ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಮುಕ್ತ ಕರ್ನಾಟಕದ ಸಂಕಲ್ಪ: ರವಿ ಕೃಷ್ಣಾರೆಡ್ಡಿ

ಗದಗ ಪ್ರವೇಶಿಸಿದ ಕೆಆರ್‌ಎಸ್ ಪಕ್ಷದ ‘ಚಲಿಸು ಕರ್ನಾಟಕ ಸೈಕಲ್ ಯಾತ್ರೆ’
Last Updated 3 ಡಿಸೆಂಬರ್ 2020, 13:47 IST
ಅಕ್ಷರ ಗಾತ್ರ

ಗದಗ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‍ಎಸ್) ಪ್ರಾಮಾಣಿಕ, ಜನಪರ ರಾಜಕಾರಣ ಕುರಿತ ಜನಜಾಗೃತಿಗಾಗಿ ನ.30ರಿಂದ ಡಿ.7ರವರೆಗೆ ಕಿತ್ತೂರಿನಿಂದ ಬಳ್ಳಾರಿವರೆಗೆ ಹಮ್ಮಿಕೊಂಡಿರುವ ‘ಚಲಿಸು ಕರ್ನಾಟಕ ಸೈಕಲ್ ಯಾತ್ರೆ’ ಬುಧವಾರ ಗದಗ ನಗರ ಪ್ರವೇಶಿಸಿತು. 300 ಕಿ.ಮೀ. ಉದ್ದದ ಸೈಕಲ್ ಯಾತ್ರೆ ಡಿ.7ಕ್ಕೆ ಮುಕ್ತಾಯಗೊಳ್ಳಲಿದೆ.

‘ಕುಟುಂಬ ರಾಜಕಾರಣ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕೊನೆ ಹಾಡುವ ಉದ್ದೇಶದಿಂದ ಕೆಆರ್‍ಎಸ್ ಪಕ್ಷ ಸ್ಥಾಪಿಸಲಾಗಿದೆ. ಜನತಾ ದಳ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿಸಲು ಹಾಗೂ ಸಾಮಾನ್ಯರ ಕೈಗೆ ಅಧಿಕಾರ ಒದಗಿಸುವುದು ಪಕ್ಷದ ಧ್ಯೇಯ’ ಎಂದು ಪಕ್ಷದ ಸಂಸ್ಥಾಪಕ ರವಿ ಕೃಷ್ಣಾರೆಡ್ಡಿ ನಗರದ ಗಾಂಧಿ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು.

‘ಕೋವಿಡ್‌–19 ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೋಟ್ಯಂತರ ರೂಪಾಯಿ ಲೂಟಿ ಮಾಡಿದೆ. ಈ ವಿಚಾರವಾಗಿ ಸಾಕಷ್ಟು ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ. ಇದರಲ್ಲಿ ಮಂತ್ರಿಗಳು, ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ’ ಎಂದು ಆರೋಪ ಮಾಡಿದರು.

‘ಭ್ರಷ್ಟ, ಲಂಚಕೋರ ನಾಯಕರಿಗೆ ಮೃದು ಸ್ವಭಾವದ ಕಾರ್ಯಕರ್ತರು ಬೇಕಿದೆ. ಜತೆಗೆ ಕಾರ್ಯಕರ್ತರಿಗೂ ದುಡ್ಡು ಹಂಚುವ ನಾಯಕರೇ ಬೇಕಿದೆ. ಇವರಿಬ್ಬರ ಮಧ್ಯೆ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ನಾಯಕರಿಗೆ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪರ ಕಾಳಜಿಯುಳ್ಳ ಜನಸಾಮಾನ್ಯರಿಗೆ ಅಧಿಕಾರ ಒದಗಿಸಲು ಶ್ರಮಿಸಲಾಗುತ್ತದೆ’ ಎಂದು ಹೇಳಿದರು.

‘ಕನ್ನಡ ನೆಲದ ಅಸ್ಮಿತೆಗಾಗಿ ಈ ಪಕ್ಷ ಸ್ಥಾಪಿಸಿದ್ದು, ಪ್ರತಿಯೊಬ್ಬರೂ ಜನತಾದಳ, ಕಾಂಗ್ರೆಸ್‌ ಹಾಗೂ ಬಿಜೆಪಿಯನ್ನು ತಿರಸ್ಕರಿಸಬೇಕಿದೆ. ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ರಾಜಕೀಯ ಮುಖಂಡರ ಹಿಂಬಾಲಕರನ್ನು ಬೆಂಬಲಿಸದೇ, ಪ್ರಾಮಾಣಿಕ, ಜನಪರ ಕಾಳಜಿ ಇರುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸಬೇಕು’ ಎಂದು ಹೇಳಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಬೆಂಗಳೂರಿನ ಆರೋಗ್ಯ ಸ್ವಾಮಿ, ಮಂಗಳೂರಿನ ವೊನೋದ ಬಂಗೇರಾ, ನಾಗರಾಜ ಕಲ್ಲಕುಟಿಗರ, ಲೀಲಾವತಿ, ಸುಮಿತ್ರಾ ಹಳ್ಳಿಕೇರಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಗದಗ ಕೆಲ ಯುವಕರು ಪಕ್ಷವನ್ನು ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT