ಧಾರವಾಡ: ‘ಕೆಟ್ಟದಾಗಿ ಮಾತನಾಡುವುದು ಸಂಸ್ಕಾರ ಅಲ್ಲ. ಲಕ್ಷಗಟ್ಟಲೇ ಜನರನ್ನು ಪ್ರತಿನಿಧಿಸುವವರೇ (ಶಾಸಕರು) ಕೆಟ್ಟದಾಗಿ ಮಾತನಾಡಿದರೆ ಸಮಾಜಕ್ಕೆ ಯಾವ ಸಂದೇಶ ರವಾನೆ ಆಗುತ್ತದೆ?’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ಶಾಸಕ ಮುನಿರತ್ನ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಅದು ತಮ್ಮ ಧ್ವನಿಯಲ್ಲ ಎಂದು ಅವರು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ’ ಎಂದರು.
‘ಹಣ ನೀಡಿ ಮತ ಹಾಕಿಸಿಕೊಳ್ಳುವವರು ಮತ್ತು ಹಣ ಪಡೆದು ಮತ ಹಾಕುವವರು ಇರುವವರೆಗೆ ಪ್ರಜಾಪ್ರಭುತ್ವದ ಆಶಯ ಸಾಕಾರವಾಗಲ್ಲ. ಈಗಿನ ರಾಜಕಾರಣದಲ್ಲಿ ನೈತಿಕತೆ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ದೇಶದಲ್ಲಿ ಅನೇಕ ಜಾತಿಯವರು ಇದ್ದಾರೆ. ಎಲ್ಲರೂ ಹೊಂದಿಕೊಂಡು ಬಾಳಬೇಕು. ಗಲಾಟೆ ಮಾಡುವವರು, ಬೆಂಕಿ ಹಚ್ಚುವವರು ಕೆಲವರು ಇರುತ್ತಾರೆ. ಸಮಾಜ ಘಾತುಕರನ್ನು ಮಟ್ಟ ಹಾಕಬೇಕು. ಉತ್ತರ ಪ್ರದೇಶದಲ್ಲಿ ಮಾಡಿದಂತೆ ಬಿಗಿ ಮಾಡಬೇಕು’ ಎಂದು ಅವರು ತಿಳಿಸಿದರು.