ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನ ತಾರತಮ್ಯ: ಕಾಂಗ್ರೆಸ್ ಚುನಾವಣಾ ಗಿಮಿಕ್- ಜಗದೀಶ ಶೆಟ್ಟರ್‌ ಟೀಕೆ

ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಟೀಕೆ
Published 25 ಫೆಬ್ರುವರಿ 2024, 13:25 IST
Last Updated 25 ಫೆಬ್ರುವರಿ 2024, 13:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅನುದಾನ ತಾರತಮ್ಯದ ಹೆಸರಿನಲ್ಲಿ ಸುಳ್ಳು ಹೇಳುತ್ತಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಿದ್ದರೆ ಸಿದ್ದರಾಮಯ್ಯ ಅನುದಾನ ತಾರತಮ್ಯದ ಬಗ್ಗೆ ಮಾತನಾಡುತ್ತಿರಲಿಲ್ಲ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ಅತ್ಯಂತ ಜನಪ್ರಿಯ ನಾಯಕರಾಗಿದ್ದು, 10 ವರ್ಷ ಉತ್ತಮ ಆಡಳಿತ ನೀಡಿದ್ದನ್ನು ಇವರಿಗೆ ಸಹಿಸಲಾಗುತ್ತಿಲ್ಲ, ಹೀಗಾಗಿಯೇ ಅಧಿಕಾರಕ್ಕೆ ಬಂದು ಇಷ್ಟು ಸಮಯವಾದ ನಂತರ ಈಗ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಅನುದಾನ ನೀಡಿಕೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ ನೀಡಿದ್ದಾರೆ. ನೀತಿ ಆಯೋಗದಲ್ಲಿ ರಾಜ್ಯದ ಹಣಕಾಸು ಮಂತ್ರಿ ಇರುವುದರಿಂದ ಅಲ್ಲಿ ಪ್ರಶ್ನಿಸಲಿ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಕಾನೂನು ಪ್ರಕಾರ ಹೋರಾಡುವುದು ಬಿಟ್ಟು ಕೇಂದ್ರದ ವಿರುದ್ಧ ಎರಡು ನಿರ್ಣಯ ಕೈಗೊಂಡಿದ್ದು ಪ್ರಜಾತಂತ್ರ ವ್ಯವಸ್ಥೆಗೆ ಕೊಡಲಿ ಏಟು ಬಿದ್ದಂತಾಗಿದೆ’ ಎಂದರು.

‘ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಇದ್ದಾಗ ಕಾಂಗ್ರೆಸ್‌ ಪರಿಸ್ಥಿತಿ ಏನಿತ್ತು ಎಂಬುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಆಗ, ಕಾಂಗ್ರೆಸ್‌ನಲ್ಲಿ ಇದ್ದದ್ದು ಒಬ್ಬರೇ ಗಂಡಸು, ಅದು  ಇಂದಿರಾ ಎಂಬ ಜೋಕ್‌ ಇತ್ತು. ದೇಶದಲ್ಲಿ ಸಿದ್ದರಾಮಯ್ಯ ಅವರದ್ದೇ ಕೊನೆಯ ಕಾಂಗ್ರೆಸ್‌ ಸರ್ಕಾರ. ಮುಂದೆ ಕಾಂಗ್ರೆಸ್‌ ಸರ್ಕಾರ ಬರಲ್ಲ’ ಎಂದು ಶೆಟ್ಟರ್ ಟೀಕೆ ಮಾಡಿದರು.

ನಿರ್ಣಯ ಕೈಗೊಂಡಿದ್ದೇವೆ:

ಶಾಸಕ ಬಸವರಾಜ ಬೊಮ್ಮಾಯಿ ನಗರದಲ್ಲಿ ಮಾತನಾಡಿ, ‘ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯಕ್ಕೆ ನಾವೂ ಪ್ರತಿ ನಿರ್ಣಯ ಮಾಡಿದ್ದೇವೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ನಾವೂ ಅಂಕಿ–ಸಂಖ್ಯೆ ಬಿಡುಗಡೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT