ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ರೈತರು ಸಹಿ ಹಾಕಿದರಷ್ಟೇ ವ್ಯವಹಾರ: ಅಹಿತಕರ ಘಟನೆ ತಡೆಗಟ್ಟಲು ಹೊಸ ನಿಯಮ

Published 14 ಮಾರ್ಚ್ 2024, 23:53 IST
Last Updated 14 ಮಾರ್ಚ್ 2024, 23:53 IST
ಅಕ್ಷರ ಗಾತ್ರ

ಹಾವೇರಿ: ‘ನಾನು ಟೆಂಡರ್‌ ದರಕ್ಕೆ ಅನುಗುಣವಾಗಿ ನಿಮ್ಮ ಅಂಗಡಿಯಲ್ಲಿ ಮೆಣಸಿನಕಾಯಿ ಮಾರುವೆ. ನನಗೆ ಟೆಂಡರ್‌ ಧಾರಣೆ ಒಪ್ಪಿಗೆ ಆಗದಿದ್ದರೆ, ಮರುದಿನದ ಟೆಂಡರ್‌ಗೆ ಇಟ್ಟು ಮಾರುವೆ. ತಂಟೆ, ತಕರಾರು ಮಾಡಲ್ಲ...’ ಎಂದು ರೈತರು ಕಾಗದದ ಮೇಲೆ ಸಹಿ ಹಾಕಿದರಷ್ಟೇ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಇನ್ನು ಮುಂದೆ ವ್ಯವಹಾರ ನಡೆಸಬಹುದಾಗಿದೆ. 

ದರ ಕುಸಿದಿದೆ ಎಂದು ಆರೋಪಿಸಿ ಮೆಣಸಿನಕಾಯಿ ಬೆಳೆಗಾರರು ಈಚೆಗೆ ಗಲಭೆ ನಡೆಸಿ, ಎಪಿಎಂಸಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯ ಬೆನ್ನಲ್ಲೇ ಬ್ಯಾಡಗಿ ವರ್ತಕರ ಸಂಘ ಇಂಥ ಹೊಸ ನಿಯಮ ರೂಪಿಸಿದೆ.

‘ಟೆಂಡರ್‌ಗೆ ಇಟ್ಟ ಮಾಲ್‌ನ್ನು ತೂಕಕ್ಕೆ ಕೊಡುವ ಅಥವಾ ತಿರಸ್ಕರಿಸುವ ಅಧಿಕಾರ ರೈತರಿಗೆ ಇದೆ. ತಿರಸ್ಕೃತ ಲಾಟುಗಳ ವಿವರ ‘ರೆಫ್ಯೂಸ್‌ ಫಾರ್ಮ್‌’ನಲ್ಲಿ ಎಲ್ಲ ದಲಾಲರು ಕಡ್ಡಾಯವಾಗಿ ಎಪಿಎಂಸಿಗೆ ವರದಿ ಮಾಡಬೇಕು’ ಎಂದು ವರ್ತಕರ ಸಂಘ ತಿಳಿಸಿದೆ. 

‘ದಲಾಲರು ತಮ್ಮ ಅಂಗಡಿಯ ಹಮಾಲರಿಂದ ಮೆಣಸಿನಕಾಯಿ ಚೀಲ ಕಟ್ಟಿಸಬೇಕು. ರೈತರು ಖುಷಿಯಿಂದ ಸ್ವಯಂಪ್ರೇರಿತರಾಗಿ ಕೊಟ್ಟರೆ ಮಾತ್ರ ಪಡಿಗಾಯಿ ಪಡೆಯಬೇಕು’ ಎಂಬ ನಿಯಮವೂ ಜಾರಿಗೊಳಿಸಿದೆ. 

ಒಣಪಡಿ ಮೆಣಸಿನಕಾಯಿ ತನ್ನಿ:

‘ಹೆಚ್ಚು ನೀರು ಸಿಂಪಡಿಸಿ ತಂ‌ದ ಮೆಣಸಿನಕಾಯಿ ಚೀಲಗಳನ್ನು ದಲಾಲರು ಟೆಂಡರ್‌ಗೆ ಇಡದೇ, ಅವುಗಳನ್ನು ಸುರಿದು ತುಂಬಿಕೊಡುವಂತೆ ರೈತರಿಗೆ ತಿಳಿಸಬೇಕು. ಒದ್ದೆ ಮೆಣಸಿನಕಾಯಿಯನ್ನು ದಾಸ್ತಾನು ಮಾಡಿದರೆ ಫಂಗಸ್‌ ಸೃಷ್ಟಿಯಾಗಿ ಹಾಳಾಗುತ್ತದೆ. ಮಾರುಕಟ್ಟೆಗೆ ಸಾಧ್ಯವಾದಷ್ಟೂ ಒಣಪಡಿ ಮೆಣಸಿನಕಾಯಿ ತರಲು ರೈತರಿಗೆ ತಿಳಿವಳಿಕೆ ನೀಡಬೇಕು’ ಎಂದು ವರ್ತಕರ ಸಂಘ ಸೂಚಿಸಿದೆ. 

ಸಚಿವರ ಸೂಚನೆಗೆ ವರ್ತಕರ ಸಮ್ಮತಿ:

ವಾರದಲ್ಲಿ ಒಂದು ದಿನ (ಪ್ರತಿ ಸೋಮವಾರ) ಮೆಣಸಿನಕಾಯಿ ವಹಿವಾಟು ನಡೆಸುವುದರಿಂದ ಆವಕ ಹೆಚ್ಚಾಗಿ, ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ವಾರದಲ್ಲಿ ಎರಡು ದಿನ (ಸೋಮವಾರ ಮತ್ತು ಗುರುವಾರ) ವಹಿವಾಟು ನಡೆಸಲು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಸೂಚಿಸಿದ್ದಾರೆ. ಇದಕ್ಕೆ ವರ್ತಕರ ಸಂಘ ಸಮ್ಮತಿ ನೀಡಿದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅಹಿತಕರ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ರೈತರಿಂದ ಸಹಿ ಪಡೆಯುವ ಹೊಸ ನಿಯಮ ಜಾರಿಗೆ ತಂದಿದ್ದೇವೆ
– ಸುರೇಶಗೌಡ್ರ ಪಾಟೀಲ ಅಧ್ಯಕ್ಷ ಬ್ಯಾಡಗಿ ವರ್ತಕರ ಸಂಘ
ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಉಪ ಮಾರುಕಟ್ಟೆಗೆ ₹10 ಕೋಟಿ ವೆಚ್ಚದ ‘ಸರ್ಕಾರಿ ಶೈತ್ಯಾಗಾರ’ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ
– ಎಚ್‌.ವೈ.ಸತೀಶ್‌ ಕಾರ್ಯದರ್ಶಿ ಬ್ಯಾಡಗಿ ಎಪಿಎಂಸಿ
ಶೈತ್ಯಾಗಾರಗಳು ಭರ್ತಿ
ಬ್ಯಾಡಗಿ ಪಟ್ಟಣ ಮತ್ತು ಸುತ್ತಮುತ್ತ ಇರುವ 32 ಖಾಸಗಿ ಶೈತ್ಯಾಗಾರಗಳು (ಕೋಲ್ಡ್‌ ಸ್ಟೋರೇಜ್‌) ಮೆಣಸಿನಕಾಯಿ ದಾಸ್ತಾನಿನಿಂದ ಬಹುತೇಕ ಭರ್ತಿಯಾಗಿವೆ. ಹೊಸದಾಗಿ ಬಂದ ಆವಕವನ್ನು ಇಡಲು ಜಾಗ ಇಲ್ಲದಂತಾಗಿದೆ. ಇದು ವರ್ತಕರು ಮತ್ತು ರೈತರ ಆತಂಕಕ್ಕೆ ಕಾರಣವಾಗಿದೆ.  ‘ಹಿಂದಿನ ವರ್ಷದ 9 ಲಕ್ಷ ಮೆಣಸಿನಕಾಯಿ ಚೀಲಗಳು ಇನ್ನೂ ಶೈತ್ಯಾಗಾರಗಳಲ್ಲೇ ಇವೆ. ಉತ್ತಮ ದರ ಸಿಗದ ಕಾರಣದಿಂದ ಹೆಚ್ಚಿನ ರೈತರು ಮೆಣಸಿನಕಾಯಿ ಚೀಲಗಳನ್ನು ಶೈತ್ಯಾಗಾರಗಳಲ್ಲಿ ಇಟ್ಟಿದ್ದಾರೆ. ಸರ್ಕಾರಕ್ಕೆ ಪ್ರತಿ ವರ್ಷ ಬ್ಯಾಡಗಿ ಎಪಿಎಂಸಿಯಿಂದ ₹15 ಕೋಟಿ ಸೆಸ್‌ ಕಟ್ಟುತ್ತೇವೆ. ಈ ಹಣದಲ್ಲಿ ಸರ್ಕಾರ ಶೈತ್ಯಾಗಾರ ಕಟ್ಟುವ ಬದಲು ಬೇರೆ ಉದ್ದೇಶಕ್ಕೆ ಹಣ ಬಳಕೆ ಮಾಡುತ್ತಿದೆ’ ಎಂದು ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್‌.ಮೋರಿಗೇರಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT