ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27.25 ಎಕರೆ ಭೂಮಿ ಕಬಳಿಸಲು ಶ್ರೀರಾಮುಲು ಹುನ್ನಾರ: ಎಸ್‌.ಆರ್. ಹಿರೇಮಠ

Last Updated 13 ಮೇ 2022, 13:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಚಿವ ಬಿ. ಶ್ರೀರಾಮುಲು ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಳ್ಳಾರಿಯಲ್ಲಿ 27.25 ಎಕರೆ ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.

‘ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು 2002ರಲ್ಲಿ ಶ್ರೀರಾಮುಲು ಅವರು ಈ ಕೃತ್ಯ ಎಸಗಿದ್ದಾರೆ. ಈ ಪೈಕಿ, ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ವಶಪಡಿಸಿಕೊಂಡಿದ್ದ 10 ಎಕರೆ ಭೂಮಿಯೂ ಸೇರಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಯ ರಕ್ಷಣಾ ಸಮಿತಿ, ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕ ಸಂಘಟನೆಗಳಿಗೆ ಶ್ರೀರಾಮುಲು ಅವರ ಈ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಎಲ್ಲಾ ದಾಖಲೆಗಳು ನಕಲಿಯಾಗಿರುವುದು ಖಚಿತವಾಗಿದೆ. ಈ ಕುರಿತು ಸ್ಥಳೀಯರೊಬ್ಬರು ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಪ್ರಕರಣದ ತನಿಖೆಯನ್ನು ಸರ್ಕಾರ ಪಾರದರ್ಶಕವಾಗಿ ನಡೆಸಬೇಕು. ಅದಕ್ಕಾಗಿ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಬೇರೆ ಉದ್ದೇಶಕ್ಕೆ ಬಳಸಬೇಡಿ

‘ಗಣಿಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆಗೆ ಮೀಸಲಾದ ₹17 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು. ಹಣವನ್ನು ಗಣಿ ಬಾಧಿತ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಪರಿಸರ ಪುನಶ್ಚೇತನ ಹಾಗೂ ಆ ಪ್ರದೇಶದ ಬಡಜನರ ಅಭಿವೃದ್ಧಿಗಷ್ಟೇ ಬಳಸಬೇಕು’ ಎಂದು ಹಿರೇಮಠ ಆಗ್ರಹಿಸಿದರು.

‘ಕೆಲ ಹಿತಾಸಕ್ತಿಗಳು ಈ ಹಣವನ್ನು ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲು ಹುನ್ನಾರ ನಡೆಸಿವೆ. ಈ ನಿಟ್ಟಿನಲ್ಲಿ, ಯೋಜನೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂಕೋರ್ಟ್ ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ’ ಎಂದರು.

‘ಮೂರು ಜಿಲ್ಲೆಗಳಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನೆ ಸೇರಿದಂತೆ ಆ ಭಾಗದ ಜನರ ಅಭಿವೃದ್ಧಿಗೆ ಪೂರಕವಾಗಿ ಹಣವನ್ನು ಬಳಸಬೇಕು. ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವರದಿಯನ್ನು ಮೂರು ತಿಂಗಳಿಗೊಮ್ಮೆ ಪರಿಶೀಲಿಸಬೇಕು. ಸಿಎಜಿಯನ್ನು ಸಂಪರ್ಕಿಸಿ ಲೆಕ್ಕಪತ್ರಗಳನ್ನು ಸರಿಯಾಗಿ ಇಡಲು ಸಲಹೆ ಪಡೆಯಬೇಕು ಎಂದು ಕೋರ್ಟ್ ತಿಳಿಸಿದೆ’ ಎಂದು ಹೇಳಿದರು.

‘ಸಂಘ–ಪರಿವಾರದ ಸಿದ್ಧಾಂತ ಮಾರಕ’

‘ಸಂಘ–ಪರಿವಾರದ ಸಿದ್ಧಾಂತ ಸಂವಿಧಾನ ವಿರೋಧಿಯಾಗಿದ್ದು, ಭಾರತಕ್ಕೆ ಮಾರಕವಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯ ಹಿಂದಿದ್ದವರು, ಈಗ ದೇಶದ ಮುಖ್ಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅಂತಹದ್ದೇ ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ’ ಎಂದು ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

‘ಕ್ರಾಂತಿಕಾರಿ ಬಸವಣ್ಣನ ಹೆಸರಿಟ್ಟುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಉತ್ತರಪ್ರದೇಶ ಮಾದರಿಯನ್ನು ಇಲ್ಲಿ ಅನುಸರಿಸುವ ಮೂಲಕ ಬಸವಣ್ಣನ ತತ್ವಗಳನ್ನು ಗಾಳಿಗೆ ತೂರಿದ್ದಾರೆ’ ಎಂದು ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT