ಶುಕ್ರವಾರ, ಮಾರ್ಚ್ 5, 2021
30 °C

ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಗಡ್ಕರಿ ಭೂಮಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ‌ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಚಾಲನೆ ನೀಡಿದರು.

ಹುಬ್ಬಳ್ಳಿಯ ಡೆನ್ನಿಸನ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವರ್ಚುವಲ್ ಮೂಲಕ ಪಾಲ್ಗೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಈಗ ಬಹುದಿನಗಳ ಬೇಡಿಕೆ ಈಡೇರಿದೆ.  ಹುಬ್ಬಳ್ಳಿ-ಧಾರವಾಡ ಬೈಪಾಸ್ ನಿರ್ಮಾಣಕ್ಕೆ ಡಿಪಿಆರ್ ಸಿದ್ದವಾಗಿದೆ. ಹುಬ್ಬಳ್ಳಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ 70ರಷ್ಟು ಮುಗಿದಿದೆ. ಇದು ಸೇರಿದಂತೆ ಇನ್ನುಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣವಾಗಿ ಮುಗಿಸಲು ನಿಮ್ಮ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ಹಿಂದಿನ 60 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಗಳನ್ನು ಗಡ್ಕರಿ ಅವರು ಕೇವಲ ಆರು ವರ್ಷಗಳಲ್ಲಿ ನಿರ್ಮಿಸಿದ್ದಾರೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೆಲವೆಡೆ ಭೂ ಸ್ವಾಧೀನಕ್ಕೆ ಸಮಸ್ಯೆಯಾಗಿದೆ. ಇದನ್ನು ವೇಗವಾಗಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು, ರಾಜ್ಯದಲ್ಲಿ ಸಿಆರ್ ಎಫ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜೋಶಿ ಅವರು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ನಾಯಕರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ಯೋಜನೆಯ ಮಾಹಿತಿ: ನಗರದ ಪ್ರಮುಖ ಭಾಗವಾದ ರಾಣಿ ಚನ್ನಮ್ಮ ವೃತ್ತದಿಂದ ವಿವಿಧ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್‌ ನಿರ್ಮಾಣ ಯೋಜನೆ ₹298 ಕೋಟಿ ವೆಚ್ಚದಲ್ಲಿ  ಮಾಡಲಾಗುತ್ತದೆ.

ಚನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್‌ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್‌ ನಿರ್ಮಾಣವಾಗಲಿದೆ. ಈ  ಫ್ಲೈ ಓವರ್‌ 3.6 ಕಿ.ಮೀ. ಉದ್ದವಿರಲಿದೆ.

ಮೂರು ಹಂತದ ಯೋಜನೆಗೆ ₹1,242 ಕೋಟಿ ವೆಚ್ಚದ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಯ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತಿದೆ.

ಇದೇ ವೇಳೆ  ನಿತಿನ್‌ ಗಡ್ಕರಿ ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಚತುಷ್ಪಥ ರಸ್ತೆ ಮತ್ತು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು. 2.77 ಕಿ.ಮೀ. ಉದ್ದದ ರಸ್ತೆಯ ಈ ಯೋಜನೆಯಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ.

ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದ್ದರು.


ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಫ್ಲೈ ಓವರ್‌ನ ನೀಲ ನಕ್ಷೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು