ಗುರುವಾರ , ಫೆಬ್ರವರಿ 25, 2021
29 °C
ಹೇಮಾವತಿ ಪ್ರತಿಮೆ ಎದುರು ಕಾರ್ಯಕರ್ತರ ಪ್ರತಿಭಟನೆ

ಸಿ.ಎಂ ರಾಜೀನಾಮೆಗೆ ಬಿಜೆಪಿ ಆಗ್ರಹ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಕಾರಣ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹೇಮಾವತಿ ಪ್ರತಿಮೆ ಎದುರು ಧರಣಿ ನಡೆಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮೈತ್ರಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಬಹುಮತ ಕಳೆದುಕೊಂಡಿರುವುದರಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಬಾರದು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯಪಾಲರು ಮಧ್ಯೆಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ‘ಮೈತ್ರಿ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಜನಸಾಮಾನ್ಯರ ಪರವಾದ ಯೋಜನೆಗಳು ಜಾರಿಗೆ ತರುತ್ತಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿಯ ಹಸ್ತಕ್ಷೇಪ ಇಲ್ಲ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿರುವುದರಿಂದ ಬಿಜೆಪಿಗೆ ಬಹುಮತ ದೊರೆತಿದೆ. ಹಾಗಾಗಿ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಚಿವರು ಜನಪರವಾಗಿ ಕಾರ್ಯನಿರ್ವಹಿಸುವ ಬದಲು ಕೇವಲ ಖಾತೆ ಹಂಚಿಕೆ ಗೊಂದಲ ಹಾಗೂ ತಮ್ಮ ಸಮಸ್ಯೆ ಬಗೆಹರಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾ, ನಗರ ಘಟಕದ ಅಧ್ಯಕ್ಷ ಶೋಹನ್ ಬಾಬು, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಮುಖಂಡರಾದ ಮೊಗಣ್ಣ ಗೌಡ, ರೇಣುಕುಮಾರ್‌, ಶಿವನಂಜೇಗೌಡ, ಕದಾಲ್‌ ಲೋಕೇಶ್‌, ಶರತ್, ನಗರಸಭೆ ಸದಸ್ಯರಾದ ಪುನೀತ್‌, ಪ್ರದೀಪ್‌ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು