ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಮತದಾರರ ಪಟ್ಟಿ ಪರಿಷ್ಕರಣೆ ನಿಖರವಾಗಿರಲಿ

ಗದಗ ಜಿಲ್ಲೆ ಮತದಾರರ ಪಟ್ಟಿ ವೀಕ್ಷಕ ಡಾ. ಎಸ್.ಬಸವರಾಜ ಸೂಚನೆ
Last Updated 3 ಡಿಸೆಂಬರ್ 2020, 13:52 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿಯೋಜಿತ ಅಧಿಕಾರಿಗಳು ನಿಖರವಾಗಿ ಪಟ್ಟಿ ತಯಾರಿಸಲು ಕ್ರಮ ವಹಿಸಬೇಕು’ ಎಂದು ಗದಗ ಜಿಲ್ಲೆ ಮತದಾರರ ಪಟ್ಟಿ ವೀಕ್ಷಕ ಡಾ. ಎಸ್.ಬಸವರಾಜ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯ ನಿಯೋಜಿತ ಎಲ್ಲ ಅಧಿಕಾರಿಗಳು ಸೂಚನೆ ಮೇರೆಗೆ ಮತದಾರರ
ಪಟ್ಟಿ ಸಿದ್ಧಗೊಳಿಸಬೇಕು. ಪಟ್ಟಿ ಪರಿಷ್ಕರಣೆ ವೇಳೆ ಅಧಿಕಾರಿಗಳಿಗೆ ಎದುರಾಗುವ ಗೊಂದಲಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಪರಿಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ಅರ್ಹ ಮತದಾರರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ದೊರೆಯುವಂತೆ ಅವಕಾಶಕಲ್ಪಿಸಬೇಕು. ನಕಲಿ ಮತದಾರರನ್ನು ಗುರುತಿಸಿ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು’ ಎಂದು ಹೇಳಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಂದೇ ಪ್ರದೇಶದ ಹಲವರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಅಲ್ಲದೇ ವಲಸೆಸಂತ್ರಸ್ತರ ಹೆಸರುಗಳು ದಿಢೀರ್‌ ಆಗಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವುದು ಕೂಡ ಕಂಡುಬಂದಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಅವ್ಯವಸ್ಥೆಗೆ ಅವಕಾಶ ನೀಡದೇ ಕ್ರಮವಹಿಸಿ’ ಎಂದು ಸೂಚಿಸಿದರು.

‘ಮೃತ ಪಟ್ಟವರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು. ಹೊಸ ಮತದಾರರನ್ನು ನೋಂದಾಯಿಸುವ ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು ಇದ್ದರು.

ಸಭೆಯ ನಂತರ ಗದಗ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಡಾ.ಎಸ್. ಬಸವರಾಜ ಅವರು ಚುನಾವಣೆ ಶಾಖೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಣೆ ನಡೆಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಎಂ. ಇದ್ದರು.

ಬಿಎಲ್‌ಒಗಳಿಗೆ ನಿಯಮಿತವಾಗಿ ತರಬೇತಿ: ಎಡಿಸಿ

‘ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ’ ಎಂದುಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ. ತಿಳಿಸಿದರು.

‘ಜಿಲ್ಲೆಯಲ್ಲಿ ನ.18ರವರೆಗಿನ ಮಾಹಿತಿಯಂತೆ 4,33,675 ಪುರುಷರು, 4,29,238 ಮಹಿಳೆಯರು ಹಾಗೂ 45 ಇತರರು ಸೇರಿದಂತೆ ಒಟ್ಟು 8,62,958 ಮತದಾರರು ಇದ್ದಾರೆ. ನಗರ ಪ್ರದೇಶದಲ್ಲಿ 348, ಗ್ರಾಮೀಣ ಪ್ರದೇಶದಲ್ಲಿ 611 ಮತಗಟ್ಟೆ ಸೇರಿದಂತೆ ಒಟ್ಟು 959 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 959 ಬಿಎಲ್‌ಒಗಳನ್ನು ನೇಮಿಸಿ ಅವರಿಗೆ ನಿಯಮಿತವಾಗಿ ತರಬೇತಿ ನೀಡಲಾಗಿದೆ. ಅವರೆಲ್ಲರೂ ಮತದಾರರ ಪಟ್ಟಿಯನ್ನು ನಿಖರವಾಗಿ ತಯಾರಿಸಲು ಕ್ರಮವಹಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT