ಸೋಮವಾರ, ಜುಲೈ 4, 2022
25 °C

ಭ್ರಷ್ಟಾಚಾರಕ್ಕೆ ಕೋವಿಡ್‌ ಹೆಸರು ಬಳಕೆ: ಬಸವರಾಜ ರಾಯರಡ್ಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ ನಿಯಂತ್ರಿಸುವ ನೆಪದಲ್ಲಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ಭ್ರಷ್ಟಾಚಾರ ಮಾಡಲು ಕೋವಿಡ್ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಬಸವರಾಜ ರಾಯರಡ್ಡಿ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಐಸಿಯು, ಪಿಪಿಇ ಕಿಟ್‌, ವೆಂಟಿಲೇಟರ್‌ ಹಾಗೂ ಮಾಸ್ಕ್‌ ಸೇರಿದಂತೆ ಇನ್ನಿತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಪ್ರಸರಣದ ವೇಗ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ, ವೈದ್ಯಕೀಯ ಕ್ಷೇತ್ರದ ಪರಿಣಿತರು ಹಿಂದೆಯೇ ಭಾರತಕ್ಕೆ ಎಚ್ಚರಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಕಿವಿಗೊಡಲಿಲ್ಲ. ವಿಶ್ವದಲ್ಲಿ ನಾನೇ ಶ್ರೇಷ್ಠ ಎನ್ನುವ ಅಹಂಕಾರದಿಂದ ಬೀಗಿದ್ದರ ಪರಿಣಾಮದಿಂದಲೇ ಈಗ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭ ಬಂದಿದೆ. ಅವೈಜ್ಞಾನಿಕ ನಿರ್ಧಾರಗಳು, ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದರಿಂದ ಇಷ್ಟೊಂದು ಅನಾಹುತಗಳು ಸಂಭವಿಸುತ್ತಿವೆ’ ಎಂದು ದೂರಿದರು.

ಸುಧಾಕರ್ ಅನ್‌ಫಿಟ್‌: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಂಬಿಬಿಎಸ್‌ ಓದಿದ್ದರೂ ಒಂದೂ ದಿನ ವೈದ್ಯರಾಗಿ ಕೆಲಸ ಮಾಡಲಿಲ್ಲ. ವೈದ್ಯಕೀಯ ಲೋಕದ ಎಬಿಸಿಡಿಯೂ ಗೊತ್ತಿಲ್ಲ. ಈಗಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಅವರು ಅನ್‌ಫಿಟ್‌ ಎಂದು ರಾಯರಡ್ಡಿ ಟೀಕಿಸಿದರು.

‘ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಈಗಿನ ಕೆಲ ಸಚಿವರನ್ನು ಬದಲಿಸಬೇಕು. ಪರಿಣಿತ ವೈದ್ಯರನ್ನೇ ಆರೋಗ್ಯ ಸಚಿವರನ್ನಾಗಿ ಮಾಡಬೇಕು. ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಇದ್ದರು.

‘ಕಿಮ್ಸ್‌ನಲ್ಲಿ ಜಾತಿ ನೋಡಿ ಬೆಡ್‌ ಕೊಡ್ತಾರೆ’
ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಜಾತಿ ನೋಡಿ ಬೆಡ್‌ ಕೊಡಲಾಗುತ್ತಿದೆ. ಮುಸ್ಲಿಮರಿಗೆ ಬೆಡ್‌ಗಳನ್ನು ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಆರೋಪಿಸಿದರು.

ಆರ್‌ಎಸ್‌ಎಸ್‌ನ ಸೇವಾ ಭಾರತಿ ಟ್ರಸ್ಟ್‌ಗೆ ಕಿಮ್ಸ್‌ ಆವರಣದಲ್ಲಿ ಕೊರೊನಾ ಮಾಹಿತಿ ಕೇಂದ್ರ ಆರಂಭಿಸಲು ಅನುಮತಿ ಕೊಟ್ಟಿದ್ದು ತಪ್ಪು. ಅದೇ ರೀತಿ ಬೇರೆ, ಬೇರೆ ಸಂಘ ಸಂಸ್ಥೆಗಳು ಬಂದು ಕೇಂದ್ರ ಆರಂಭಿಸಲು ಮುಂದಾದರೆ ಅನುಮತಿ ಕೊಡುವರೇ? ಎಂದು ಪ್ರಶ್ನಿಸಿದರು.

ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ಕೂಡ ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು