ಭಾನುವಾರ, ನವೆಂಬರ್ 28, 2021
20 °C
ಪ್ಲಾಸ್ಟಿಕ್‌, ಮದ್ಯದ ಬಾಟಲಿ ಬಿಸಾಡಿ ಬೆಟ್ಟದ ಪರಿಸರ ಹಾಳು

ಸಕಲೇಶಪುರ: ಪ್ರವಾಸಿಗರ ಕೈಬೀಸಿ ಕರೆಯುವ ಕಾಗಿನಹರೆ

ಜಾನೇಕೆರೆ ಆರ್‌. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಬೆಟ್ಟ ಗುಡ್ಡ, ಝರಿ, ಜಲಪಾತ, ಕಾಡು, ಕಾಫಿ, ಏಲಕ್ಕಿ, ತೋಟಗಳನ್ನು ತನ್ನ ಒಡಲಲ್ಲಿ ಹೊಂದಿರುವ ಪಶ್ಚಿಮಘಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆಯುವಷ್ಟು ಸೌಂದರ್ಯ ಹಾಸಿ ಹೊದ್ದುಕೊಂಡಿದೆ.

ತಾಲ್ಲೂಕಿನ ಹಲವು ಪ್ರವಾಸಿ ತಾಣಗಳ ಪೈಕಿ ಕಾಗಿನಹರೆ ಬೆಟ್ಟ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಳ್ವಿಕೆ ನಡೆಸಿದ್ದ ಮೈಸೂರು ಒಡೆಯರ ಕಾಲದಲ್ಲಿ ವಿಶ್ರಾಂತಿಗಾಗಿ ಒಂದು ಸಣ್ಣ ಕೋಟೆ ನಿರ್ಮಿಸಲಾಗಿತ್ತು ಎನ್ನುವುದಕ್ಕೆ ಈಗಲೂ ಅಲ್ಲಿರುವ ಗೋಡೆಗಳು ಸಾಕ್ಷಿ.

ಈ ಕೋಟೆಯ ಮೇಲೆ ನಿಂತರೆ ನಾಲ್ಕು ದಿಕ್ಕುಗಳಲ್ಲಿಯೂ ಆಕಾಶಕ್ಕೆ ಮುಖ ಚಾಚಿಕೊಂಡು ನಿಂತ ಹಸಿರು ಹೊದ್ದ ಬೆಟ್ಟಗಳ ರಮಣೀಯ ನೋಟ ಸೆಳೆಯುತ್ತದೆ. ಕ್ಷಣ ಕ್ಷಣಕ್ಕೂ ಚಲಿಸುವ ಮೋಡಗಳ ನೆರಳು ಬೆಳಕು ಅಲ್ಲಲ್ಲಿ ಬೆಟ್ಟಗಳ ಮೇಲೆ ಸಾಗಿ ಹೋಗುವ ದೃಶ್ಯಕಾವ್ಯ ನೋಡುಗರನ್ನು ಮಂತ್ರಮುಗ್ಧದರನ್ನಾಗಿಸುತ್ತದೆ. ವರ್ಷದಿಂದ ವರ್ಷಕ್ಕೆ  ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಕಾಗಿನಹರೆ ಬೆಟ್ಟ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ (ಹೆತ್ತೂರು, ಬಾಚಳ್ಳಿ, ಅತ್ತಿಹಳ್ಳಿ, ಹೊಂಗಡಹಳ್ಳ ಮಾರ್ಗ)  ಸುಮಾರು 50 ಕಿ.ಮೀ. ದೂರದಲ್ಲಿದೆ. ಸಕಲೇಶಪುರದಿಂದ ಮಾನಹಳ್ಳಿ, ಆಲುವಳ್ಳಿ, ಕಡಗರವಳ್ಳಿ, ನೂದ್ರಹಳ್ಳಿ, ಹೊಂಗಡಹಳ್ಳ ಮಾರ್ಗವಾಗಿ ಸಾಗಿದರೆ ಸುಮಾರು 35 ಕಿ.ಮೀ. ಆಗುತ್ತದೆ. ಕಾಗಿನಹರೆ ಗ್ರಾಮದವರೆಗೂ ಈ ಎರಡೂ ಮಾರ್ಗದಲ್ಲಿ ಉತ್ತಮ ರಸ್ತೆ ವ್ಯವಸ್ಥೆ ಇದೆ.

‘ಕಾಗಿನಹರೆ ಗ್ರಾಮಕ್ಕೆ ಬರುವಂತಹ ಪ್ರವಾಸಿಗರು ವಾಹನಗಳನ್ನು ಗ್ರಾಮದ ಹೊರಭಾಗದಲ್ಲಿಯೇ ನಿಲ್ಲಿಸಬೇಕು. ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಕಾಲ್ನಡಿಗೆಯಲ್ಲಿ ಹೋಗುವುದಕ್ಕೆ ಸಾಧ್ಯವಾಗದಿದ್ದವರನ್ನು ಸ್ಥಳೀಯರ ಜೀಪುಗಳಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು’ ಎಂದು ಕಾಗಿನಹರೆ ಗ್ರಾಮದ ಕೃಷ್ಣೇಗೌಡ ಹೇಳಿದರು.

*
ಪ್ರವಾಸಿಗರು ತ್ಯಾಜ್ಯ, ಮದ್ಯದ ಬಾಟಲಿ ಒಡೆದು ಹಾಕಿ, ಬೆಟ್ಟದ ಪರಿಸರ ಹಾಳು ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ನೋಡಿಕೊಳ್ಳಲು ಗ್ರಾ.ಪಂ.ಗಾದರೂ ವಹಿಸಬೇಕು.
-ಯತೀಶ್‌ ಜಗಾಟ, ಸದಸ್ಯ, ಹೊಂಗಡಹಳ್ಳ ಗ್ರಾ.ಪಂ

*
ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟರೆ ಸ್ಥಳೀಯವಾಗಿ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಪಶ್ಚಿಮಘಟ್ಟ ಸಂರಕ್ಷಣೆ ಜೊತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
-ಪ್ರತೀಕ್‌ ಬಯಾಲ್‌, ಉಪವಿಭಾಗಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು