ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಲ | ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಕಾರ

ಮತ್ತೆ ಮತ್ತೆ ಸಂಭವಿಸುವ ಅಪಘಾತಗಳು: ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ
Published 18 ಮೇ 2024, 5:50 IST
Last Updated 18 ಮೇ 2024, 5:50 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೆ ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಗ್ರಾಮೀಣ ಜನರ ಆರೋಪ.

ಗುತ್ತಲದಿಂದ ಸೊಮನಕಟ್ಟಿ ಗ್ರಾಮದವರೆಗಿನ ರಸ್ತೆ ಕೂಡಲೆ ಅಭಿವೃದ್ಧಿಪಡಿಸಬೇಕೆಂದು ಬೈಕ್ ಸವಾರರು ಆಗ್ರಹಿಸಿದ್ದಾರೆ. ನೆಗಳೂರ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯ ದೊಡ್ಡ ತಗ್ಗುಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಾಂದಾರ ಕೆರೆ ಇದ್ದು, ಕೆರೆಗೆ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ರಸ್ತೆ ಕುಸಿದು ಬಿದ್ದ ಕಾರಣ ರಸ್ತೆಗೆ ಮಣ್ಣಿನ ಗುಡ್ಡೆ ಹಾಕಿದ್ದಾರೆ. ಹೀಗಾಗಿ ರಸ್ತೆ ಕಿರಿದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಪಘಾತ ಸಂಭವಿಸುವ ಮುನ್ನ ಕುಸಿದು ಬಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಎಂದು ನೆಗಳೂರ ಗ್ರಾಮದ ಜನರು ಆಗ್ರಹಿಸಿದ್ದಾರೆ.

ಹಾವನೂರ ಗ್ರಾಮದಿಂದ ಹುರಳಿಹಾಳ, ಗಳಗನಾಥ ಮಾರ್ಗವಾಗಿ ಬೆಳವಗಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಮಧ್ಯ ತಗ್ಗುಗಳು ಬಿದ್ದಿವೆ ರಸ್ತೆಯ ತುಂಬ ದೊಡ್ಡ ದೊಡ್ಡ ಕಲ್ಲುಗಳು ಬಿದ್ದ ಕಾರಣ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಬೇಕು’ ಎಂಬುದು ಗಳಗನಾಥ ಗ್ರಾಮದ ಜನರ ಆಗ್ರಹ.

‘ರೈತರು ರಸ್ತೆಗಳನ್ನು ಅಗೆದು ಪೈಪ್‌ಲೈನ್ ಹಾಕಿಕೊಂಡಿರುತ್ತಾರೆ. ಆದರೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚದ ಕಾರಣ ಅಂತಹ ಸ್ಥಳಗಳಲ್ಲಿ ಬೈಕ್ ಅಪಘಾತ ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಉಬ್ಬಿನಿಂದ ಜೀವ ಕಳೆದುಕೊಂಡವರ ಸಂಖ್ಯೆ ಜಾಸ್ತಿಯಾಗುತ್ತಿದ್ದು’ ಎಂದು ಸವಾರರು ಆರೋಪಿಸುತ್ತಾರೆ.

‘ಗುತ್ತಲದಿಂದ ಹಾವೇರಿ ರಸ್ತೆ ಸಂಪೂರ್ಣ ಹಾಳಾಗಿದೆ. ಸದ್ಯ ರಸ್ತೆ ಅಭಿವೃದ್ಧಿ ಕಾರ್ಯ ಮುಂದುವರಿದಿದೆ. ಹಾವೇರಿಯಿಂದ ಸೋಮನಕಟ್ಟಿ ಗ್ರಾಮದವರೆಗೆ ಮಾತ್ರ ಅಭಿವೃದ್ಧಿ ಪಡಿಸಲಾಗಿದೆ. 5 ಮೀಟರ್ ಇದ್ದ ರಸ್ತೆಯನ್ನು 7 ಮೀಟರ್‌ಗೆ ವಿಸ್ತರಿಸಲಾಗಿದೆ. ಗುತ್ತಲದವರೆ ಮಾತ್ರ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿದೆ. ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಗೆ ಸಮಸ್ಯೆಯಾಗಿದೆ. ಶೀಘ್ರವೇ ಸೋಮನಕಟ್ಟಿ ಗ್ರಾಮದಿಂದ ಗುತ್ತಲದವರೆಗೆ ರಸ್ತೆ ಅಭಿವೃದ್ಧಿಪಡಿಸಿ, ತಿರುವು ಮತ್ತು ಅಪಘಾತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀಮಂತ ಹದಗಲ್ ತಿಳಿಸಿದ್ದಾರೆ.

ಗುತ್ತಲ–ಹಾವೇರಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದರೂ ಅನುದಾನದ ಕೊರತೆಯಿಂದ ಕಾರ್ಯ ಅರ್ಧಕ್ಕೆ ನಿಂತಿದೆ. ರಸ್ತೆ ಅಭಿವೃದ್ಧಿ ಕಾರ್ಯ ಗುತ್ತಲದವರಗೆ ಮುಂದುವರೆಯಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ರಸ್ತೆಗಳಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭಿಸಬೇಕು’ ಎಂದು ಹಾವೇರಿ ತಾಲ್ಲೂಕು ಕರವೇ ಅಧ್ಯಕ್ಷ ಹಾಲೇಶ ಹಾಲಣ್ಣನವರ ಆಗ್ರಹಿಸಿದ್ದಾರೆ.

ಸೋಮನಕಟ್ಟಿ ಗ್ರಾಮದಿಂದ ಗುತ್ತಲದವರೆಗೆ ರಸ್ತೆ ಅಭಿವೃದ್ಧಿಗೆ ₹20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ನೀತಿಸಂಹಿತೆ ಮುಗಿದ ನಂತರ ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲಾಗುವುದು
ರುದ್ರಪ್ಪ ಲಮಾಣಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT