ಬುಧವಾರ, ಏಪ್ರಿಲ್ 21, 2021
23 °C
ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಭಿಮತ

ಕಾಡು ವೃದ್ಧಿಗೆ ಸಹಭಾಗಿತ್ವ ಅಗತ್ಯ: ಸಚಿವ ಸಿ.ಸಿ.ಪಾಟೀಲ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಅರಣ್ಯ ಸಂಪತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಸಸ್ಯಕಾಶಿ ಕಪ್ಪತಗುಡ್ಡವನ್ನು ಅಭಿವೃದ್ಧಿ ಪಡಿಸಿ ಹಸಿರು ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ‘ಕಪ್ಪತ ಉತ್ಸವ-2021’ ಉದ್ಘಾಟಿಸಿ ಅವರು ಮಾತನಾಡಿದರು.

‘ಕಪ್ಪತಗುಡ್ಡದಲ್ಲಿರುವ ಔಷಧೀಯ ಸಸ್ಯಗಳ ಪ್ರಭೇದ ಹಾಗೂ ಅವುಗಳ ಉಪಯೋಗದ ಕುರಿತು ಅರಣ್ಯ ಅಧಿಕಾರಿಗಳು ಹೊರತಂದಿರುವ ಕಪ್ಪತಗುಡ್ಡ ಪುಸ್ತಕವನ್ನು ಕನ್ನಡ ಭಾಷೆಗೆ ತರ್ಜುಮೆಗೊಳಿಸಿದರೆ ಸಾರ್ವಜನಿಕರು ಕಪ್ಪತಗುಡ್ಡದ ಮಹತ್ವ ತಿಳಿದುಕೊಳ್ಳಲು ಅನುಕೂಲ ಆಗಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

‘ಗಣಿ ಮತ್ತು ಅರಣ್ಯ ಇಲಾಖೆ ಎರಡೂ ಎಣ್ಣೆ ಹಾಗೂ ಸೀಗೆಕಾಯಿ ಸಂಬಂಧ ಹೊಂದಿದ್ದು, ರಾಜ್ಯದ ಅಭಿವೃದ್ಧಿಗೆ ಗಣಿಗಾರಿಕೆ ಅಗತ್ಯ. ಅದರಂತೆ ನಾಳಿನ ಉತ್ತಮ ಪರಿಸರಕ್ಕೆ ಅರಣ್ಯ ಬೇಕು. ಈ ಎರಡು ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಜೀವವೈವಿಧ್ಯದಲ್ಲಿ ಗುರುತಿಸಲಾದ ಜಗತ್ತಿನ 18 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿರುವುದು ಹೆಮ್ಮೆಯ ವಿಷಯ. ಸಂಶೋಧನೆ ಪ್ರಕಾರ ಪ್ರಸ್ತುತ ಒಂದು ವರ್ಷದಲ್ಲಿ ಸಾವಿರ ಸಸ್ಯ ಪ್ರಭೇದಗಳು ನಾಶವಾಗುತ್ತಿವೆ. ಅಂದರೆ ಪ್ರತಿ ದಿನಕ್ಕೆ ಇಪ್ಪತ್ತೇಳು ಸಸ್ಯ ಪ್ರಭೇದಗಳು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ’ ಎಂದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ‘ನಾವೆಲ್ಲರೂ ಸಸ್ಯ ಸಂಕುಲ ಉಳಿಸಿದರೆ ಮುಂದಿನ ಜೀವ ಸಂಕುಲ ನೆಮ್ಮದಿಯಿಂದ ಇರಲು ಸಾಧ್ಯ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಪ್ಪತ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಕುರಿತು ಉತ್ತಮ ಚರ್ಚೆಗಳಾಗಿ ಮುಂದಿನ ಪೀಳಿಗೆಗೆ ವನ್ಯ ಜೀವಿ ಹಾಗೂ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡುವಂತಾಗಲಿ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡರ, ಎಸ್‌ಪಿ ಯತೀಶ್ ಎನ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ಹಾಗೂ ಅರಣ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಪ್ಪತಗುಡ್ಡ ಪುಸ್ತಕ ಬಿಡುಗಡೆ: ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ ಅವರು ಕಪ್ಪತಗುಡ್ಡದ ಔಷಧೀಯ ಸಸ್ಯಗಳ ಕುರಿತು ಹೊರತಂದಿರುವ ಪುಸ್ತಕವನ್ನು ಸಚಿವ ಸಿ.ಸಿ.ಪಾಟೀಲ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಕಿರು ಮೃಗಾಲಯಕ್ಕೆ ಬಸ್‌ ಸೇವೆ ಸಂಚಾರಕ್ಕೆ ಚಾಲನೆ ನೀಡಲಾಯಿತು. ಕಪ್ಪತಗುಡ್ಡದ ಮಹತ್ವ ಸಾರುವ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ

ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರ ಸಾಗರ, ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ, ಪರಿಸರ ಸಂರಕ್ಷಣಾಧಿಕಾರಿ ಡಾ. ಸಮದ್ ಕೊಟ್ಟೂರ, ಶಿವಾನಂದ ಕಳವೆ, ಅಜಿತ್‌ ಕುಮಾರ ಸಿರಸಾಟೆ, ವನ್ಯ ಜೀವಿ ಪರಿಪಾಲಕ ಡಾ. ಅರುಣ ಎಸ್.ಕೆ., ಸಿ.ಎಸ್.ಅರಸಿನಾಳ ಹಾಗೂ ಸುಗಂಧಿ ಮತ್ತು ರಾಣಾ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು