ಶುಕ್ರವಾರ, ಅಕ್ಟೋಬರ್ 23, 2020
28 °C
ಜಲಾವೃತವಾಗಿದ್ದ ಬೂದಿಹಾಳ ಗ್ರಾಮಕ್ಕೆ ಸಚಿವ ಸಿ.ಸಿ. ಪಾಟೀಲ ಭೇಟಿ

ತಡೆಗೋಡೆ ನಿರ್ಮಾಣಕ್ಕೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಸ್ಥಳಾಂತರಗೊಂಡ ಬೂದಿಹಾಳ ಗ್ರಾಮಕ್ಕೆ ಮಳೆ ನೀರು ನುಗ್ಗದಂತೆ ಅಧಿಕಾರಿಗಳು ಸುರಕ್ಷತೆ ಕಲ್ಪಿಸಬೇಕು. ಇದಕ್ಕೆ ಅಗತ್ಯವಿರುವ ತಡೆಗೋಡೆ ನಿರ್ಮಾಣಕ್ಕೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಕೂಡಲೇ ಸರ್ಕಾರಕ್ಕೆ ಪ್ರಸ್ತಾವ  ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಮಳೆ ನೀರಿನಿಂದ ತೊಂದರೆಗೆ ಒಳಗಾಗಿರುವ ತಾಲ್ಲೂಕಿನ ಬೂದಿಹಾಳ ನವಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿ ಅವರು ಮಾತನಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಬೂದಿಹಾಳ ಗ್ರಾಮದ ಸಮಸ್ಯೆ ಪರಿಹರಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಬೂದಿಹಾಳ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಮಳೆ ನೀರು ನುಗ್ಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಪಾಟೀಲ ಭರವಸೆ ನೀಡಿದರು.

ನೀರು ನುಗ್ಗಿ ತೊಂದರೆಗೆ ಒಳಗಾದ ಕುಟುಂಬಗಳಿಗೆ ತುರ್ತು ಪರಿಹಾರ ನೀಡಲು ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ಅಗತ್ಯವಿರುವ ಚರಂಡಿ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕು. ಹಳ್ಳದ ನೀರು ಗ್ರಾಮಕ್ಕೆ ಪ್ರವೇಶ ಮಾಡುವಂತಿದ್ದರೆ ಹಳ್ಳದ ಹಾಗೂ ಅಗತ್ಯವಿರುವ ಸೇತುವೆ ವಿಸ್ತರಣೆಗೆ  ಲೊಕೋಪಯೋಗಿ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನು ಸಂಬಂಧ ಪಟ್ಟ ಇಲಾಖೆ ಮೂಲಕ ಕೈಗೊಳ್ಳಲಾಗುವುದು, ಸಮುದಾಯ ಶೌಚಾಲಯ ನಿರ್ನಾಣಕ್ಕೆ ಜಿಲ್ಲಾ ಪಂಚಾಯ್ತಿ ಮೂಲಕ ಕ್ರಮ ವಹಿಸಲಾಗುವುದು. ಹೆಚ್ಚಿನ ಮನೆಗಳು ಅಗತ್ಯವಿದ್ದರೆ ಗ್ರಾಮ ಸಭೆ ನಡೆಸಿ ಆ ಕುಟುಂಬಗಳ ಪಟ್ಟಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಗ್ರಾಮದ ಮುಖಂಡರಿಗೆ ಹಾಗೂ ಪಂಚಾಯ್ತಿ ಅಧಿಕಾರಿಗಳಿಗೆ ಸಚಿವ ಪಾಟೀಲ ಸೂಚಿಸಿದರು.

ಮನೆ ದುರಸ್ತಿಗೆ ಆಗ್ರಹ : ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ. ಮಳೆ ಬಂದರೆ ಸೋರುತ್ತವೆ. ಹೀಗಾಗಿ ಮನೆ ದುರಸ್ತಿಗೆ ಹಣ ನೀಡಲು ಗ್ರಾಮಸ್ಥರು ಆಗ್ರಹಿಸಿದರು. ಇವರ ಜೊತೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜಗೌಡ ಕೆಂಚನಗೌಡ್ರ ಸಚಿವರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವ ಪಾಟೀಲರು ಮನೆ ದುರಸ್ತಿಗೆ ಅವಕಾಶವಿಲ್ಲ. ಆದರೆ ನೀರು ನುಗ್ಗದಂತೆ ಎಲ್ಲ ಕ್ರಮ ವಹಿಸಿ, ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ  ತಹಶೀಲ್ದಾರ್ ಮಹೇಂದ್ರ, ಡಿಎಸ್‍ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಎಂಜನಿಯರ್ ಎಂ.ಡಿ.ತೋಗುಣಸಿ, ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕುರ್ತಕೋಟಿ, ಪಿಡಿಒ ಸಂಕನಗೌಡ್ರ, ಬಾಬು ಹಿರೇಹೊಳಿ, ಕೆಂಪನಗೌಡ್ರ, ವಿರೂಪಾಕ್ಷಪ್ಪ ಹಿರೇಹೊಳಿ, ಉಮೇಶ ಮಾನೆ, ಕೃಷ್ಣಪ್ಪ ಚವ್ಹಾಣ, ಹನಮಂತಗೌಡ ಪಾಟೀಲ, ಬಸವರಾಜ ಮಾನೆ ಹಾಗೂ ಗ್ರಾಮಸ್ಥರು ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.