ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಳಿ ನಗರ ಸಜ್ಜು

ಸಿಂಗಾರಗೊಳ್ಳುತ್ತಿರುವ ಪೆಂಡಾಲ್‌ಗಳು; ವಿಗ್ರಹ ಖರೀದಿಸಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ ತರುಣರು
Published : 6 ಸೆಪ್ಟೆಂಬರ್ 2024, 14:08 IST
Last Updated : 6 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ಗದಗ: ಗೌರಿ– ಗಣೇಶ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದ್ದು, ವಿಘ್ನ ವಿನಾಶಕ ಗಣೇಶನ ಪ್ರತಿಷ್ಠಾಪನೆಗೆ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳ ಹಾಗೂ ತರುಣ ಮಂಡಳಗಳು ಸಜ್ಜುಗೊಂಡಿವೆ. ಮನೆ ಮನೆಗೆ ಗಣೇಶನನ್ನು ತಂದು ಪೂಜಿಸುವ ಸಂಭ್ರಮದಲ್ಲಿ ಮಕ್ಕಳು ತೊಡಗಿದ್ದಾರೆ.

‘ಗದಗ ಜಿಲ್ಲೆಯಲ್ಲಿ ಒಟ್ಟು 1,480 ಸಾರ್ವಜನಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಮಂಡಳಿಗಳು ಅನುಮತಿ ಪಡೆದುಕೊಂಡಿವೆ. ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ಸಂಕದ ತಿಳಿಸಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಅವಳಿ ನಗರ ಗದಗ– ಬೆಟಗೇರಿಯ 80 ಕಡೆಗಳಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ವಿವಿಧ ಮಂಡಳಿಗಳು ಅನುಮತಿ ಪಡೆದಿವೆ’ ಎಂದು ಗದಗ ಶಹರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಡಿ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ.

‘ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚನೆ ನೀಡಲಾಗಿದೆ. ಅವಳಿ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗಳು ಮೂರು, ಐದು, ಏಳು, ಒಂಬತ್ತು ಹಾಗೂ 11 ದಿನಗಳವರೆಗೆ ಪೂಜಿಸಿ, ವಿಸರ್ಜನೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

ಗಣೇಶ ಪ್ರತಿಷ್ಠಾಪನೆಗೆ ಬೇಕಿರುವ ಪೆಂಡಾಲ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು, ಅವುಗಳನ್ನು ಅಲಂಕರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಹೂವು, ಬಣ್ಣದ ಸಾಮಗ್ರಿಗಳನ್ನು ಬಳಸಿ ಗಣೇಶ ಪೆಂಡಾಲ್‌ಗಳನ್ನು ಸಿಂಗರಿಸುವಲ್ಲಿ ತರುಣರು ಗಮನ ಹರಿಸಿದ್ದಾರೆ.

ಈ ಬಾರಿ ಒಂಬತ್ತನೇ ದಿನದಂದು ಗಣೇಶ ಮೂರ್ತಿಗಳನ್ನು ಏಕಕಾಲಕ್ಕೆ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಯೋಚಿಸುತ್ತಿವೆ. ಇದಕ್ಕೆ ಎಲ್ಲರ ಸಹಕಾರ ಸಿಕ್ಕರೆ ಅವಳಿ ನಗರದ ಎಲ್ಲ ಗಣೇಶ ವಿಗ್ರಹಗಳನ್ನು ಒಂದೇ ಸಾಲಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಗದಗ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿರುವ ಗಣೇಶ ಮಾರಾಟ ಮಳಿಗೆಗಳು
ಗದಗ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿರುವ ಗಣೇಶ ಮಾರಾಟ ಮಳಿಗೆಗಳು

ಒಂದೇ ಕಡೆ ಖರೀದಿಗೆ ಅವಕಾಶ

ಅವಳಿ ನಗರದ ಜನರು ಗಣೇಶ ಮೂರ್ತಿಗಳನ್ನು ಒಂದೇ ಕಡೆಗಳಲ್ಲಿ ಖರೀದಿಸುವ ಅವಕಾಶವನ್ನು ಗಣೇಶ ಮೂರ್ತಿ ತಯಾರಕರ ಸಂಘದವರು ಕಲ್ಪಿಸಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‌ಸೆ.1ರಿಂದ ವಿಗ್ರಹ ಮಾರಾಟ ಆರಂಭಗೊಂಡಿದ್ದು ಇಲ್ಲಿ 16 ಮಳಿಗೆಗಳನ್ನು ತೆರೆಯಲಾಗಿದೆ. ಗದಗ ಲಕ್ಷ್ಮೇಶ್ವರ ಧಾರವಾಡ ಕುನ್ನೂರ ಶಿರಹಟ್ಟಿ ಗುಡಿಗೇರಿ ಸೇರಿದಂತೆ ವಿವಿಧೆಡೆಯ ವ್ಯಾಪಾರಿಗಳು ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲ ಮಳಿಗೆಗಳಿಂದ ಈವರೆಗೆ ನೂರಾರು ಮೂರ್ತಿಗಳು ಮಾರಾಟಗೊಂಡಿವೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಸಣ್ಣ ಮೂರ್ತಿಗಳು ಲೆಕ್ಕಕ್ಕೆ ಸಿಗದಷ್ಟು ಬಿಕರಿಯಾಗಿವೆ. ಸಾರ್ವಜನಿಕ ಗಜಾನನೋತ್ಸವ ಮಹಾ ಮಂಡಳದವರು ದೊಡ್ಡ ಮೂರ್ತಿಗಳನ್ನು ಖರೀದಿಸಿದರೆ ಗಲ್ಲಿಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ತರುಣ ಮಂಡಳದವರು ಅದಕ್ಕಿಂತ ಸಣ್ಣ ಸಣ್ಣ ವಿಗ್ರಹಗಳನ್ನು ಖರೀದಿಸುತ್ತಿದ್ದಾರೆ. ₹500ರಿಂದ ₹15 ಸಾವಿರ ಬೆಲೆಯ ಗಣೇಶ ವಿಗ್ರಹಗಳು ಇಲ್ಲಿ ಮಾರಾಟಕ್ಕೆ ಲಭ್ಯ ಇವೆ. ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಣೇಶ ವಿಗ್ರಹಗಳ ಮಾರಾಟ ಜೋರಾಗಿದೆ. ಗ್ರಾಹಕರಿಂದ ನಾಲ್ಕು ಆರು ಎಂಟು ಒಂಬತ್ತು ಹತ್ತು ಅಡಿಯ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿಗ್ರಹಗಳ ವಿನ್ಯಾಸ ಎತ್ತರ ಕಲಾವಿದನ ಶ್ರಮ ಇವುಗಳ ಮೇಲೆ ಬೆಲೆ ನಿರ್ಧಾರವಾಗುತ್ತದೆ’ ಎನ್ನುತ್ತಾರೆ ಗಣೇಶ ವಿಗ್ರಹ ತಯಾರಕ ಮುತ್ತಣ್ಣ ಭರಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT