ಶುಕ್ರವಾರ, ಜನವರಿ 24, 2020
21 °C
ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟು

ಹುಬ್ಬಳ್ಳಿ: ₹3.50 ಕೋಟಿ ಒಡೆಯನಾದ ಆದರ್ಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಮಿನಿ ವಿಧಾನಸೌಧದ ತಹಶೀಲ್ದಾರ್‌ ಕಚೇರಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಡಿರುವ ಕಾರ್ಯಕ್ಕೆ, ಚಮ್ಮಾರಿಕೆ ಮಾಡಿ ಬದುಕು ಸಾಗಿಸುವ ವ್ಯಕ್ತಿ ಬರೋಬ್ಬರಿ ₹3.50 ಕೋಟಿ ಒಡೆಯನಾಗಿದ್ದಾನೆ. ಆದರೆ, ಅದು ಕೇವಲ ಪ್ರಮಾಣ ಪತ್ರದಲ್ಲಿ ಮಾತ್ರ!

ಇಂತಹದ್ದೊಂದು ವಿಚಿತ್ರ ಪ್ರಕರಣ ನಗರದ ತಹಶೀಲ್ದಾರ್ ಕಚೇರಿಯ ಕಂದಾಯ ವಿಭಾಗದಲ್ಲಿ ನಡೆದಿದೆ.

ಪಡದಯ್ಯನಹಕ್ಕಲ ನಿವಾಸಿ ಆದರ್ಶ ಅಡಿವೆಪ್ಪ ಚಂದಾವರಕರ್‌ ಅವರು ಒಂದು ತಿಂಗಳ ಹಿಂದೆ ಆದಾಯ ಪ್ರಮಾಣ ಪತ್ರಕ್ಕೆ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಕಂದಾಯ ವಿಭಾಗದ ಅಧಿಕಾರಿಗಳು ₹3.50 ಕೋಟಿ ಆದಾಯ ಹಾಕಿದ್ದಾರೆ. ಅಲ್ಲದೆ, ಅಕ್ಷರದಲ್ಲಿಯೂ ಅಷ್ಟೇ ಆದಾಯ ನಮೂದಿಸಿ ಪ್ರಮಾಣ ಪತ್ರ ನೀಡಿದ್ದಾರೆ. ಅದು ಸಹ ಐದು ವರ್ಷದ ಕಾಲಾವಧಿಗೆ.

‘ಪ್ರಮಾಣ ಪತ್ರದಲ್ಲಿ ನಮೂದಾಗಿರುವ ನನ್ನ ಆದಾಯ ನೋಡಿ ಕ್ಷಣಕಾಲ ದಂಗಾಗಿದ್ದೆ. ಕೋರ್ಟ್‌ ರಸ್ತೆಯ ಸಾಯಿಬಾಬಾ ಮಂದಿರದ ಬಳಿ ಚಮ್ಮಾರಿಕೆ ಮಾಡಿ ಜೀವನ ಸಾಗಿಸುವ ನನಗೆ ಅಷ್ಟೊಂದು ಆದಾಯ ಎಲ್ಲಿಂದ ಬರಬೇಕು? ಅಧಿಕಾರಿಗಳ ಕೃಪೆಯಿಂದಾದರೂ ಪ್ರಮಾಣ ಪತ್ರದಲ್ಲಿ ನಾನು ಕೋಟ್ಯಧೀಶನಾದೆ’ ಎಂದು ಆದರ್ಶ ವ್ಯಂಗ್ಯವಾಡಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪ ತಹಶೀಲ್ದಾರ್‌ ಅಮಜದ್‌ ಖಾನ್‌ ಪಠಾಣ್‌, ‘ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಕಣ್ತಪ್ಪಿನಿಂದ ಮೂರು ಸೊನ್ನೆ ಹೆಚ್ಚು ಹಾಕಿದ್ದಾರೆ. ಆ ಪ್ರಮಾಣ ಪತ್ರ ವಾಪಸ್‌ ಪಡೆದು, ₹20ಸಾವಿರ ಆದಾಯವಿರುವ ಪ್ರಮಾಣ ಪತ್ರ ನೀಡಲಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು