ಕಾರ ಆಗಾಗ ನಿರ್ಬಂಧ ವಿಧಿಸಿರುವುದು ಕಲಾವಿದರ ಕೈ ಕಟ್ಟಿಹಾಕಿದಂತಾಗಿದೆ.ಕಲೆಯನ್ನೇ ನಂಬಿರುವ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ.

ಸಾಹಿತ್ಯ ಹಾಗೂ ಸಂಗೀತದಂತೆ ಧಾರವಾಡ ಜಾನಪದ ಕಲೆಗೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ದೊಡ್ಡಾಟ, ಸಣ್ಣಾಟ, ಕರಡಿಮಜಲು, ಕೋಲಾಟ, ಸೋಬಾನೆ ಪದ ಹೀಗೆ ಬಹಳಷ್ಟು ಕಲಾಪ್ರಕಾರಗಳನ್ನೇ ನಂಬಿರುವ ಕಲಾವಿದರು ವರಮಾನವೇ ಇಲ್ಲದೆ ಪರದಾಡುವಂತ ಸ್ಥಿತಿ ಈಗ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕಲಾವಿದರು ಇದ್ದಾರೆ. ಆದರೆ ಮಾಸಾಶನ ಪಡೆಯುತ್ತಿರುವವರು ಸುಮಾರು 500 ಕಲಾವಿದರು ಮಾತ್ರ. ಇವರಿಗೆ ₹2ಸಾವಿರ ಮಾಸಾಶನ ಸಿಗುತ್ತಿದೆ. ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸುಮಾರು 250ಕ್ಕೂ ಹೆಚ್ಚು ಕಲಾವಿದರು 2018ರಿಂದ ನಿರಂತರವಾಗಿ ಪ್ರಯತ್ನ ನಡೆಸಿದರೂ ಮಾಸಾಶನ ಇವರಿಗೆ ದೊರಕುತ್ತಿಲ್ಲ.

ಈ ಮೊದಲು ಟ್ರಜರಿಯಿಂದ ಹಣ ಬಿಡುಗಡೆಯಾಗುತ್ತಿತ್ತು.ಮಾಸಾಶನಕ್ಕೂ ಈಗ 2ರಿಂದ 3 ತಿಂಗಳು ಕಾಯಬೇಕಾಗಿದೆ. ಅದನ್ನು ಬದಲಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕವೇ ಮಾಸಾಶನ ಬಿಡುಗಡೆಯಾಗುತ್ತಿರುವುದರಿಂದ ಇದು ವಿಳಂಬವಾಗುತ್ತಿದೆ ಎಂಬ ಆರೋಪವೂ ಇದೆ.

2018ರಿಂದ 2021ರವರೆಗೆ ಪ್ರತಿ ವರ್ಷ ಕಲಾವಿದರ ಸಂದರ್ಶನ ನಡೆದಿದೆ. ಇದಕ್ಕಾಗಿ ಕಲಾವಿದರು ತಮ್ಮ ಸ್ವವಿವರ ಹಾಗೂ ಕಲಾ ಪ್ರಕಾರ ಕುರಿತು ಮೂರು ಪ್ರತಿ ಮಾಹಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ್ದಾರೆ. ಅದನ್ನು ಆಧರಿಸಿ ಇವರ ಸಂದರ್ಶನವನ್ನೂ ಇಲಾಖೆ ನಡೆಸಿದೆ. ಆದರೆ ಈವರೆಗೂ ಇವರ ಮಾಸಾಶನ ಕುರಿತ ಯಾವುದೇ ನಿರ್ಧಾರ ಸರ್ಕಾರದಿಂದ ಪ್ರಕಟವಾಗಿಲ್ಲ. ಇದಕ್ಕೆ ಅಧಿಕಾರಿಗಳು ಕೋವಿಡ್ ನೆಪ ಹೇಳುತ್ತಿದ್ದಾರೆ.

ಹೀಗೆ ಅರ್ಜಿ ಹಾಕಿದವರಲ್ಲಿ 113 ಕಲಾವಿದರು ತಮ್ಮ ಅರ್ಜಿಯ ಸ್ಥಿತಿ ಕುರಿತು ಮಾಹಿತಿಯನ್ನೂ ಕೋರಿದ್ದಾರೆ. ಆದರೆ ಇವರಲ್ಲಿ ಹಲವರ ಅರ್ಜಿಗಳೇ ಇಲ್ಲ ಎಂಬ ಉತ್ತರ ಇಲಾಖೆಯಿಂದ ಬಂದಿರುವುದು ಇವರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಿದೆ. ಜತೆಗೆ ಮಾಸಾಶನವೆಂಬುದು ಮರೀಚಿಕೆಯಾಗಿದೆ.

ಕೋವಿಡ್ ಸಂಕಷ್ಟದಲ್ಲಿ ಕಲಾವಿದರಿಗೆ ಸರ್ಕಾರ ₹3ಸಾವಿರ ಪ್ರೋತ್ಸಾಹಧನ ಘೋಷಿಸಿತ್ತು. ಇದಕ್ಕೆ 350 ಹೆಸರು ಅಂತಿಮಗೊಳಿಸಿ ಕಳುಹಿಸಲಾಗಿತ್ತು. ಇದರಲ್ಲಿ 180 ಜನರಿಗೆ ಮಾತ್ರ ಸಿಕ್ಕಿದೆ. ಉಳಿದವರಿಗೆ ಅದೂ ಇಲ್ಲ.

ಕಲಾವಿದರ ಬದುಕು ಕಸಿದ ಕೋವಿಡ್

ಅಣ್ಣಿಗೇರಿ: ಕೋವಿಡ್ ತಡೆಗಟ್ಟಲು ಸರ್ಕಾರ ಜನದಟ್ಟಣೆ ಸೇರುವ ಪ್ರದೇಶವನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಜಾತ್ರೆ, ಸಭೆ, ಸಮಾರಂಭದಂತಹ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದರಿಂದ ಕಲಾವಿದರ ಬದುಕು ಕಷ್ಟಕರವಾಗಿದೆ.

ಕಲೆ ಪ್ರದರ್ಶನಕ್ಕೆ ಅವಕಾಶ ಇಲ್ಲದಿರುವುದರಿಂದ ತುತ್ತು ಅನ್ನಕ್ಕಾಗಿ ಬೇರೆ ಮಾರ್ಗ ಹಿಡಿಯುವುದು ಅನಿವಾರ್ಯವಾಗಿದೆ. ಕೋವಿಡ್‌ ನಂತರದಲ್ಲಿ ಕುಟುಂಬ ನಿರ್ವಹಣೆ ಬಹಳ ಕಷ್ಟಕರವಾಗಿದೆ‘ ಎಂದು ಕಲಾವಿದರಾದ ಚಂದ್ರು ಭಜಂತ್ರಿ ಹಾಗೂ ಚಂದ್ರಶೇಖರ ಹೊಸಮನಿ ಹೇಳಿದರು.

ಪ್ರಜಾವಾಣಿ ತಂಡ: ಇ.ಎಸ್.ಸುಧೀಂದ್ರ ಪ್ರಸಾದ್, ವಾಸುದೇವ ಮುರಗಿ, ರಾಜಶೇಖರ ಸುಣಗಾರ, ಜಗದೀಶ ಗಾಣಿಗೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT