ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅವಧಿಯಲ್ಲೇ ಹೆಚ್ಚು ಕೊಲೆಗಳು ನಡೆದಿವೆ: ಸಚಿವ ಪರಮೇಶ್ವರ

ಅಂಜಲಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ಹೊರಡಿಸಲು ನಿರ್ಧಾರ
Published 20 ಮೇ 2024, 15:42 IST
Last Updated 20 ಮೇ 2024, 15:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಸರ್ಕಾರದ ಅವಧಿಯಲ್ಲಿ ಈ ವರ್ಷದ ಜನವರಿ 1 ರಿಂದ ಏಪ್ರಿಲ್‌ 23ರವರೆಗೆ ರಾಜ್ಯದಲ್ಲಿ 430 ಕೊಲೆ ನಡೆದಿವೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಆದರೆ, ಈ ಹಿಂದೆ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚು ಕೊಲೆಗಳು ನಡೆದಿವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

‘ಬಿಜೆಪಿ ಸರ್ಕಾರದ ಜನವರಿ 1 ರಿಂದ ಏಪ್ರಿಲ್‌ 23ರವೆಗಿನ ಅವಧಿಯಲ್ಲಿ 2021ರಲ್ಲಿ 449, 2022ರಲ್ಲಿ 466 ಮತ್ತು 2023ರಲ್ಲಿ 431 ಕೊಲೆ ನಡೆದಿವೆ. ಯಾರ ಅವಧಿಯಲ್ಲಿ ಹೆಚ್ಚು ಕೊಲೆಗಳು ನಡೆದಿವೆ ಎಂಬುದನ್ನು ಈ ಅಂಕಿ ಅಂಶಗಳೇ ಹೇಳುತ್ತವೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿಲ್ಲ. ಗಣೇಶ ಉತ್ಸವ, ಹೋಳಿ, ಈದ್ ಸಂದರ್ಭದಲ್ಲಿ ಗಲಭೆ ನಡೆದಿಲ್ಲ. ಲೋಕಸಭಾ ಚುನಾವಣೆ ವೇಳೆಯಲ್ಲೂ ನಡೆದಿಲ್ಲ. ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಬಳಸಿ, ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ’ ಎಂದು ಅವರು ಸಮರ್ಥಿಸಿಕೊಂಡರು.

‘ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು. ನೇಹಾ ಮತ್ತು ಅಂಜಲಿ ಅವರ ಕೊಲೆ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಹಾಗೂ ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದರು.

‘ಕಡು ಬಡವರಾದ ಅಂಜಲಿ ಕುಟುಂಬದವರು ತಮಗೆ ಮನೆ, ಒಬ್ಬ ಸಹೋದರಿಗೆ ಸರ್ಕಾರಿ ಉದ್ಯೋಗ ಕೊಡಿ ಮತ್ತು ಆರ್ಥಿಕ ನೆರವು ಕೋರಿದ್ದಾರೆ. ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಏನನ್ನೂ ಹೇಳಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಇದರ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ಇದಕ್ಕೂ ಮೊದಲು ಪರಮೇಶ್ವರ ಅವರು ಅಂಜಲಿ ಅಂಬಿಗೇರ ಮತ್ತು ನೇಹಾ ಹಿರೇಮಠ ಅವರ ಮನೆಗಳಿಗೆ ಭೇಟಿ ನೀಡಿದರು. ಎರಡೂ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT