ಗುರುವಾರ , ಆಗಸ್ಟ್ 18, 2022
25 °C
ಕಳೆದ 50 ವರ್ಷದಿಂದ ಕಬ್ಬು ಬೆಳೆಯುತ್ತಿರುವ ಬಾಬುರಾವ ಪಾಟೀಲ

ಕಬ್ಬು ಬೆಳೆಯಲ್ಲಿ ಖುಷಿ ಕಂಡ ರೈತ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಪಟ್ಟಣದ ಪ್ರಗತಿಪರ ರೈತ ಬಾಬುರಾವ್ ಪಾಟೀಲ, ಕಳೆದ 50 ವರ್ಷಗಳಿಂದ ಕಬ್ಬು, ಇತರ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.

ಈ ಹಿಂದೆ ರೈತ ಬಾಬುರಾವ್ ಪಾಟೀಲ ಕಬ್ಬಿನಿಂದ ಬೆಲ್ಲ ತಯಾರಿಸು ತ್ತಿದ್ದರು. ಆದರೆ ಬೆಲ್ಲ ತಯಾರಿಕೆಗೆ ಕಾರ್ಮಿಕರನ್ನು ಮಹಾರಾಷ್ಟ್ರದಿಂದ ಕರೆಸುವುದು ದುಬಾರಿಯಾದ ಕಾರಣ ಬೆಲ್ಲ ತಯಾರಿಕೆ ಬಿಟ್ಟು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ.

ಕೊಯಮತ್ತೂರು ಹಾಗೂ ಪುಣೆಯ ಅತ್ಯಾಧುನಿಕ ತಳಿಗಳನ್ನು ರೈತ ಬಾಬುರಾವ್ ಪಾಟೀಲ ಅವರು ಸದ್ಯ ಹೊಲದಲ್ಲಿ ಬೆಳೆದಿದ್ದು, 9 ತಿಂಗಳು, 4 ತಿಂಗಳು, 1 ತಿಂಗಳು ಅವಧಿಯ ಕಬ್ಬಿನ ಬೆಳೆ ಕಾಣಬಹುದಾಗಿದೆ. ಹೀಗೆ ಒಬ್ಬರೊಬ್ಬರ ಹೊಲದಲ್ಲಿ ಒಂದೇ ಬೆಳೆ ಮೂರು ಹಂತದಲ್ಲಿರುವುದು ನೋಡಲು ಸಿಗುವುದು ವಿರಳ. ಆದರೆ ಬಾಬುರಾವ್ ಪಾಟೀಲ ಕಬ್ಬಿನ ಗದ್ದೆಯಲ್ಲಿ ಎಲ್ಲಾ ಹಂತದ ಕಬ್ಬು ಕಾಣಸಿಗುತ್ತದೆ. ಮನೆಗೆ ಅಗತ್ಯವಾದ ತರಕಾರಿಯೂ ಬೆಳೆಯುತ್ತಿದ್ದಾರೆ. ಚಿಕ್ಕ ರೈತರಿದ್ದರೆ ಅಂತಹವರು ಕಬ್ಬಿನ ನಡುವೆ ಮಿಶ್ರಬೆಳೆ ಬೇಸಾಯದ ಮೂಲಕ ಮೆಕ್ಕೆ ಜೋಳ ಬೆಳೆಯಬಹುದು ಇದರಿಂದಲೂ ಇಥೇನಾಲ್ ತಯಾರಿಸಲು ಅನುಕೂಲವಾಗುತ್ತದೆ ಎಂದು ರೈತ ಬಾಬುರಾವ್ ಪಾಟೀಲ ಹೇಳಿದರು.

‘ಬಿತ್ತನೆ ಕಬ್ಬನ್ನು ತಮ್ಮ ಹೊಲದಲ್ಲಿಯೇ ಬೆಳೆದುಕೊಂಡರೆ ಅದನ್ನು ನಾಟಿ ಮಾಡಲು ಕಡಿಮೆ ಖರ್ಚು ತಗಲುತ್ತದೆ. ಇಲ್ಲವಾದರೆ ಬೀಜ ಹುಡುಕಿ ಬೇರೆ ಕಡೆ ಹೋಗಬೇಕಾಗುತ್ತದೆ. ಬೇರೆ ಹೊಲ ಅಥವಾ ದೂರದ ಪ್ರದೇಶದಿಂದ ಬಿತ್ತನೆಯ ಕಬ್ಬು ತಂದರೆ ಅದನ್ನು ಲೋಡ್ ಮಾಡುವಾಗ ಮತ್ತು ಇಳಿಸುವಾಗ ಬೀಜದ ಕಣ್ಣುಗಳಿಗೆ ಧಕ್ಕೆಯಾಗುತ್ತದೆ. ಜತೆಗೆ ಇಳುವರಿಯೂ ಕುಂಠಿತವಾಗುತ್ತದೆ. ಹಾಗಾಗಿ ತಮ್ಮ ಹೊಲದಲ್ಲೇ ಬೆಳೆದುಕೊಂಡರೆ ಉತ್ತಮ ಎನ್ನುತ್ತಾರೆ ಅವರು.

ಒಮ್ಮೆ ಕಬ್ಬು ನಾಟಿ ಮಾಡಿದ ಮೇಲೆ 3 ವರ್ಷ ಬೆಳೆ ಬರುತ್ತದೆ. ನಾಟಿ ಮಾಡುವಾಗ ಸರಿಯಾದ ಕಬ್ಬು ದೊರೆಯದೇ ಇದ್ದರೆ ಮೂರು ವರ್ಷವೂ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮುಂಜಾಗ್ರತೆ ವಹಿಸಿ ಮುಂದಿನ ವರ್ಷ ಬೇಕಾಗುವಷ್ಟು ಬಿತ್ತನೆ ಕಬ್ಬನ್ನು ರೈತರೇ ಬೆಳೆದುಕೊಂಡು ಬೀಜದಲ್ಲಿ ಸ್ವಾವಲಂಬಿಯಾದರೆ ಹೆಚ್ಚು ಆದಾಯ ಗಳಿಸಲು ಸಾಧ್ಯ. ಇದರಿಂದ ಎಕರೆಗೆ ಕನಿಷ್ಠ ₹ 10 ರಿಂದ ₹ 12 ಸಾವಿರ ಉಳಿತಾಯವಾಗುತ್ತದೆ ಎಂದು ಅವರು ಅನುಭವ ಹಂಚಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು