ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಗದ ‘ಬಜೆಟ್‌’ ಬಲ

ರೋಣದಲ್ಲಿ ಹೊಸ ಜಿಟಿಟಿಸಿ ಪ್ರಾರಂಭ ಘೋಷಣೆ: ಕೃಷಿ, ಕೈಗಾರಿಕಾ ಕ್ಷೇತ್ರಕ್ಕೆ ಸಿಗದ ಮನ್ನಣೆ
Published 17 ಫೆಬ್ರುವರಿ 2024, 8:38 IST
Last Updated 17 ಫೆಬ್ರುವರಿ 2024, 8:38 IST
ಅಕ್ಷರ ಗಾತ್ರ

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಜಿಲ್ಲೆಯ ಜನರಿಗೆ ತೀವ್ರ ನಿರಾಸೆ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಎಚ್‌.ಕೆ.ಪಾಟೀಲ ಪ್ರಭಾವಿ ಸಚಿವರಾಗಿದ್ದರೂ ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆಗಳು ಪ್ರಕಟವಾಗಿಲ್ಲ. ಹೆಚ್ಚಿನ ಅನುದಾನವೂ ಸಿಕ್ಕಿಲ್ಲ.

ಎಚ್‌.ಕೆ.ಪಾಟೀಲ ಪ್ರವಾಸೋದ್ಯಮ ಸಚಿವರೂ ಆಗಿರುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ರಾಜ್ಯ ಬಜೆಟ್‌ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಪಕ್ಕದ ಜಿಲ್ಲೆಯಲ್ಲಿರುವ ಅಂಜನಾದ್ರಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹100 ಕೋಟಿ ಪ್ರಕಟಿಸಲಾಗಿದೆ. ಆದರೆ, ಜಿಲ್ಲೆಯ ಲಕ್ಕುಂಡಿ ಅಭಿವೃದ್ಧಿಗೆ ಬಿಡಿಗಾಸು ಕೊಟ್ಟಿಲ್ಲ ಎಂಬ ಕೊರಗು ಜಿಲ್ಲೆಯ ಜನರನ್ನು ಕಾಡಿದೆ.

ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಸಚಿವ ಎಚ್‌.ಕೆ.ಪಾಟೀಲ ಅವರು ವೈಯಕ್ತಿಕ ಆಸಕ್ತಿ ಪ್ರಕಟಿಸಿ, ಅದಕ್ಕಾಗಿಯೇ ಒಂದು ಸಮಿತಿ ರಚನೆ ಮಾಡಿ, ಜಿಲ್ಲೆಯಲ್ಲಿನ ಸತ್ವಯುತ ಪ್ರವಾಸಿತಾಣಗಳ ಬಗ್ಗೆ ತಿಂಗಳುಗಟ್ಟಲೆ ಅಧ್ಯಯನ ಮಾಡಿಸಿ, ಅವರಿಂದ ವರದಿ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸಿದ್ದರು.
‌‌
ಗದಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹804 ಕೋಟಿ ಅವಶ್ಯಕತೆ ಇದೆ ಎಂದು ಸಮಿತಿ ವರದಿ ನೀಡಿತ್ತು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಒಮ್ಮೆಲೆ ₹804 ಕೋಟಿ ಅನುದಾನ ಘೋಷಿಸಲು ಸಾಧ್ಯವಾಗದಿದ್ದರೂ; ಅದರಲ್ಲಿ ಕಾಲು ಭಾಗ ಹಣವನ್ನಾದರೂ ಕೊಟ್ಟಿದ್ದರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕನಸಿಗೆ ರೆಕ್ಕೆ ಮೂಡುತ್ತಿತ್ತು. ಆದರೆ, ಅದು ಆಗಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ‘ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು’ ಎಂಬ ಒಂದು ಸಾಲು ಮಾತ್ರ ಇದ್ದು, ‘ಉತ್ತೇಜನ ಹೇಗೆ?’, ‘ರೂಪುರೇಷೆ ಏನು?’, ‘ಹಣ ಎಷ್ಟು ಮೀಸಲಿಡಲಾಗಿದೆ?’ ಎಂಬುದರ ಬಗ್ಗೆ ಏನೂ ಮಾಹಿತಿ ಇಲ್ಲ.

ಜಿಲ್ಲೆಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ, ಈ ಬಾರಿಯೂ ಯೋಜನೆ ಘೋಷಣೆ ಆಗಿಲ್ಲ. ‘ಜವಳಿ ಪಾರ್ಕ್‌ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿ ಅನ್ವಯ ಸಹಾಯಧನ ನೀಡಲಾಗುವುದು’ ಎಂದು ತಿಳಿಸಲಾಗಿದೆ. ಆದರೆ, ಗದಗ ಜಿಲ್ಲೆಗೂ ಮಿನಿ ಜವಳಿ ಪಾರ್ಕ್‌ ಬರುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

₹350 ಕೋಟಿ ವೆಚ್ಚದಲ್ಲಿ ರಾಜ್ಯದ ಆರು ಕಡೆಗಳಲ್ಲಿ ರೈಲ್ವೆ ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಹಣ ಮೀಸಲಿಟ್ಟಿದ್ದು, ಈ ಪೈಕಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪುರ ಕೂಡ ಸೇರಿದೆ. ಅದೇರೀತಿ, ₹50 ಕೋಟಿ ವೆಚ್ಚದಲ್ಲಿ ರಾಜ್ಯದ ಐದು ಕಡೆಗಳಲ್ಲಿ ಶೀತಲಗೃಹ ನಿರ್ಮಾಣ ಮಾಡುವುದಾಗಿ ಪ್ರಕಟಿಸಿದ್ದು, ಅದರಲ್ಲಿ ಗದಗ ಎಪಿಎಂಸಿ ಹೆಸರಿದೆ. ಕಳೆದ ಬಜೆಟ್‌ನಲ್ಲೇ ಪ್ರಕಟಿಸಿದಂತೆ ಈ ಬಾರಿ ಶಿರಹಟ್ಟಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ತಿಳಿಸಲಾಗಿದೆ.

ಗದಗ ಜಿಲ್ಲೆಯ ರೋಣದಲ್ಲಿ ನಬಾರ್ಡ್‌ ಸಹಯೋಗದಲ್ಲಿ ಹಾಗೂ ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಜಿಲ್ಲಾ ಖನಿಜ ನಿಧಿಯ ಮೂಲಕ ಒಟ್ಟು ₹150 ಕೋಟಿ ವೆಚ್ಚದಲ್ಲಿ ಹೊಸ ಜಿಟಿಟಿಸಿ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ.

ಗದಗ ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಕೃಷಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಹೊಸ ಯೋಜನೆಗಳು ಪ್ರಕಟವಾಗುತ್ತವೆ ಎಂಬ ನಿರೀಕ್ಷೆ ಇತ್ತು. ಜತೆಗೆ ಯುವಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ನೆರವಾಗುವಂತೆ ಬೃಹತ್‌ ಉದ್ಯಮಗಳ ಸ್ಥಾಪನೆ ಆಗಬೇಕು ಎಂಬ ಆಸೆ ಇತ್ತು. ಆದರೆ, ಯುವಜನರ ಆಸೆಗಳನ್ನು ರಾಜ್ಯ ಬಜೆಟ್‌ ಕದಡಿದೆ ಎಂದು ಜನರು ಅಲವತ್ತುಕೊಂಡಿದ್ದಾರೆ.

ಕಳಸಾ ಬಂಡೂರಿ: ತೊಡಕಿನ ಬಗ್ಗೆಯಷ್ಟೇ ಪ್ರಸ್ತಾಪ
ಗದಗ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಜಾಲವಾಡಗಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುವ ಭರವಸೆಯನ್ನಷ್ಟೇ ನೀಡಲಾಗಿದೆ. ಹಾಗೆಯೇ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕೆ ಇರುವ ತೊಡಕಿನ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ‘ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದೆ. ಪ್ರಸ್ತುತ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅರಣ್ಯ ತೀರುವಳಿ ನಿರೀಕ್ಷಿಸಿ ರಾಜ್ಯ ಸರ್ಕಾರವು ಟೆಂಡರ್‌ ಪ್ರಕ್ರಿಯೆ ಚಾಲನೆಗೊಳಿಸಿದೆ. ಆದರೆ ಈ ನಡುವೆ ಕೇಂದ್ರ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅರಣ್ಯ ತೀರುವಳಿಯನ್ನು ಅನುಮೋದಿಸದೇ ಮುಂದೂಡಲಾಗಿದೆ’ ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಜಿಮ್ಸ್‌ನಲ್ಲಿ ಸೂಪರ್‌ ಸ್ಪೆಷಾಲಿಟಿ ಕಾರ್ಡಿಕ್‌ ಯುನಿಟ್‌
ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆ ಒದಗಿಸುವ ಭರವಸೆಯೊಂದಿಗೆ 2025–26ನೇ ಸಾಲಿನಲ್ಲಿ ಗದಗ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಐಪಿಎಚ್‌ಎಲ್‌) ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಗದಗ ಕೊಪ್ಪಳ ಮತ್ತು ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಿದ್ದು ಈ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ ₹150 ಕೋಟಿ ಒದಗಿಸುವುದು ಹಾಗೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಯಾಥಲ್ಯಾಬ್‌ ಸೌಲಭ್ಯದೊಂದಿಗೆ ಸೂಪರ್‌ ಸ್ಪೆಷಾಲಿಟಿ ಕಾರ್ಡಿಕ್‌ ಯುನಿಟ್‌ ಅನ್ನು ₹10 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT