ಶನಿವಾರ, ಡಿಸೆಂಬರ್ 4, 2021
20 °C
ಪೊಲೀಸ್‌ ಇಲಾಖೆ: ಪುರುಷರಿಗೆ ಬಡ್ತಿಯಲ್ಲಿ ತಾರತಮ್ಯ

ಧಾರವಾಡ: ಸಮಾನ ಜ್ಯೇಷ್ಠತೆ, ಬಡ್ತಿಯ ನಿರೀಕ್ಷೆ

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಸೇವಾ ಜ್ಯೇಷ್ಠತೆಯಲ್ಲಿ ಮಹಿಳಾ ಪೊಲೀಸರಿಗಿಂತ ಹಿರಿಯರಾಗಿದ್ದರೂ, ಬಡ್ತಿ ಪಡೆಯುವಲ್ಲಿ ‘ಕಿರಿಯ’ರಾಗಿದ್ದನ್ನು ಪ್ರಶ್ನಿಸಿ ನ್ಯಾಯ ಪಡೆದವರು ಇನ್ನೂ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

1985ರಿಂದ 1990ರೊಳಗೆ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯಕ್ಕೆ ಸೇರಿದ ಪುರುಷರು ಈಗ ಎಎಸ್‌ಐ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಆದರೆ 1990ರ ನಂತರದಲ್ಲಿ ಕಾನ್‌ಸ್ಟೆಬಲ್‌ಗಳಾದ ಮಹಿಳಾ ಪೊಲೀಸರು ಈಗ ಸಬ್‌ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದಾರೆ. ಇದಕ್ಕೆ 2004ರ ಡಿ. 23ಕ್ಕೂ ಪೂರ್ವದಲ್ಲಿದ್ದ ಪ್ರತ್ಯೇಕ ಸೇವಾ ಜ್ಯೇಷ್ಠತಾ ಪಟ್ಟಿಯಿಂದಾಗಿ ಆಗಿರುವ ಬಡ್ತಿ ತಾರತಮ್ಯವನ್ನು ಸರಿಪಡಿಸುವಂತೆ ಈಶಾನ್ಯ ವಲಯ ಹಾಗೂ ದಕ್ಷಿಣ ವಲಯದ ಪೊಲೀಸರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು.

2004ಕ್ಕೂ ಪೂರ್ವದಲ್ಲಿ ನೇಮಕಗೊಂಡ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಮಹಿಳಾ ಠಾಣೆಗಳಿಗೆ ಮಾತ್ರ ನಿಯೋಜಿಸಲಾಗುತ್ತಿತ್ತು. ಹೀಗಾಗಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಬಡ್ತಿ ನೀಡುವ ಪದ್ಧತಿ ಜಾರಿಯಲ್ಲಿತ್ತು. ಹೀಗಾಗಿ ಪುರುಷ ಪೊಲೀಸರಿಗೆ 15 ರಿಂದ 20 ವರ್ಷ ಕರ್ತವ್ಯದ ಬಳಿಕ ಒಂದು ಬಡ್ತಿ ಸಿಕ್ಕರೆ, ಮಹಿಳಾ ಪೊಲೀಸರಿಗೆ 4ರಿಂದ 5 ವರ್ಷಕ್ಕೇ ಸಿಕ್ಕಿದೆ. ಈಗ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಕೋರಿ ಕೆಎಟಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 

ಆಯಾ ವಲಯಗಳಲ್ಲಿ ಬಡ್ತಿ ವಂಚಿತರು ತಮ್ಮ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿಯನ್ನೂ ಸಲ್ಲಿಸಿದ್ದರು. ಸೇವಾ ಜ್ಯೇಷ್ಠತೆ ಇದ್ದರೂ ಬಡ್ತಿ ಸಿಗದೆ ಇರುವ ಪುರುಷ ಪೊಲೀಸರ ಮನವಿ ನ್ಯಾಯಯುತವಾದದ್ದು ಎಂದು ಮಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಹಿತೇಂದ್ರ ಅವರು 2014ರಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನೇ ಕರ್ನಾಟಕ ನ್ಯಾಯ ಮಂಡಳಿ ಎತ್ತಿ ಹಿಡಿದಿದೆ.

ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿರುವ ಕೆಎಟಿ, ‘ಬಡ್ತಿ ನೀಡುವ ಸಂದರ್ಭದಲ್ಲಿ ಪುರುಷ ಅಥವಾ ಮಹಿಳಾ ಪೊಲೀಸರು ಕರ್ತವ್ಯಕ್ಕೆ ಸೇರಿದ ದಿನಾಂಕವನ್ನು ಸಮಾನವಾಗಿ ಪರಿಗಣಿಸಬೇಕು. ಪ್ರತ್ಯೇಕ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದೆ. ಈ ಎಲ್ಲಾ ಪ್ರಕ್ರಿಯೆಗಳು ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳ್ಳಬೇಕು’ ಎಂದೂ ತಿಳಿಸಿದೆ.

ಈ ಕುರಿತಂತೆ ಬಡ್ತಿ ವಂಚಿತರಾದ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ‘1993ರಲ್ಲಿ ಸೇರಿದವರಿಗಿಂತ 1998ರಲ್ಲಿ ಸೇರಿದ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಬಡ್ತಿ ಸಿಕ್ಕಿದೆ. ಏಳೆಂಟು ವರ್ಷ ಕಿರಿಯರಾದವರು ಪ್ರಸ್ತುತ ಸಬ್‌ ಇನ್‌ಸ್ಪೆಕ್ಟರ್‌ಗಳಾಗಿದ್ದಾರೆ. ಎಲ್ಲರೂ ಸಮಾನವಾಗಿ ಕಾರ್ಯ ನಿರ್ವಹಿಸುವಾಗ ಬಡ್ತಿ ವಿಷಯದಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂಬ ನಮ್ಮ ವಾದವನ್ನು ನ್ಯಾಯಮಂಡಳಿ ಎತ್ತಿಹಿಡಿದಿದೆ. ಇಲಾಖೆಯೂ ಇದನ್ನು ಶೀಘ್ರದಲ್ಲಿ ಜಾರಿಗೊಳಿಸಿದಲ್ಲಿ ನಿವೃತ್ತಿ ಅಂಚಿಗೆ ಬಂದಿರುವ ಹಲವರಿಗೆ ಬಡ್ತಿ ಸಿಗಲಿದೆ’ ಎಂದರು.

ಕೆಎಟಿ ಹೇಳಿರುವುದನ್ನು ಇಲಾಖೆ ಪಾಲಿಸಲಿದೆ. ಸೇವಾ ಜ್ಯೇಷ್ಠತೆಯ ಪ್ರತ್ಯೇಕ ಪಟ್ಟಿಯನ್ನು ಶೀಘ್ರದಲ್ಲಿ ಸಿದ್ಧಪಡಿಸಲಾಗುವು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು