ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್ ಹಿಡಿತದಲ್ಲಿ ಆರ್ಥಿಕತೆ

ಹಿರಿಯ ಲೇಖಕ ರಾಮ್ ಪೂನಿಯಾನಿ ಕಳವಳ
Last Updated 12 ಅಕ್ಟೋಬರ್ 2019, 9:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶದ ಆರ್ಥಿಕ ವ್ಯವಸ್ಥೆಯು ಕಾರ್ಪೊರೇಟ್ ಹಿಡಿತದಲ್ಲಿ ಸಿಕ್ಕಿ ನಲುಗುತ್ತಿದೆ. ಎಲ್ಲಾ ಕ್ಷೇತ್ರಗಳನ್ನೂ ಖಾಸಗೀಕರಣದ ತೆಕ್ಕೆಗೆ ತರಲಾಗುತ್ತಿದೆ’ ಎಂದು ಹಿರಿಯ ಲೇಖಕ ರಾಮ್‌ ಪೂನಿಯಾನಿ ಕಳವಳ ವ್ಯಕ್ತಪಡಿಸಿದರು.

‘ಆರ್ಥಿಕತೆಯ ಬೆನ್ನೆಲುಬಾಗಿದ್ದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್‌ಯು) ಕೆಲವು ಬಂದ್ ಆಗಿದ್ದರೆ, ಇನ್ನುಳಿದವು ಅವನತಿಯ ಹಂತ ತಲುಪಿವೆ. ಪಿಎಸ್‌ಯುಗಳನ್ನು ಪುನಶ್ಚೇತಗೊಳಿಸಬೇಕಿದ್ದ ಸರ್ಕಾರವೇ ಅವುಗಳ ಖಾಸಗೀಕರಣಕ್ಕೆ ಮುಂದಾಗಿದೆ. ಇತ್ತೀಚೆಗೆ ರೈಲ್ವೆಯನ್ನು ನಿಧಾನವಾಗಿ ಖಾಸಗೀಕರಣಗೊಳಿಸಲಾಗಿದೆ’ ಎಂದು ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೋಟು ರದ್ಧತಿ ಹಾಗೂ ಜಿಎಸ್‌ಟಿಯಂತಹ ಆತುರದ ನಿರ್ಧಾರಗಳು ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿದ್ದು, ದೇಶದ ಸಾಮಾನ್ಯ ಜನರ ಬದುಕಿನ ಗಂಭೀರ ಪರಿಣಾಮ ಬೀರಿದೆ. ಆದರೆ, ಅದನ್ನು ಮರೆಮಾಚಿ ಈ ಕ್ರಮಗಳು ಆರ್ಥಿಕ ಸುಧಾರಣೆಯ ದೊಡ್ಡ ಕ್ರಮಗಳು ಎಂದು ಪ್ರಚಾರ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ಮುಸ್ಲಿಮರು, ದಲಿತರೇ ಗುರಿ:

‘ದೇಶದ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಟ್ಟುಕೊಂಡು ಗುಂಪು ಹತ್ಯೆ ಮಾಡಲಾಗುತ್ತಿದೆ. ಶೋಷಿತರು ಹಾಗೂ ಅಲ್ಪಸಂಖ್ಯಾತರು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದರ ವಿರುದ್ಧ ದನಿ ಎತ್ತಿ ಪ್ರಧಾನಿಗೆ ಪತ್ರ ಬರೆದ ಪ್ರಗತಿಪರರು ಹಾಗೂ ಚಿಂತಕರ ವಿರುದ್ಧವೇ ಪ್ರಕರಣ ದಾಖಲಿಸಿದ್ದ ಸರ್ಕಾರ, ಕಡೆಗೆ ಒತ್ತಡಕ್ಕೆ ಮಣಿದು ರದ್ದುಗೊಳಿಸಿದೆ. ಅಂದರೆ, ಜನವಿರೋಧಿ ಕೃತ್ಯಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದೇ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುಂಪು ಹಲ್ಲೆ ಪಾಶ್ಚಿಮಾತ್ಯದ್ದೇ ಹೊರತು ಭಾರತದ್ದಲ್ಲ ಎಂದಿದ್ದಾರೆ. ಹಾಗಾದರೆ, ಇಷ್ಟು ವರ್ಷ ನಡೆಯದ ಘಟನೆಗಳು ಕಳೆದ ಐದು ವರ್ಷಗಳಲ್ಲಿ, ಅದೂ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯಾಕೆ ನಡೆಯುತ್ತಿವೆ?’ ಎಂದು ಅವರು ಪ್ರಶ್ನಿಸಿದರು.

ಜನಾಭಿಪ್ರಾಯಕ್ಕಿಲ್ಲ ಮನ್ನಣೆ:

‘ಜನಾಭಿಪ್ರಾಯದ ಯಾವುದೇ ನಿರ್ಧಾರ ಕೈಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷ್ಮಣ. ಆದರೆ, ಜಮ್ಮು–ಕಾಶ್ಮೀರದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ, ಏಕಾಏಕಿಯಾಗಿ 370 ಕಲಂ ರದ್ದುಗೊಳಿಸಿದ್ದು ಸರಿಯಲ್ಲ. ಬದಲಿಗೆ, ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದ್ದರೆ, ಸರ್ಕಾರದ ಕ್ರಮಕ್ಕೆ ಮತ್ತಷ್ಟು ಅರ್ಥ ಬರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ವಸುಧೈವ ಕುಟುಂಬಕಂ ಹಿಂದೂ ಧರ್ಮದ ಮೂಲ. ಆದರೆ ಗುಂಪು ಹಲ್ಲೆ, ಮರು ಮತಾಂತರ, ಸಸ್ಯಹಾರ ಸೇವನೆಗೆ ಒತ್ತಡ... ಇತ್ಯಾದಿ ಈ ಧರ್ಮದ ಐಡೆಂಟಿಟಿಯಾಗಿ ರೂಪುಗೊಳ್ಳುತ್ತಿವೆ. ಎಲ್ಲರಿಗೂ ಒಳ್ಳೆಯದು ಬಯಸಬೇಕೆಂಬ ಧರ್ಮದ ತಿರುಳಿಗೆ ಬೆಲೆ ಇಲ್ಲವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT