ಸೋಮವಾರ, ಸೆಪ್ಟೆಂಬರ್ 20, 2021
21 °C
ಸೋಂಕು ತಡೆಗಾಗಿ ಮಹಾನಗರ ಪಾಲಿಕೆ ಕ್ರಮ

ಕೋವಿಡ್ ಮೂರನೇ ಅಲೆಯ ಆತಂಕ: ಹೋಟೆಲ್, ವಸತಿ ಗೃಹದ ಮೇಲೆ ನಿಗಾ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್–19 ಮೂರನೇ ಅಲೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಮಹಾನಗರ ಪಾಲಿಕೆ, ಅವಳಿನಗರದಲ್ಲಿರುವ ಸುಮಾರು 300ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ವಸತಿ ಗೃಹಗಳ ಮೇಲೆ ನಿಗಾ ವಹಿಸಿದೆ.

ವ್ಯಾಪಾರ, ವಹಿವಾಟು, ಉದ್ಯಮ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳ ಜನ ನಗರಕ್ಕೆ ಆಗಾಗ ಬರುವುದು ಸಾಮಾನ್ಯ. ಅಂತಹವರಿಂದ ಹರಡಬಹುದಾದ ಸೋಂಕು ತಡೆಗಾಗಿ, ಕಟ್ಟೆಚ್ಚರದ ಕ್ರಮಗಳನ್ನು ಕೈಗೊಂಡಿದೆ.

ನಿತ್ಯ ಮಾಹಿತಿ ದಾಖಲು: ‘ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಮೂರನೇ ಅಲೆಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆ ರಾಜ್ಯದವರೂ ಸೇರಿದಂತೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವವರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಅವರು ಉಳಿದುಕೊಳ್ಳುವ ಹೋಟೆಲ್ ಮತ್ತು ವಸತಿ ಗೃಹಗಳಿಂದ ನಿತ್ಯ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವಳಿನಗರದ ಹೋಟೆಲ್‌ಗಳು ಮತ್ತು ವಸತಿ ಗೃಹಗಳ ಪಟ್ಟಿಯನ್ನು ತಯಾರಿಸಲಾಗಿದೆ. ಅಲ್ಲಿಗೆ ಬರುವ ಹೊರ ರಾಜ್ಯಗಳ ಗ್ರಾಹಕರ ವಿವರವನ್ನು ಹೋಟೆಲ್ ಮತ್ತು ಲಾಡ್ಜ್‌ನವರು ನಿತ್ಯ ದಾಖಲಿಸಿ ಪಾಲಿಕೆಗೆ ಕಳಿಸಬೇಕು. ನಮ್ಮ ಸಿಬ್ಬಂದಿ ಅದನ್ನು ಪರಿಶೀಲಿಸಿ ಮೇಲೆ ನಿಗಾ ವಹಿಸುತ್ತಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಹೊರ ರಾಜ್ಯದಿಂದ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿಲ್ಲದಿದ್ದರೆ ಟ್ರಾವೆಲ್ ಏಜೆನ್ಸಿ, ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದರು.

‘ಹೋಟೆಲ್‌ಗಳಿಗೆ ಬರುವ ಹೊರ ರಾಜ್ಯದವರು ಕೋವಿಡ್ ನೆಗೆಟಿವ್ ವರದಿ ಹೊಂದಿದ್ದರೆ, ಉಳಿದುಕೊಳ್ಳಲು ಅವಕಾಶ ನೀಡುತ್ತೇವೆ. ಅದರಲ್ಲೂ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರು ವರದಿ ತೋರಿಸದಿದ್ದರೆ, ಪಾಲಿಕೆಗೆ ಮಾಹಿತಿ ನೀಡುತ್ತೇವೆ. ಪಾಲಿಕೆ ಸೂಚನೆಯಂತೆ ನಿತ್ಯ ಗ್ರಾಹಕರ ನೋಂದಣಿಯ ರಿಜಿಸ್ಟರ್‌ ಪ್ರಿಂಟ್ ಅನ್ನು ಕಳಿಸಿ ಕೊಡುತ್ತೇವೆ’ ಎಂದು ಕೃಷ್ಣ ಭವನ ಹೋಟೆಲ್ ವ್ಯವಸ್ಥಾಪಕ ವಿನಾಯಕ ಹೆಗಡೆ ತಿಳಿಸಿದರು.

ತಪಾಸಣೆ: ‘ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವರದಿ ಇಲ್ಲದೆ ಬಂದಿದ್ದರೆ, ಅಂತಹವರಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದಿನಕರ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು