ಬುಧವಾರ, ಏಪ್ರಿಲ್ 21, 2021
25 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಅವಳಿನಗರದ ಮೇಲ್‌ ಮಂಜು...

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

prajavani

ವರ್ಷದ ಕೊನೆಯ ದಿನವಾದ ಮಂಗಳವಾರ, ವಾಣಿಜ್ಯನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಪ್ರಕೃತಿಯ ಸೋಜಿಗಕ್ಕೆ ಸಾಕ್ಷಿಯಾಯಿತು. ಉತ್ತರ ಭಾರತದ ದೆಹಲಿಯಲ್ಲಿ ಕಳೆದ 119 ವರ್ಷಗಳಲ್ಲೇ ದಾಖಲೆ ಪ್ರಮಾಣದ ತಾಪಮಾನ ಕುಸಿತದ ಸುದ್ದಿ ಕೇಳಿದ್ದ ಮಂದಿ, ಬೆಳಿಗ್ಗೆ ಇಲ್ಲಿಯೂ ಅದೇ ತೆರನಾದ ಮಂಜು ಮುಸುಕಿದ ವಾತಾವರಣವನ್ನು ಕಣ್ತುಂಬಿಕೊಂಡರು.

ಸೂರ್ಯೋದಯವಾದರೂ ಕಿರಣಗಳು ಭೂಮಿ ತಾಕಿದ ಕುರುಹು ಸಿಗದಷ್ಟು ಕವಿದಿದ್ದ ಮಂಜಿನಿಂದಾಗಿ, ಬೆಳಿಗ್ಗೆ 9 ಗಂಟೆಯಾದರೂ ಇನ್ನೂ ಆರು ಗಂಟೆಯಾಗಿದೆಯೇನೊ ಎಂಬಂತೆ ಭಾಸವಾಗುತ್ತಿತ್ತು. ಮಂಜಿನ ಅಬ್ಬರಕ್ಕೆ ರಸ್ತೆಯಲ್ಲಿ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಸಂಚರಿಸುತ್ತಿದ್ದವು. ಚಳಿಯೂ ಹೆಚ್ಚಾಗಿದ್ದರಿಂದ ಜನರು, ಬೆಳ್ಳಂ ಬೆಳಿಗ್ಗೆ ಬೆಚ್ಚಗಿನ ದಿರಿಸು ಧರಿಸಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು.

ಹುಬ್ಬಳ್ಳಿಯ ಅತ್ಯಂತ ಎತ್ತರದ ಜಾಗ ಹಾಗೂ ನೆಚ್ಚಿನ ಪ್ರವಾಸಿ ತಾಣವೂ ಆದ ನೃಪತುಂಗ ಬೆಟ್ಟದ ‘ವೀಕ್ಷಣಾ ಪಾಯಿಂಟ್’ನಲ್ಲಿ ನಿಂತು ನಗರದತ್ತ ದಿಟ್ಟಿಸಿದಾಗ,  ಮಂಜಿನನಗರಿ ಮಡಿಕೇರಿಯ ರಾಜಾ ಸೀಟ್‌ನಲ್ಲಿ ಮಂಜು ಸೃಷ್ಟಿಸುವ ವಿಸ್ಮಯ ಕಣ್ಣೆದುರಿಗೆ ಒಮ್ಮೆ ಬಂದು ಹೋಯಿತು. ಉಣಕಲ್ ಕೆರೆಯಂಚಿನಲ್ಲಿರುವ ವೀಕ್ಷಣಾ ಪಾಯಿಂಟ್‌ನಲ್ಲಿ ನಿಂತು ಕೆರೆಯತ್ತ ನೋಡಿದಾಗ, ಬದಿಯಲ್ಲಿರುವ ದೇಗುಲದ ಗೋಪುರ ಸೂರ್ಯನ ಕಿರಣಗಳಿಗೆ ತನ್ನನ್ನು ಚಾಚಿಕೊಂಡಂತೆ ಹೊಳೆಯುತ್ತಿತ್ತು. ಅದೇ ರೀತಿ ಧಾರವಾಡದ ಸಾಧನಕೇರಿ, ಕೆಲಗೇರಿ, ವಿಶ್ವವಿದ್ಯಾಲಯ ಸೇರಿದಂತೆ ಹಲವಡೆ ಕಂಡುಬಂದ ಮಂಜು ಮುಸುಕಿನ ದೃಶ್ಯಗಳು ಮನ ತಣಿಸಿದವು.


ಮಂಜು ಮುಸುಕಿದ ವಾತಾವರಣದಲ್ಲಿ ನೃಪತುಂಗ ಬೆಟ್ಟದ ಹಿಂಭಾಗದ ವೃಕ್ಷಗಳು ಚಿತ್ರಗಳು: ತಾಜುದ್ದೀನ್ ಆಜಾದ್

ಭೂರಮೆಯ ಆವರಿಸಿದ ಮಂಜನ್ನು ಭೇದಿಸಿ ಭೂಮಿಗೆ ಬೆಳಕಿನ ಕಿರಣಗಳನ್ನು ಚೆಲ್ಲಲು ನೇಸರನೇ ಎಡತಾಕುತ್ತಿದ್ದ ಈ ದೃಶ್ಯ, ವಾಯುವಿಹಾರಿಗಳಿಗೆ ಹಾಗೂ ಬೆಳಿಗ್ಗೆಯೇ ಜೀವನ ಕರ್ಮ ಆರಂಭಿಸುವವರಿಗೆ ಹಬ್ಬದ ಸವಿ ನೀಡಿತು. ಅಲಾರಂ ಇಟ್ಟುಕೊಂಡು ಎದ್ದು ಹೊರಗೆ ಬಂದು ನೋಡಿದವರು, ಇದೇನು ಬೇಗನೆ ಎದ್ದಿರುವೇನಾ? ಅಂದುಕೊಂಡು, ಗಡಿಯಾರ ಗಮನಿಸುವಂತೆ ಮಾಡಿತು.


ಉಣಕಲ್ ಕೆರೆಯ ವೀಕ್ಷಣಾ ಗೋಪುರದ ಮುಂಭಾಗ ಕವಿದಿದ್ದ ಮಂಜು

ತೇವಾಂಶ ಹೆಚ್ಚಳ ಕಾರಣ: ‘ತೇವಾಂಶ ಹೆಚ್ಚಾದಾಗ, ಗಾಳಿಯ ವೇಗ ಕಡಿಮೆಯಾವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಮಂಜು ಆವರಿಸುವಿಕೆಯಲ್ಲಿ ವ್ಯತ್ಯಾಸವಾಗುವುದುಂಟು. ಕೆಲವೆಡೆ ಬೆಳಿಗ್ಗೆ 7ರವರೆಗೆ ಮಂಜು ಹೆಚ್ಚಾಗಿದ್ದರೆ, ಉಳಿದೆಡೆ 9 ಗಂಟೆಯಾದರೂ ಬೆಳಗಿನ ಜಾವದಂತೆ ಮಂಜು ಆವರಿಸಿರುತ್ತದೆ. ಪ್ರಕೃತಿಯ ಈ ವಿಸ್ಮಯ ಆಗಾಗ ಸಂಭವಿಸುವುದುಂಟು’ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್‌. ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು