ಬುಧವಾರ, ಮಾರ್ಚ್ 22, 2023
23 °C
ಡಾ. ಸಂಗಮೇಶ ಸವದತ್ತಿಮಠ ಹೇಳಿಕೆಗೆ ತೋಂಟದ ಸಿದ್ಧರಾಮ ಸ್ವಾಮೀಜಿ ಖಂಡನೆ

ವೈಯಕ್ತಿಕ ಆಗ್ರಹಗಳಿಗೆ ವೇದಿಕೆ ಬಳಕೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಬಸವಾದಿ ಶರಣರು ಶೋಷಣೆ, ಅಸಮಾನತೆ, ವರ್ಣಾಶ್ರಮ ವ್ಯವಸ್ಥೆಯಿಂದ ಜನರನ್ನು ರಕ್ಷಿಸಲು ವೈದಿಕ ಕರ್ಮಕಾಂಡದ ವಿರೋಧದಲ್ಲಿ ಹೊಸಧರ್ಮವನ್ನು ಹುಟ್ಟು ಹಾಕಿರುವುದು ಸೂರ್ಯನ ಪ್ರಕಾಶದಷ್ಟೇ ಸ್ಪಷ್ಟ. ಹೀಗಿದ್ದರೂ, ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಂಗಮೇಶ ಸವದತ್ತಿಮಠ ಅವರು ಇದನ್ನು ಸುಳ್ಳು ಎಂದು ಸಾಧಿಸಲು ಹೊರಟಿರುವುದು ಅವರ ಪೂರ್ವಾಗ್ರಹವಲ್ಲದೇ ಬೇರೇನೂ ಅಲ್ಲ’ ಎಂದು ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.

‘ಬುದ್ಧನಂತೆ ಬಸವಣ್ಣನವರೂ ವೈದಿಕ ಧರ್ಮದ ವಿರೋಧದಲ್ಲಿ ಲಿಂಗಾಯತವೆಂಬ ಅವೈದಿಕ ಧರ್ಮವನ್ನು ಸ್ಥಾಪಿಸಿದರು. ಈ ಕಾರಣಕ್ಕಾಗಿಯೇ ಅವರು ಬುದ್ಧ, ಮಹಾವೀರ, ಗುರುನಾನಕ್‌ ಅವರಂತಹ ಅವೈದಿಕ ಧರ್ಮಪ್ರವರ್ತಕರ ಸಾಲಿಗೆ ಸೇರುತ್ತಾರೆ’ ಎಂದು ತಿಳಿಸಿದ್ದಾರೆ. 

‘ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ವಿರೋಧಿಸಿ ದೇಹವನ್ನೇ ದೇವಾಲಯವಾಗಿಸಿದವರು. ಜಾತಿ-ಮತ-ಪಂಥ-ಸ್ತ್ರೀ-ಪುರುಷ ಮತ್ತು ವರ್ಣಾಶ್ರಮಗಳ ಭೇದವನ್ನು ತೊಡೆದು ಹಾಕಿ ಸಮಾನತೆಯ ಸಿದ್ಧಾಂತವನ್ನು ಮುಂಚೂಣಿಗೆ ತಂದರು. ಸ್ತ್ರೀಯರನ್ನು ಶೂದ್ರರೆಂಬ ಹಣೆಪಟ್ಟಿಯಿಂದ ಮುಕ್ತಗೊಳಿಸಿ ಅವರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು. ಅವರ ಕಾಲದ ಶರಣರು ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಎಲ್ಲವೂ ಬಸವಣ್ಣನಿಂದ ಹುಟ್ಟಿದವು ಎಂದು ಹೇಳುವ ಮೂಲಕ ಬಸವಣ್ಣನವರು ಹೊಸಧರ್ಮದ ಪ್ರವರ್ತಕರೆಂಬುದನ್ನು ಸ್ಪಷ್ಟಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಾಮಾಜಿಕ ನ್ಯಾಯಕ್ಕಾಗಿ, ದೇವಾಲಯಗಳಲ್ಲಿ ನಡೆಯುವ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದಕ್ಕಾಗಿ ಇಷ್ಟಲಿಂಗ ಪರಿಕಲ್ಪನೆ ಬಸವಣ್ಣನವರಿಂದ ಮೂಡಿಬಂದುದನ್ನು ಅವರು ಮನಸಾರೆ ಸ್ಮರಿಸಿದ್ದಾರೆ. ‘ವೇದಗಳಿಗೆ ಒರೆಯ ಹಚ್ಚುವೆ, ಆಗಮಗಳ ಮೂಗ ಕೊಯಿವೆ, ತರ್ಕದ ಬೆನ್ನ ಬಾರನೆತ್ತುವೆ’ ಎಂದು ಹೇಳಿದ ಬಸವಣ್ಣನವರು ವೇದಾಗಮಗಳನ್ನು ವಿರೋಧಿಸಿಲ್ಲ ಎಂದು ಹೇಳುವ ಡಾ. ಸವದತ್ತಿಮಠ ಅವರು ಮತ್ತೊಂದೆಡೆ; ವೇದಾಗಮಗಳನ್ನು ವಚನಕಾರರು ಸಾಂದರ್ಭಿಕವಾಗಿ ವಿರೋಧಿಸಿದ್ದಾರೆ ಎನ್ನುತ್ತಾರೆ. ಇಂತಹ ದ್ವಂದ್ವಗಳಿಂದ ಕೂಡಿದ ಅವರು ವೈದಿಕೀಕರಣದ ಆರೋಪ ಎದುರಿಸುತ್ತಿರುವ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಯಾರನ್ನೋ ಮೆಚ್ಚಿಸಲು ಈ ಮಾತು ಹೇಳಿದಂತಿದೆ. ಇವರ ಇಂತಹ ಹೇಳಿಕೆಯಿಂದಾಗಿ ಬಸವಣ್ಣನವರಿಗೆ ಅಪಚಾರ ಮಾಡಿದಂತಾಗಿದೆಯಲ್ಲದೆ ಸಾಹಿತ್ಯ ಪರಿಷತ್ತಿಗೂ ಕಪ್ಪು ಚುಕ್ಕೆಯುಂಟಾಗಿದೆ. ತಮ್ಮ ವೈಯಕ್ತಿಕ ಆಗ್ರಹಗಳಿಗೆ ಸಾಹಿತ್ಯ ಸಮ್ಮೇಳನದಂತಹ ವೇದಿಕೆಯನ್ನು ಯಾರೂ ಬಳಸಿಕೊಳ್ಳಬಾರದು. ಭವಿಷ್ಯದಲ್ಲಿ ಹಾಗೆ ಆಗಬಾರದೆಂಬುದೇ ನಮ್ಮ ಆಶಯವಾಗಿದೆ’ ಎಂದು ತೋಂಟದ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಚೀನತೆಯ ವ್ಯಸನದಲ್ಲಿ ಬಿದ್ದಿರುವ, ವರ್ಣಾಶ್ರಮಗಳನ್ನು ಒಪ್ಪುವ ಮತ್ತು ಜಾತಿ ಶ್ರೇಷ್ಠತೆಯ ರೋಗವನ್ನು ಅಂಟಿಸಿಕೊಂಡಿರುವ ಕೆಲವರಿಗೆ ಬಸವಾದಿ ಶರಣರು ಹುಟ್ಟುಹಾಕಿದ ಹೊಸಧರ್ಮ ಗೋಚರಿಸುವುದಿಲ್ಲ
ಡಾ. ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ ಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು